ಅಚ್ಯುತರಾಯನೆಂಬ ಮುಂದಿನ ಅರಸನು ೧೫೩೯ ನೆಯ ಇಸವಿಯಲ್ಲಿ "ಆನಂದನಿಧಿ"ಯೆಂಬ ದೊಡ್ಡ ದಾನವನ್ನು ಮಾಡಿದನು.
ಆದರೆ ಅವನ ತರುವಾಯ ವಿಜಯನಗರದ ರಾಜ್ಯವು ಬಹಳ ದಿವಸ ಬಾಳಲಿಲ್ಲ. ಕಡೆಯಲ್ಲಿ, ಸದಾಶಿವರಾಯನ ಆಳಿಕೆಯಲ್ಲಿ ಕೃಷ್ಣ ದೇವರಾಯನ ಅಳಿಯನಾದ ರಾಮರಾಜನೆಂಬವನ ಕೈಯಲ್ಲಿ ರಾಜ್ಯ ಸೂತ್ರಗಳಿದ್ದುವು. ವಿಜಾಪುರ, ಗೋವಳ ಕೊಂಡ, ಅಹಮ್ಮದನಗರ, ಬೀದರ, ಈ ನಾಲ್ಕು ರಾಜ್ಯಗಳ ಬಾದಶಹಗಳೂ ಒಕ್ಕಟ್ಟಾಗಿ ಒಳಸಂಚು ಮಾಡಿ ಅವನೊಡನೆ ಯುದ್ಧಕ್ಕೆ ಅನುವಾದರು. ರಾಮರಾಜನು ಅತ್ಯಂತ ಶೂರನಾಗಿದ್ದನು, ಅವನಿಗೆ ಆಗ ೯೬ ವರುಷವಾಗಿತ್ತು, ಇಂಥ ಮುಪ್ಪಿನ ಮುದುಕನಾದರೂ ಅವನು ೩೦ ವರುಷದ ತರುಣನಂತೆ ಉತ್ಸಾಹವುಳ್ಳವನಾಗಿದ್ದನಂತೆ ! ಅವನು ತನ್ನ ದೊಡ್ಡ ಸೈನ್ಯದೊಂದಿಗೆ ತಾಳಿಕೋಟೆಯಲ್ಲಿ ಮುಸಲ್ಮಾನರ ಒಕ್ಕಟ್ಟಾದ ಮಹಾಸೈನ್ಯಕ್ಕೆ ಇದಿರಾದನು. ಅಲ್ಲಿ ೧೫೬೫ ನೆಯ ಇಸವಿಯ ಜನವರಿ ೨೩ ರಲ್ಲಿ ಅತ್ಯಂತ ತುಮುಲ ಕಾಳಗವೆಸಗಿತು. ರಾಮರಾಜನ ಪಕ್ಷದ ವೆಂಕಟಾದ್ರಿಯೂ, ಇಳೋತ್ತಮರಾಜನೂ ಬಹು ಪರಾಕ್ರಮದಿಂದ ಹೋರಾಡಿ ಹಗೆಗಳನ್ನು ಓಡಿಸುವ ಸಂಧಿಯಲ್ಲಿ, ರಾಮರಾಜನು ತಾನು ಮೇನೆಯಲ್ಲಿ ಕುಳಿತು ತನ್ನ ಸೈನ್ಯದವರಿಗೆ ಧೈರ್ಯಕೊಡುವುದಕ್ಕಾಗಿ ತಿರುಗಾಡುತ್ತಿದ್ದನು. ಅಷ್ಟರೊಳಗೆ ಶತ್ರುಗಳ ಮದ್ದಾನೆ ಮೈಮೇಲೆ ಬಿದ್ದುದನ್ನು ನೋಡಿ ಬೋಯಿಗಳು ಅಂಜಿ ತಮ್ಮ ಜೀವದಾಶೆಯಿಂದ ಮೇನೆಯನ್ನು ಚೆಲ್ಲಿ ಓಡಿಹೋಗಲಾಗಿ, ನಿಜಾಮ ಶಹನು ರಾಮರಾಜನನ್ನು ಸೆರೆಹಿಡಿದು ಅಲ್ಲಿಯೇ ಅವನ ತಲೆಯನ್ನು ಕೊಯ್ದು ಭಲ್ಯಕ್ಕೆ ಚುಚ್ಚಿ ಸೈನ್ಯದೊಳಗೆ ತಿರುಗಿಸಿದನು. ಅದನ್ನು ನೋಡಿ ವಿಜಯನಗರದ ದಂಡಿನವರು ಧೈರ್ಯಗುಂದಿ ಬೆನ್ನು ತೋರಿಸಿದರು. ಆಗ ಮುಸಲ್ಮಾನರು ಮಾಡಿದ ಕೊಲೆಗೆ ಅಳವಿಲ್ಲ; ರಕ್ತದ ಕಾಲುವೆಗಳು ಹರಿದುವು. ಈ ಮೇರೆಗೆ ಜಯವಾದ ಕೂಡಲೆ ಮುಸಲ್ಮಾನರು ನೆಟ್ಟಗೆ ವಿಜಯನಗರಕ್ಕೆ ಸಾಗಿ, ತಮಗೆ ಜಯವು ಸಿಕ್ಕೇ ಸಿಕ್ಕುವುದೆಂಬ ಭರವಸದಿಂದ ಮೈ ಮರೆತಿದ್ದ ಪಟ್ಟಣದ ನಿವಾಸಿಗಳನ್ನಲ್ಲಿ ಕೈಗೆ ಸಿಕ್ಕಿದಂತೆ ಕೊಂದು, ಪಟ್ಟಣವನ್ನು ಯಥೇಚ್ಚವಾಗಿ ಸುಲಿಗೆಮಾಡಿದರು.
ಈ ಮೇರೆಗೆ ಸುಮಾರು ೨೩೦ ವರ್ಷ ಘನತೆಯಿಂದ ಮೆರೆದ ವೈಭವ ಸಂಪನ್ನರಾಷ್ಟ್ರವು ಆಕಸ್ಮಿಕ ಕಾರಣದಿಂದ ಅರ್ಧ ನಿಮಿಷದಲ್ಲಿ ಮಾಯವಾಯಿತು.
ಪುಟ:ಕರ್ನಾಟಕ ಗತವೈಭವ.djvu/೧೧೨
ಈ ಪುಟವನ್ನು ಪ್ರಕಟಿಸಲಾಗಿದೆ
೧೧ನೆಯ ಪ್ರಕರಣ - ವಿಜಯನಗರ ಅರಸರು
೮೫