ರಾಷ್ಟ್ರಕೂಟರ ಕಾಲಕ್ಕಂತೂ ಕನ್ನಡನುಡಿಗೆ ಮತ್ತಷ್ಟು ಹೆಚ್ಚಿನ ಪ್ರಾಶಸ್ತ್ಯವು ಪ್ರಾಪ್ತವಾಯಿತು. ರಾಷ್ಟ್ರಕೂಟದ ಅರಸನಾದ ನೃಪತುಂಗನು ಸ್ವತಃ ವಾಙ್ಮಯ ಪ್ರಭುವಾಗಿರುವನಲ್ಲದೆ, ಕನ್ನಡಕ್ಕೆ ಒಳ್ಳೆ ಆಶ್ರಯವಾಗಿದ್ದನು. ಇವನು ಬರೆದ 'ಕವಿರಾಜಮಾರ್ಗ' ವೆಂಬ ಅಲಂಕಾರ ಗ್ರಂಥವು ಈಗ ಉಪಲಬ್ಧವಿರುವ ಗ್ರಂಥಗಳಲ್ಲಿ ಅತ್ಯಂತ ಪ್ರಾಚೀನವಾದುದು (೯ನೆಯ ಶತಕ), ಈ ನೃಪತುಂಗನು ಸಂಸ್ಕೃತದಲ್ಲಿಯೂ 'ಪ್ರಶೋತ್ತರಮಾಲಾ' ಎಂಬ ಗ್ರಂಥವನ್ನು ರಚಿಸಿರುವನು. ಈ ಗ್ರಂಥವು ತಿಬೇಟ ಭಾಷೆಯಲ್ಲಿ ಪರಿವರ್ತಿತವಾಗಿರುವ ಸಂಗತಿಯನ್ನು 'ಸಿಫಸ' ಎಂಬವರು ಗೊತ್ತುಹಿಡಿದಿದ್ದಾರೆ. ಕನ್ನಡನಾಡು, ಕನ್ನಡಿಗರು, ಕನ್ನಡ ಭಾಷೆ ಇವುಗಳ ಬಗ್ಗೆ ನೃಪತುಂಗನಲ್ಲಿರುವ ಆದರಾತಿಶಯವು ಅವನ ಗ್ರಂಥದಿಂದ ಚನ್ನಾಗಿ ತೋರ್ಪಡುತ್ತದೆ. ಇವನ ಕಾಲದಲ್ಲಿದ್ದ ಬಂಕೇಶನೆಂಬ ಸೇನಾಪತಿಯ ಹೆಂಡತಿ 'ವಿಜಯಾ' ಎಂಬವಳು ಒಂದು ಸಂಸ್ಕೃತ ಕಾವ್ಯವನ್ನು ಬರೆದಿರುವುದಾಗಿ ತಿಳಿಯಬರುತ್ತದೆ. ಅದರೊಳಗಿನ ಒಂದು ಶ್ಲೋಕವನ್ನು ಇಲ್ಲಿ ಉದ್ಧರಿಸುವೆವು.
सरस्वतीव कर्णाटी विजयांका जयत्यसौ ।
या वैदर्भगिरां वासः कालिदासादनन्तरम् ॥
"ಕಾಳಿದಾಸನ ತರುವಾಯ ವೈದರ್ಭಶೈಲಿಗೆ ಆಶ್ರಯಕೊಟ್ಟ ವಿಜಯಾ ಎಂಬ ಬಿರುದು ಕರ್ನಾಟಿಯು, ಪ್ರತಿಸರಸ್ವತಿಯಂತೆ ಮೆರೆಯುತ್ತಿರುವಳು.” ಅಕಲಂಕ, ಗುಣ ನಂದಿ, ಪೊನ್ನ ಮೊದಲಾದ ಕವಿಗಳು ಈತನ ಆಳಿಕೆಯಲ್ಲಿಯೇ ಬೆಳಕಿಗೆ ಬಂದರು, ಹಲಾಯುಧನು ರಚಿಸಿದ ಕವಿರಹಸ್ಯ ಎಂಬ ಗ್ರಂಥಕ್ಕೆ ರಾಷ್ಟ್ರಕೂಟದ ಅರಸನಾದ ಕೃಷ್ಣನೇ ನಾಯಕನಾಗಿದ್ದಾನೆ. ಪ್ರಸಿದ್ದ ಜೈನ ಕವಿಗಳಾದ ಜಿನಸೇನ ಮತ್ತು ಗುಣಭದ್ರ ಇವರೀರ್ವರೂ ರಾಷ್ಟ್ರಕೂಟರ ಆಸ್ಥಾನಪಂಡಿತರಾಗಿದ್ದರು.
ಹೊಸಚಾಲುಕ್ಯರ ಆಡಳಿತದಲ್ಲಿ ಕನ್ನಡಭಾಷೆಯು ಮತ್ತಷ್ಟು ಹೆಚ್ಚು ಪ್ರಗಲ್ಭಸ್ಥಿತಿಗೆ ಬಂದಿತು. ಇವರ ಕಾಲಕ್ಕೆ ಕರ್ನಾಟಕದ ರಾಜ್ಯ ವಿಸ್ತಾರವು ಪರಮಾವಧಿಯನ್ನು ಹೊಂದಿದಂತೆ ಭಾಷೆಯೂ ಪರಿಣತಾವಸ್ಥೆಯನ್ನು ಹೊಂದಿತು. ಕರ್ನಾಟಕದ ಮಹಾಮಹಾ ಕವಿಗಳೆಲ್ಲರೂ ಸಾಧಾರಣವಾಗಿ ಇವರ ಆಳಿಕೆ