ಈ ಪುಟವನ್ನು ಪ್ರಕಟಿಸಲಾಗಿದೆ
೫೮
ಕರ್ನಾಟಕ ಗತವೈಭವ

ದಂತಿದುರ್ಗನ ತರುವಾಯ, ಕೃಷ್ಣರಾಜ ಅಥವಾ ಶುಭತುಂಗನು (೭೬೦-೭೭೦) ಪಟ್ಟವನ್ನೇರಿ, ಚಾಲುಕ್ಯರನ್ನು ಪುನಃ ಸಂಪೂರ್ಣವಾಗಿ ಸೋಲಿಸಿ, ರಾಷ್ಟ್ರಕೂಟರ ಸಾರ್ವಭೌಮತ್ವವನ್ನು ದೃಢವಾಗಿ ನಿಲ್ಲಿಸಿದನು. ಜಗತ್ತಿನೊಳಗಿನ ಪ್ರವಾಸಿಕರೆಲ್ಲರನ್ನು ಅತಿಶಯವಾಗಿ ಬೆರಗುಗೊಳಿಸುವಂಥ ವೇರೂಳಿನಲ್ಲಿಯ ಅತ್ಯದ್ಭುತವಾದ 'ಕೈಲಾಸ'ವೆಂಬ ಅಖಂಡವಾದ ಕಲ್ಲಿನ ಗುಡಿಯನ್ನು ಕೂರಿಸಿದವನು ಇದೇ ಕೃಷ್ಣರಾಜನು, (ವೈಭವವರ್ಣನೆಯ ೧೨ನೆಯ ಪ್ರಕರಣವನ್ನು ನೋಡಿರಿ).
ವನ ತರುವಾಯದಲ್ಲಿ ಧ್ರುವನು ಹೆಸರುವಾಸಿಯಾದ ಅರಸನು, ಇವನಿಗೆ 'ನಿರುಪಮ', 'ಕಲಿವಲ್ಲಭ' ಎಂದೂ ಹೆಸರುಗಳಿದ್ದುವು. ಇವನು ಪಲ್ಲವರನ್ನೂ ಗಂಗರನ್ನೂ ಗೆದ್ದು ಅವರಿಂದ ಕಪ್ಪವನ್ನು ತೆಗೆದುಕೊಂಡದ್ದಲ್ಲದೆ ಉತ್ತರದಲ್ಲಿ ಅಲ್ಲಾಬಾದದ ಹತ್ತರವಿರುವ ಕೌಸಾಂಬಿಯಲ್ಲಿ ಆಳುತ್ತಿದ್ದ ವತ್ಸ ಅರಸನ ಮೇಲೆ ದಂಡೆತ್ತಿ ಹೋಗಿ, ಅವನನ್ನು ಕಾಡಿಗೆ ಅಟ್ಟಿ ಅವನಿಂದ ರಾಜಛತ್ರಗಳನ್ನು ಕಸುಕೊಂಡನು.
ನಂತರ ೩ನೆಯ ಗೋವಿಂದನು ಬಲಾಢ್ಯ ಅರಸನು, ಸಿಂಹಾಸನವನ್ನೇರಿದ ಕೂಡಲೇ ಒಳಸಂಚುಮಾಡಿದ್ದ ಹನ್ನೆರಡು ಜನ ಅರಸರನ್ನು ಇವನೊಬ್ಬನೇ ಬಗ್ಗು ಬಡಿದನು. ಅನಂತರ ಇವನು ಗುರ್ಜರ ಮಾಳವ ದೇಶಗಳನ್ನು ತೆಗೆದುಕೊಂಡನು. ಅಲ್ಲಿಂದ ವಿಂಧ್ಯ ಪರ್ವತಕ್ಕೆ ಸಾಗಿ ಹೋಗಿ 'ಮಾರಾಶ್ವರ' ನೆಂಬ ಅರಸನನ್ನು ವಶಮಾಡಿಕೊಂಡನು. ಮುಂದೆ ಅವನು ದಕ್ಷಿಣಕ್ಕೆ ತುಂಗಭದ್ರೆಯ ಕಡೆಗೆ ಹೊರಳಿ, ಪಲ್ಲವರನ್ನು ಗೆದ್ದು, ವಂಗೀ ದೇಶದ ಅರಸನನ್ನು (ಪೂರ್ವ ಚಾಲುಕ್ಯರ ಅರಸನಿಗೆ) ದಾಸಾನುದಾಸನನ್ನಾಗಿ ಮಾಡಿಕೊಂಡು, ಅವನ ಕೈಯಿಂದ ತನ್ನ ಕೋಟೆಯ ಗೋಡೆಗಳನ್ನು ಕಟ್ಟಿಸಿಕೊಂಡನು. ಈತನ ವಿಜಯಯಾತ್ರೆಯು ೮೦೪ ನೆಯ ಇಸ್ವಿಯ ಸುಮಾರಿಗೆ ಮುಗಿಯಿತು. ಸಾರಾಂಶ, ಈ ಮೂರನೆಯ ಗೋವಿಂದನು ರಾಷ್ಟ್ರಕೂಟ ಅರಸರೊಳಗೆ ಅತ್ಯಂತವಾಗಿ ಶೂರನಾದ ಅರಸನು. ಈತನ ಕಾಲಕ್ಕೆ ರಾಷ್ಟ್ರಕೂಟರ ರಾಜ್ಯ ವಿಸ್ತಾರವು ಉತ್ತರದಲ್ಲಿ ಮಾಳವಾದೇಶದಿಂದ ದಕ್ಷಿಣಕ್ಕೆ ಕಂಚಿಯವರೆಗೆ ಹಬ್ಬಿತ್ತು. ನರ್ಮದೆಯಿಂದ ತುಂಗಭದ್ರೆಯವರೆಗಿನ ಪೂರ್ವ ಪಶ್ಚಿಮ ಸಮುದ್ರಗಳ ನಡುವಿನ ಪ್ರದೇಶವಂತೂ ಪ್ರತ್ಯಕ್ಷವಾಗಿ ಈತನ ಆಧೀನದಲ್ಲಿಯೇ ಇತ್ತು. ಮಿಕ್ಕ ಪ್ರದೇಶದಲ್ಲಿ ಈತನ ವರ್ಚಸ್ಸು ನಡೆಯುತ್ತಿತ್ತು.