ಈ ಪುಟವನ್ನು ಪ್ರಕಟಿಸಲಾಗಿದೆ



೧೪೦
ಕರ್ನಾಟಕ-ಗತವೈಭವ

ಇರಲಿಲ್ಲ. ಆದರೂ ಇವರು ಇಷ್ಟು ವಿಲಕ್ಷಣವಾದ ಕೆಲಸವನ್ನು ಮಾಡಿದುದು ನಿಜವಾಗಿಯೇ ಆಶ್ಚರ್ಯಕರವಾದ ಸಂಗತಿಯು. ಇವರು ಬರೆದ “ಶಿಲ್ಪಕಲೆಯ ಇತಿಹಾಸ” (“History of Architecture”) ಎಂಬುದು ಈ ಹೊತ್ತಿಗೂ ಪ್ರಮಾಣ ಗ್ರಂಥವಾಗಿ ಕೂತಿದೆ. ಸುಮಾರು ೬೦ ವರ್ಷಗಳ ಕೆಳಗೆ ಎಮ್. ವಿವೆನ್ ಡಿ ಸೇಂಟ್ ಮಾರ್ಟಿನ್‌ (M, Vivien De St Martin) ಎಂಬವನು ಹುಏನತ್ಸಾಂಗನು ಹಿಂದುಸ್ಥಾನದಲ್ಲಿ ಯಾವ ಹಾದಿಯಿಂದ ಪ್ರವಾಸ ಮಾಡಿದನೆಂಬುದನ್ನು ಅವನ ಪುಸ್ತಕದ ಮೇಲಿಂದ ಗೊತ್ತು ಹಚ್ಚಿದನು. ಮುಂದೆ ಪ್ರೊ. ವುಯಿಲ್ಸನ್, (Prof. Wilson) ಕರ್ನಲ್ ಯೂಲ್ (Col. Yule) ಮತ್ತು ಜನರಲ್ ಕನಿಂಗಹ್ಯಾಮ್ (General Cunningham) ಮುಂತಾದವರೂ ಈ ವಿಷಯದಲ್ಲಿ ಸುಧಾರಣೆಮಾಡಿದರು.

ಆದರೆ ಹೀಗೆ ಅಲ್ಲೊಂದು ಇಲ್ಲೊಂದು ಪ್ರಯತ್ನಗಳು ವಿರಳವಾಗಿ ನಡೆದಿದ್ದರೂ ಈ ವಿಷಯವನ್ನು ಕ್ರಮವಾಗಿ ಅಭ್ಯಾಸಮಾಡುವುದಕ್ಕೆ ೧೮೭೨ನೆಯ ಇಸವಿಯಲ್ಲಿ ಡಾ. ಬರ್ಗೆಸ್ (Dr. Burgess) ಇವರು ಇಂಡಿಯನ್ ಎಂಟಿಕ್ವರಿ (Indian Antiquary) ಎಂಬ ಮಾಸಪತ್ರಿಕೆಯನ್ನು ತೆಗೆದಂದಿನಿಂದ ಪ್ರಾರಂಭವಾಯಿತೆಂದು ಹೇಳಬಹುದು. ಡಾ. ಬರ್ಗೆಸ್ (Dr. Burgess) ಇವರು ೧೩ ವರ್ಷ ಆ ಮಾಸಪತ್ರಿಕೆಯನ್ನು ನಡಿಸಿದರು. ಈ ಅವಧಿಯಲ್ಲಿ ಸುಮಾರು ೨೬೦ ಶಿಲಾಲಿಪಿಗಳು ಮುದ್ರಿಸಲ್ಪಟ್ಟಿವೆ. ಮುಂದೆ ಡಾ. ಫ್ಲೀಟ್ (Dr. Fleet) ಮತ್ತು ಸರ್ ರಿಚಾರ್ಡ್ ಟೆಂಪಲ್‌ (Sir Richard Temple) ಇವರು ಅದಕ್ಕೆ ಸಂಪಾದಕರಾದರು.

೧೮೭೪ನೆಯ ಇಸವಿಯಲ್ಲಿ ಮುಂಬಯಿ ಇಲಾಖೆಯ ಆರ್ಕಿಯಾಲಾಜಿಕಲ ಸರ್ವೆಗೆ ಪ್ರಾರಂಭವಾಗಿ ಬಾದಾಮಿ, ಐಹೊಳೆ, ಪಟ್ಟದಕಲ್ಲ ಮುಂತಾದ ಸ್ಥಳಗಳಲ್ಲಿಯ ೫೬ ಚಿತ್ರಗಳುಳ್ಳ ರಿಪೋರ್ಟು ಮುದ್ರಿತವಾಯಿತು. ೧೮೮೯ನೆಯ ಇಸವಿಯಲ್ಲಿ, ವೇರೂಳ, ಅಜಂತಾ, ಕಾರ್ಲೆ, ಕಾನ್ಹೆರಿ, ಜುನ್ನರ, ಭಾಜಾ ಮುಂತಾದ ಸ್ಥಳಗಳಲ್ಲಿಯ ಗುಡಿಗಳ ವಿವರವುಳ್ಳ ಒಂದು ಪುಸ್ತಕವು ಹೊರಡಿಸಲ್ಪಟ್ಟಿತು. ೧೮೯೬ನೆಯ ಇಸಿವಿಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿಯ ಚಾಲುಕ್ಯರ ಗುಡಿಗಳ ವಿಷ