ಈ ಪುಟವನ್ನು ಪ್ರಕಟಿಸಲಾಗಿದೆ

೧ನೆಯ ಪೂರಕ ಪ್ರಕರಣ -ಕರ್ನಾಟಕ-ಇತಿಹಾಸ-ಸಂಶೋಧನ.

೧೨೯


ಶಕ್ಯವದೆಯೋ, ಹಾಗೆ ಅದು ಪರಕೀಯರಿಗೆ ಕಾಣುವುದು ಶಕ್ಯವಿಲ್ಲವಷ್ಟೆ ! ಆದುದರಿಂದ, ಪರಕೀಯರು ನಮ್ಮ ಇತಿಹಾಸವನ್ನು ಸ್ವಾಭಿಮಾನದೃಷ್ಟಿಯಿಂದ ಅಭ್ಯಾಸಮಾಡಿಲ್ಲವೆಂದು ಹೇಳಿದರೆ ಆಶ್ಚರ್ಯವೇನು? ಆದರೆ ಕೆಲವು ಯುರೋಪೀಯ ವಿದ್ವಾಂಸರು ಪುರಾತನ ವಸ್ತು ಸಂಶೋಧನ ಕಾರ್ಯದಲ್ಲಿ ತೊಡಗಿದಾಗ, ಅವರಿಗೆ ನಮ್ಮ ಇತಿಹಾಸದ ಸಂಗತಿಗಳು ಗೊತ್ತಾಗಿ, ಅವರು ಅವುಗಳನ್ನು ಕುತೂಹಲದಿಂದ ಸಂಗ್ರಹಿಸಿರುವರು. ಅವರ ಈ ಪ್ರಯತ್ನಗಳ ವಿಷಯವಾಗಿ ನಾವು ಅವರ ಉಪಕಾರವನ್ನು ಎಷ್ಟು ಸ್ಮರಿಸಿದರೂ ತೀರದು. ಅವರ ಆ ಪ್ರಯತ್ನಗಳೇ ನಮ್ಮ ಇತಿಹಾಸಾಭ್ಯಾಸಕ್ಕೆ ಮೂಲಾಕ್ಷರಗಳಾಗಿವೆ. ಈ ವಿದ್ವಾಂಸರು ಪುರಾಣವಸ್ತುಗಳನ್ನು ಸಂಶೋಧಿಸುವಾಗ, ಕೆಲವರಿಗೆ ಶಿಲಾಲಿಪಿಗಳು ದೊರೆತವು, ಕೆಲವರ ಲಕ್ಷ್ಯವು ನಮ್ಮಲ್ಲಿಯ ನಾಣ್ಯಗಳ ಕಡೆಗೆ ಎಳೆಯಿತು, ಕಟ್ಟಡಗಳು ಕೆಲವರ ಮನಸ್ಸನ್ನು ಆಕರ್ಷಿಸಿದುವು; ಅವರು ಆಯಾ ವಿಷಯಗಳಲ್ಲಿ ಪರಿಶ್ರಮಪಟ್ಟು ಅನೇಕ ಪುಸ್ತಕಗಳನ್ನು ಬರೆದಿರುವರು. ಯುರೋಪೀಯ ಜನರ ಇತಿಹಾಸದೃಷ್ಟಿಯು ಈ ಮೊದಲೇ ಎಚ್ಚರಗೊಂಡಿರುವುದರಿಂದ, ಮತ್ತು ಹೊಸ ವಸ್ತುಗಳನ್ನು ಕಂಡೊಡನೆಯೇ ಅವುಗಳನ್ನು ಲಕ್ಷ್ಯ ಪೂರ್ವಕವಾಗಿ ಪರಿಶೋಧಿಸುವ ಪರಿಪಾಠವು ಅವರಿಗೆ ಮೊದಲಿನಿಂದ ಇದ್ದುದರಿಂದ, ಅವರು ತಮ್ಮ ಬುದ್ಧಿ ಸಾಮರ್ಥ್ಯವನ್ನು ವೆಚ್ಚ ಮಾಡಿ, ಅವುಗಳನ್ನು ಅಭ್ಯಾಸಮಾಡಿ ಅವುಗಳಿಂದ ನಿಷ್ಪನ್ನವಾಗುವ ಸಂಗತಿಗಳನ್ನು ತಿಳಿಯಲು ಮನಗೊಂಡವರಾದರು. ಸಾರಾಂಶ:- ಆಂಗ್ಲ ಪಂಡಿತರ ಕುತೂಹಲವೇ ನಮ್ಮ ಇತಿಹಾಸ ಸಂಶೋಧನದ ಆಕಸ್ಮಿಕವಾದ ಮೂಲವು. ಈ ಹೊತ್ತಿನವರೆಗೆ ಅವರು ಮಾಡಿದ ಪ್ರಯತ್ನಗಳ ಫಲವನ್ನೇ ಮೂಲಧನವಾಗಿಟ್ಟು ಕೊಂಡು ಮುಂದಿನ ಇತಿಹಾಸವನ್ನು ನಿಜವಾದ ಕರ್ನಾಟಕದ ಅಭಿಮಾನದಿಂದ ಅಭ್ಯಾಸ ಮಾಡಬೇಕಾಗಿದೆ. ಆದರೆ ಕರ್ನಾಟಕಕ್ಕೆ ಸಂಬಂಧಿಸಿದ ಪ್ರಯತ್ನಗಳನ್ನು ಕುರಿತು ಹೇಳುವ ಮೊದಲು, ಹಿಂದುಸ್ಥಾನದ ಇತಿಹಾಸದ ಬಗ್ಗೆ ಯಾರು ಯಾರು ಈ ಮಾರ್ಗದಿಂದ ಪ್ರಯತ್ನ ಮಾಡಿದರೆಂಬುದನ್ನು ಮೊದಲು ತಿಳಿದುಕೊಳ್ಳಬೇಕು.

ಈ ವಿಷಯವಾಗಿ ಖಾಸಗೀರೀತಿಯಿಂದ ಪ್ರಯತ್ನ ಮಾಡಿದವರಲ್ಲಿ ರಾಯಲ್ ಏಶಿಯಾಟಿಕ್ ಸೊಸಾಯಿಟಿಗಳ ಮುಖ್ಯವಾದವುಗಳು. ಬಂಗಾಲ ರಾಯಲ್