ಈ ಪುಟವನ್ನು ಪ್ರಕಟಿಸಲಾಗಿದೆ



೭ನೆಯು ಪ್ರಕರಣ – ಬಾದಾಮಿಯ ಚಾಲುಕ್ಯರು
೫೧

ಬಾದಾಮಿಯ ಚಾಲುಕ್ಯರು*
( ೫೫೦- ೭೫೭ )

ಚಾಲುಕ್ಯರೇ ಇಡೀ ಕರ್ನಾಟಕಕ್ಕೆ ಸಾರ್ವಭೌಮರಾಗಿ ಮೊದಲು ಆಳಿದ ಅರಸರು, ಈ ವಂಶದ ೯ ಜನ ಅರಸರು ಬಾದಾಮಿಯಲ್ಲಿ ಬಹು ವೈಭವದಿಂದ ಸುಮಾರು ೨೦೦ ವರ್ಷಗಳವರೆಗೆ ಆಳಿದರು. ಹಾರೀತ ಖುಷಿಯು ದೇವತೆಗಳಿಗೆ ಅರ್ಘ್ಯೋದಕವನ್ನು ಕೊಡುವಾಗ, ಅವನ ಚುಲಕದಿಂದ ಎಂದರೆ ಬೊಗಸೆಯೊಳಗಿಂದ ಒಬ್ಬ ವೀರಪುರುಷನು ಹುಟ್ಟಿದನಂತೆ, ಚಾಲುಕ್ಯರು ತಾವು ಆ ವೀರ ಪುರುಷನ ವಂಶಜರೆಂದು ಹೇಳಿಕೊಳ್ಳುತ್ತಾರೆ. ಆದುದರಿಂದ ಇವರಿಗೆ 'ಆಹಾರೀತ ಪುತ್ರ'ರೆಂದೆನ್ನುತ್ತಾರೆ. ಇವರ ಗೋತ್ರ ಮಾನವ್ಯ: ಕುಲದೇವತ ವಿಷ್ಣು ; ವಂಶ ಚಂದ್ರವಂಶ, ಇವರು ಮೊದಲು ಉತ್ತರದವರು. ನರ್ಮದೆಯನ್ನು ದಾಟಿ ಮೊದಲು ಬಂದವನು ಜಯಸಿಂಹನು ಇವನು ರಾಷ್ಟ್ರಕೂಟರ ಅರಸನಾದ ಇಂದ್ರನನ್ನು ಸೋಲಿಸಿ, ಮುಂದೆ ದಕ್ಷಿಣಕ್ಕೆ ಸಾಗಿ, ಕಂಚಿಯಲ್ಲಿರುವ ಪಲ್ಲವ ವಂಶದ ತ್ರಿಲೋಚನ ಪಲ್ಲವನೊಡನೆ ಕಾದಿದನು; ಆದರೆ ಆ ಯುದ್ಧದಲ್ಲಿ ತಾನೇ ಮಡಿದನು, ಆಗ, ಗರ್ಭಿಣಿಯಾಗಿದ್ದ ಅವನ ಹೆಂಡತಿಯು ವಿಷ್ಣು ಸೋಮಯಾಜಿಯೆಂಬ ಒಬ್ಬ ಬ್ರಾಹ್ಮಣನನ್ನು ಆಶ್ರಯಿಸಿದಳು. ಅಲ್ಲಿ ಅವಳಿಗೆ ರಾಜಸಿಂಹನೆಂಬ ಮಗನು ಹುಟ್ಟಿದನು. ಅವನು ದೊಡ್ಡವನಾದ ಬಳಿಕ ಪಲ್ಲವರೊಡನೆ ಕಾದಿ, ಅವರನ್ನು ಸೋಲಿಸಿ, ಆ ವಂಶದ ರಾಜಪುತ್ರಿಯನ್ನು ಮದುವೆಯಾದನು. ಆದರೆ, ಅವನ ಇತಿಹಾಸವು ನಮಗೆ ವಿಶೇಷವಾಗಿ ತಿಳಿದಿಲ್ಲ. ಇವನ ಮಗನಾದ ಪುಲಿಕೇಶಿಯೇ ಈ ಚಾಲುಕ್ಯ ವಂಶದ ಮೊದಲನೆಯ ಪ್ರಖ್ಯಾತ ರಾಜನು, ಇವನ ರಾಜಧಾನಿಯು ಮೊದಲು 'ಇಂದುಕಾಂತ' ಅಥವಾ ಅಜಂತೆಯಲ್ಲಿದ್ದಿತು, ಆದರೆ ಮುಂದೆ ಈ ಪುಲಿಕೇಶಿಯು ಪಲ್ಲವರನ್ನು ಬಗ್ಗು ಬಡಿದು ವಾತಾಪಿ, ಅಥವಾ ಬಾದಾಮಿಯನ್ನು ಅವರಿಂದ ಸೆಳೆದುಕೊಂಡು, ಅದನ್ನು ತನ್ನ ರಾಜಧಾನಿಯನ್ನಾಗಿ ಮಾಡಿದನು.


*ಈ ವಂಶದ ಶಿಲಾಲಿಪಿ, ತಾಮ್ರಪಟಗಳು ಕೂಡಿ, ಸುಮಾರು ೧೦೦ರವರೆಗೆ ದೊರೆತಿದ್ದರೂ, ಅವುಗಳಲ್ಲಿ ೫೦-೫೫ ಮಾತ್ರವೇ ಶೋಧಿಸಲ್ಪಟ್ಟವೆ. ಇವರ ಲೇಖಗಳು ಪಿಂಪಳನೇರ, ಹೈದರಾಬಾದ, ಚಿಪಳೂಣ, ಕುಂಡಲಗಾಂವ, ರಾಯಗಡ ಬದಾಮಿ, ಮಹಾಕೂಟ, ಅಡೂರ, ಐಹೊಳೆ, ಪಟ್ಟದಕಲ್ಲ ಮುಂತಾದ ಸ್ಥಳಗಳಲ್ಲಿ ದೊರೆಯುತ್ತವೆ.