ಇನ್ನೂ ಕುಂಭಕರ್ಣ ನಿದ್ರೆಯಲ್ಲಿಯೇ ಇದೆ, ಇದೆಂಥ ದುಃಖದ ನೋಟವು !
ಆದರೆ, ಹೀಗಾಗುವದಕ್ಕೆ ಕಾರಣವೇನಿರಬಹುದು? ಅದಕ್ಕೆ ನಮ್ಮ ಇತಿಹಾಸ ಜ್ಞಾನದ ಅಭಾವವೇ ಮುಖ್ಯವಾದ ಕಾರಣವೆಂದು ನಮ್ಮ ಅಭಿಪ್ರಾಯ. ಆ ನಮ್ಮಲ್ಲಿ ಬಲಾಡ್ಯರಾದ ಅರಸರಿರಲಿಲ್ಲ; ನಮ್ಮಲ್ಲಿ ಘನ ಪಂಡಿತರಿರಲಿಲ್ಲ; ನಾವು ಎಂದಿಗೂ ಹೇಡಿಗಳೇ, ಎಂದಿಗೂ ದಡ್ಡರೇ, ಅಂದ ಬಳಿಕ ಮುಂದಿನ ಆಶೆಯಾದರೂ ನಮಗೆಲ್ಲಿಯದು? ಎಂದು ನಮ್ಮ ಜನರ ಅಭಿಪ್ರಾಯ. ಆದುದರಿಂದಲೇ ಅವರು ಕೇಳುವದೇನೆಂದರೆ “ನಮ್ಮ ಕರ್ನಾಟಕದ ವಿಷಯಕ್ಕೆ ಅಭಿಮಾನ ಪಡತಕ್ಕ ಸಂಗತಿಗಳೇನಿವೆ? ನಮ್ಮದೇನು ರಾಷ್ಟ್ರವೇ? ನಮಗೇನು ಇತಿಹಾಸವಿದೆಯೇ? ನಮ್ಮ ಕರ್ನಾಟಕವು ಎಂದಾದರೂ ವಾಙ್ಮಯವನ್ನು ಕಂಡಿತ್ತೋ? ಅದಕ್ಕೆ ಅರಸರೇನಾದರೂ ಇದ್ದರೋ ? ನಮಗೆ ವಿಶಿಷ್ಟವಾದ ಸಂಸ್ಕೃತಿಯುಂಟೋ? ಹೀಗಿಲ್ಲದ ಬಳಿಕ, ಅಂಥ ಸತ್ತ ಕರ್ನಾಟಕವನ್ನು ಹೊತ್ತು ಕೊಂಡು ಹೋಗುವದಂತು? ಆ ನಮ್ಮ ಕೊರಳೊಳಗಿನ ಗುದಿಗೆಯನ್ನು ಹರಿದೊಗೆದು, ಮಿಕ್ಕ ಜನಾಂಗಗಳಲ್ಲಿ ಬೆರೆತು ಹೋಗುವದೇ ಸರಿಯಲ್ಲವೆ?” ಇಷ್ಟೇ ಅಲ್ಲ, ಕೆಲವರಿಗಂತೂ ಕರ್ನಾಟಕಸ್ಥರೆಂದು ಹೇಳಿ ಕೊಳ್ಳುವದಕ್ಕೂ ಕೂಡ ನಾಚಿಕೆ ಬರುತ್ತದೆ, ಆದುದರಿಂದ ಅವರು ನಮ್ಮ ಜನರಿಗೆ ಉಪದೇಶಿಸುವದೇನಂದರೆ- "ಕನ್ನಡಿಗರೇ ! ಇಗೋ, ಇಲ್ಲಿ ನಮ್ಮ ನೆರೆಹೊರೆಯವರಾದ ಮರಾಠರು, ತೆಲುಗು, ತಮಿಳರು ವೇಗದಿಂದ ಸುಧಾರಣೆಯ ಮಾರ್ಗ ವನ್ನು ಆಕ್ರಮಿಸ ಹತ್ತಿದ್ದಾರೆ. ನಾವು ನಮ್ಮ ಈ ಕರ್ನಾಟಕತ್ವವನ್ನು ಸುಟ್ಟು ಬೂದಿಮಾಡಿ, ನೀರಿನಲ್ಲಿ ಕಲಸಿಬಿಡೋಣ, 'ಕರ್ನಾಟಕ'ವೆಂಬ ಈ ಕಾಲ್ತೊಡಕಿನ ಬಳ್ಳಿಯನ್ನು ಕತ್ತರಿಸಿ ಬಿಡೋಣ, ನೀವು ಇಲ್ಲದ ಸಲ್ಲದ ವಿಚಾರಗಳನ್ನು ತೆಗೆದು ಹೊಸ ಆಟವನ್ನು ಹೂಡಬೇಡಿರಿ, ಹಿಂದುಸ್ಥಾನದಲ್ಲೆಲ್ಲ ರಾಷ್ಟ್ರೀಯತ್ವದ ದುಂದುಭಿಯು ಮೊಳಗುತ್ತಿರಲು, ನೀವು ಈ ಪ್ರಾಂತಿಕ ಅಭಿಮಾನಕ್ಕೆ ಯಾಕೆ ಬಲಿ ಬೀಳುವಿರಿ? ಸುಮ್ಮನೆ ಆ ಕರ್ನಾಟಕದ ಹೆಸರಿನಿಂದ ಯಾಕೆ ತೊಳಲಾಡುತ್ತೀರಿ? ಹೋಗಲಿ ಆ ಕರ್ನಾಟಕವು; ಏನೋ, ಕನ್ನಡ ನುಡಿಯು ನಮ್ಮನ್ನು ಬಿಡದು, ಅಷ್ಟರಮಟ್ಟಿಗೆ ಬೇಕಾದರೆ 'ಕರ್ನಾಟಕ' ರೆನ್ನಿಸಿಕೊಳ್ಳಿರಿ.”- ಈ ಬಗೆ ಯಾಗಿ ಕರ್ನಾಟಕರು ವಿಷಾದಗೊಂಡು ಒಂದೇ ಸಮನೇ ಒರಲು ಹತ್ತಿದ್ದಾರೆ. ಹೀಗಾದ ಮೇಲೆ ಅವರ ನಾಲಿಗೆಯ ತುದಿಯ ಮೇಲೆ ಮಹಾ ವಿಭೂತಿಗಳ
ಪುಟ:ಕರ್ನಾಟಕ ಗತವೈಭವ.djvu/೩೨
ಈ ಪುಟವನ್ನು ಪ್ರಕಟಿಸಲಾಗಿದೆ
೧ನೆಯ ಪ್ರಕರಣ -ಈ ಮೃತವಾದ ಕರ್ನಾಟಕದಿಂದೇನು?
೭