೮ ಅಥವಾ ೯ನೆಯ ಶತಮಾನದಲ್ಲಿಯೂ ಬೋಧಿಸಿದರು, ಜೈನರ ಪ್ರಮುಖ ಗ್ರಂಥಗಳಿಗೆಲ್ಲ ನೃಪತುಂಗನ ಗುರುವಾದ ಜಿನಸೇನಾಚಾರ್ಯರೇ ಪ್ರಣೇತಾರರು. ತರ್ಕಶಾಸ್ತ್ರಾದಿ ಪಾರಗನಾದ ಲಕುಲೀಶನು ಶೈವೋಪಾಸನೆಯನ್ನು ಪ್ರಚಾರಗೊಳಿಸಿದನು. ಇವನು ಒಂದನೆಯ ಶತಮಾನದಲ್ಲಿದ್ದನೆಂದು ಹೇಳುತ್ತಾರೆ. ಶಂಕರಾಚಾರ್ಯರು ೮ನೆಯ ಶತಕದಲ್ಲಿ ಇದ್ದರು. ೧೨ನೆಯ ಶತಮಾನದಲ್ಲಿ ರಾಮಾನುಜಾಚಾರ್ಯರ ಉದಯವು, ೧೨ನೆಯ ಶತಮಾನದ ಮಧ್ಯಭಾಗದಲ್ಲಿ ವೀರಶೈವಮತವು ಬಸವೇಶ್ವರ ಚನ್ನಬಸವರಿಂದ ಉದ್ಧರಿಸಲ್ಪಟ್ಟಿತು. ೧೩ ನೆಯ ಶತಮಾನದಲ್ಲಿ ಮಧ್ವಾಚಾರ್ಯರು ದ್ವೈತಮತವನ್ನು ಸ್ಥಾಪಿಸಿದರು. ಇದರ ಮೇಲಿಂದ ಈಗ ಭರತಖಂಡದಲ್ಲೆಲ್ಲ ಪ್ರಾಮುಖ್ಯ ಹೊಂದಿ ಪ್ರಚಲಿತವಿರುವ ಮತಗಳು ಮೊದಲು ಕರ್ನಾಟಕದಲ್ಲಿಯೇ ಹುಟ್ಟಿದುವೆಂಬುದನ್ನು ಒಡೆದು ಹೇಳಬೇಕಾದುದಿಲ್ಲ. ಒಂದು ಬಗೆಯಿಂದ ನೋಡಲು, ಇಡೀ ಹಿಂದೂ ದೇಶವೇ ಧರ್ಮಾಚಾರ್ಯರ ವಿಷಯದಲ್ಲಿ ಕರ್ನಾಟಕಕ್ಕೆ ಋಣಿಯಾಗಿರುವುದೆಂದರೂ ಅತಿಶಯೋಕ್ತಿ ದೋಷವು ಬಾರದು. ತಮ್ಮ ನಾಡಿನ ಈ ಅಸಾಧಾರಣವಾದ ಧಾರ್ಮಿಕ ಸಂಪತ್ತಿಗಾಗಿ ಕನ್ನಡಿಗರು ಅಭಿಮಾನಪಡುವುದು ಯಥಾರ್ಥವಾಗದೇ !
ಇನ್ನು, ನಮ್ಮ ಅರಸರ ಪರಧರ್ಮಸಹಿಷ್ಣುತೆಯನ್ನು ವರ್ಣಿಸುವ. ಇದು ನಮ್ಮ ರಾಷ್ಟ್ರೀಯ ಸದ್ಗುಣವಾಗಿದೆ. ತನ್ನ ಬುದ್ಧಿ ಸಾಮರ್ಥ್ಯದಿಂದ ಮಾತ್ರವೇ ನಮ್ಮ ಧರ್ಮಗುರುಗಳು ಜನರ ಮೇಲೆ ತಮ್ಮ ವರ್ಚಸ್ಸನ್ನು ಕೂಡಿಸುತ್ತಿದ್ದರು. ಅಲ್ಲದೆ, ಮಿಕ್ಕ ಯಾವ ಉಪಾಯಗಳನ್ನೂ ಅವರು ಅವಲಂಬಿಸಲಿಲ್ಲ. ನಮ್ಮ ಅರಸರೂ, ತಮ್ಮ ಪ್ರಜೆಗಳು ತಮಗೆ ಇಷ್ಟ ತೋರಿದ ಧರ್ಮವನ್ನೇ ಅನುಸರಿಸಬೇಕೆಂದು ಕಟ್ಟು ಮಾಡಿದ್ದರು. ಹೀಗಿರುವುದರಿಂದ, ಆಯಾಕಾಲದ ರಾಜರು ಜೈನರೇ ಆಗಿರಲಿ, ಬೌದ್ದರೇ ಆಗಿರಲಿ, ಶೈವರೇ ಆಗಿರಲಿ ಅಥವಾ ವೈಷ್ಣವರೇ ಆಗಿರಲಿ, ಪ್ರತಿಯೊಂದು ಧರ್ಮದವರನ್ನು ಸಮಾನವಾಗಿಯೇ ಭಾವಿಸುತ್ತಿದ್ದರು. ಈ ಅವರ ಧರ್ಮೌದಾರ್ಯದ ದೆಸೆಯಿಂದ ಇಂಥಿಂಥ ರಾಜರು ಇಂಥಿಂಥ ಧರ್ಮದವರಾಗಿದ್ದರೆಂಬುದನ್ನು ನಿಷ್ಕರ್ಷಿಸುವುದೇ ಕಷ್ಟವಾಗಿರುತ್ತದೆ. ಆದರೂ ಕದಂಬ ಗಂಗರು ಜೈನರೆಂದೂ, ಬಾದಾಮಿಯ ಚಾಲುಕ್ಯರು ವೈಷ್ಣವರೆಂದೂ, ರಾಷ್ಟ್ರಕೂಟರಲ್ಲಿ ಕೆಲವರು ಶೈವರು ಕೆಲವರು ಜೈನರೆಂದೂ, ಕಲ್ಯಾಣ ಚಾಲುಕ್ಯ