ಆದುದರಿಂದ, ಕೊನೆಗೆ ನಮ್ಮ ಕನ್ನಡ-ಬಾಂಧವರಿಗೆ ಕೈ ಜೋಡಿಸಿ ಪುನಃ ಪುನಃ ಹೇಳುವುದೇನೆಂದರೆ, ಕನ್ನಡಿಗರೇ, ನಾವು ನಮ್ಮ ಆಲಸ್ಯವನ್ನು ತಳ್ಳೋಣ; ಭ್ರಾಮಕ ಕಲ್ಪನೆಗಳನ್ನು ಬಿಟ್ಟು ಬಿಡೋಣ; ಮತ್ತು ಮುಂದಿನ ಮಾರ್ಗಕ್ಕೆ ಹತ್ತೋಣ. ಪಾತಾಳಕ್ಕಿಳಿದ ನಮ್ಮ ಕರ್ನಾಟಕದ ಆರ್ಯ ಸಂಸ್ಕೃತಿಯನ್ನು ನಾವು ಉದ್ಧರಿಸದೆ ಇನ್ನಾರು ಉದ್ಧರಿಸುವವರು? ಕನ್ನಡಿಗರು ಹೇಡಿಗಳು, ಹಿಂದುಳಿದವರು, ಅಭಿಮಾನಶೂನ್ಯರು ಎಂದು ಮೊದಲಾದ ಕರ್ಣಕಟುವಾದ ನುಡಿಗಳಿಂದ ನಮ್ಮನ್ನು ಚುಚ್ಚುವವರಿಗೆ ನಾವು ನಮ್ಮ ಕ್ರಿಯಾಶಕ್ತಿಯಿಂದ ಉತ್ತರ ಕೊಡೋಣ. ಸಾಯಲಾದ ಕರ್ನಾಟಕಕ್ಕೆ ಇತಿಹಾಸದ ಸಂಜೀವನಿ ಮಾತ್ರೆಯನ್ನು ಹಾಕಿ ಚೇತರಗೊಳಿಸೋಣ. ನಮ್ಮ ಆಶಾವೃಕ್ಷವನ್ನು ಕೊಳೆಯಿಸಿಬಿಡುವಂಥ ಹುಳಗಳನ್ನು ಕೊಲ್ಲಲು ಇತಿಹಾಸವೇ ಮದ್ದು. ಕನ್ನಡಿಗರೇ, "ಕರ್ನಾಟಕ”ವೆಂಬ ಒಂದು ಶಬ್ದದಲ್ಲಿ, ಎಂಥ ಅದ್ಭುತವಾದ ಮಾಂತ್ರಿಕ ಶಕ್ತಿಯು ತುಂಬಿರುತ್ತದೆಂಬುದನ್ನು ಲಕ್ಷ್ಯಕ್ಕೆ ತನ್ನಿರಿ! ಕರ್ನಾಟಕದ ಅರಸರು ಹೋದರು! ಕವಿಗಳು ಹೋದರು ! ಸಂಸತ್ತು ಹೋಯಿತು! ವೈಭವವು ಹೋಯಿತು! ಆದರೆ 'ಕರ್ನಾಟಕ' ಎಂಬ ಶಬ್ದವು ಮಾತ್ರ ಇನ್ನೂ ಉಳಿದಿದೆ, ಅದು ದ್ರೌಪದಿಯ ಅಕ್ಷಯ ಪಾತ್ರೆಯೊಳಗಿನ ಅಗುಳಿನಂತಿರುತ್ತದೆ. ಶ್ರೀಕೃಷ್ಣ ಪರಮಾತ್ಮನ ಕೃಪೆಯಿಂದ ನಾವು ಇದೊಂದು ಅಗುಳಿನಿಂದ ಸಾವಿರಾರು ಜನರ ಹಸಿವೆಯನ್ನು ಹಿಂಗಿಸಬಹುದು. ಆದಕಾರಣ, ಕನ್ನಡಿಗರೇ, ಕರ್ನಾಟಕ ಸಂಸ್ಕೃತಿಯೆಂಬ ಗುಪ್ತಗಾಮಿನಿಯಾದ ಗಂಗೆಯನ್ನು ಮೇಲಕ್ಕೆ ಎತ್ತಿ ತರೋಣ ! ಏಳಿರಿ, ಇದೀಗ ನಮ್ಮ ಮುಖ್ಯ ಕರ್ತವ್ಯವು.
ಆದುದರಿಂದ, ಕನ್ನಡಿಗರೇ, ಇನ್ನು, ಆರ್ಜುನನು ತನ್ನ ಮೋಹವನ್ನು ದೂರೀಕರಿಸಿ ಶ್ರೀಕೃಷ್ಣ ಪರಮಾತ್ಮನಿಗೆ ಉತ್ತರವಿತ್ತಂತೆ, ನಾವು ನಮ್ಮ ರಾಷ್ಟ್ರ ದೇವತೆಗೆ ಹೀಗೆಂದು ಹೇಳುವ.
नष्टो मोहः स्मृतिर्लब्धा त्वत्प्रसादान्मयाच्युत।
स्थितोऽस्मि गतसंदेहः करिष्ये वचनं तव ॥
-ಗೀತಾ ೧೮-೬೨