ಕನ್ನಡಿಗರೇ, ಉಜ್ವಲವಾದ ನಿಮ್ಮ ಭಾಷೆಯು ಒಂದಾನೊಂದು ಕಾಲಕ್ಕೆ ಉತ್ತರದಲ್ಲಿ ಬಹು ದೂರದ ವರೆಗೆ ಮನೆ ಮಾಡಿಕೊಂಡಿತ್ತೆಂಬ ಸಂಗತಿಯು ನಿಮ್ಮ ಹೃದಯವನ್ನು ಸ್ಪೂರ್ತಿಗೊಳಿಸಲಿ.
೪ನೆಯ ಪ್ರಕರಣ
ಕರ್ನಾಟಕದ ವಿಭೂತಿಗಳು
नांतोस्ति मम दिव्यानां विभूतीनां परंतप ।
एपतूद्देशतः प्रोक्तो विभूतेर्विस्तरो मया ॥
- ಗೀತಾ, ೧೦-೪೦.
ಎಲೆ ಪರಂತಪ ದಿವ್ಯವೆನಿಸುವ| ಹಲವು ಬಗೆಯ ವಿಭೂತಿವಿಭವಕೆ |
ಸಲೆ ಮೊದಲು ಕಡೆಯಿಲ್ಲವೆನ್ನಯ ಯೋಗಮಾಯೆಗಳ ||
ಚೆಲುವೆನಿಸುವ ವಿಭೂತಿವಿಸ್ತರ ಜಲಧಿಯೊಳು ನಾಂ ನಿನಗೆ ಪೇಳ್ವೆನು |
ಕೆಲವ, ಮಿಕ್ಕ ವಿಭೂತಿನಿಭವಕೆ ಲೆಕ್ಕವಿಲ್ಲೆಂದ ||
-ನಾಗರಸ
ವು ಹಿಂದಿನ ಪ್ರಕರಣದಲ್ಲಿ ವರ್ಣಿಸಿದ ಕರ್ನಾಟಕದ ವ್ಯಾಪ್ತಿಯನ್ನು ಓದಿ "ಅಹುದು, ನಿಮ್ಮ ಕರ್ನಾಟಕವು ಅಲ್ಲಿಂದ ಇಲ್ಲಿಯ ವರೆಗೆ ಹಬ್ಬಿರಬಹುದು. ಹಾಗಿದ್ದ ಮಾತ್ರಕ್ಕೆ ನೀವು ಅದರ ವಿಷಯವಾಗಿ ಅಭಿಮಾನಪಡುವುದು ಸರಿಯಾದೀತೋ? ಬರಿಯ ವಿಸ್ತಾರವನ್ನಷ್ಟೆ ತಗೆದುಕೊಂಡರೆ ಆಫ್ರಿಕೆಯೊಳಗಿನ 'ಸಹರಾ' ಬೈಲು ವಿಸ್ತಾರದಲ್ಲೇನು ಕಡಿಮೆಯಾಗಿರುವುದೋ ? ನಿಮ್ಮ ಕರ್ನಾಟಕವೂ ಹಾಗೇ ಇದ್ದರೆ ಅದರಲ್ಲಿ ಯಾರಿಗೆ ತಾನೇ ಅಭಿಮಾನವುಂಟಾಗಬೇಕು? ನಮ್ಮಲ್ಲಿ ದೊಡ್ಡ ದೊಡ್ಡ ಅರಸರಾಗಿ ಹೋದರು; ಕವಿಪುಂಗವರಾಗಿ ಹೋದರು, ಧರ್ಮಸ್ಥಾಪಕರಾಗಿ ಹೋದರು;- ಎಂದು ಸಾಮಾನ್ಯವಾಗಿ ಹೇಳಿದ ಮಾತ್ರಕ್ಕೆ ತೀರಿತೇ ? ಅವರು ಯಾರು, ಅವರು ಮಾಡಿದ ಮಹಾಕಾರ್ಯಗಳು ಯಾವುವು, ಎಂಬ ಜ್ಞಾನವು ನಮಗೆ ಬೇಡವೋ ? ಹಾಗೆ ಜ್ಞಾನವಿಲ್ಲದಿದ್ದರೆ ಅದು ಒಣ ಅಭಿಮಾನ