ಈ ಪುಟವನ್ನು ಪ್ರಕಟಿಸಲಾಗಿದೆ

ಕವಿಯ ಸೋಲು


ಅಂಗನೆಯಳುತಿರೆ ಮರೆಯಲ್ಲಿ ಅರ್ಚಕ
ಬಿಕ್ಕುತ ಬಿಕ್ಕುತ ನಿಂದಿಹನು |
ಕಂಗಳ ನೀರನು ಮಿಡಿಯುತ ತೊಡೆಯುತ
ಅಕ್ಕರೆ ಭರವಸೆ ನೀಡಿಹನು.

"ಅಳದಿರು ಮಗಳೇ !” ಎನ್ನಲು ಒಡನೆಯ
ಬಿಗಿಯಿತು ಕಂಠವು ಅರ್ಚಕಗೆ !
ಪುಳಕಿತಳಾದಳು ಚಮಕಿತಳಾದಳು
ಮುಗಿದಳು ಕೈಗಳ ಆ ದನಿಗೆ.

"ಅಳಲನು ಕಳೆವೆನು ಪತಿಯನು ಪೊರೆವೆನು
ಹದುಳದಿ ನಡೆಸುವ ನಿಮ್ಮನ್ನು |
ಅಳದಿರು ಮಗಳೇ, ಅಳದಿರು ತಾಯೀ
ಮುದದಲಿ ನಡೆಯೌ ಮನೆಗಿನ್ನು.”

ಕನಸೋ ನೆನೆಸೋ ಎನ್ನುತ ಸಾಧ್ವಿಯು
ನಿಂದಳು ಚಣ ಮೈಮರೆಯುತಲಿ |
ಮನದೊಳು ಮೂಡಿತು ಹರುಷವು ಕೂಡಲೆ
ವಂದಿಸಿ ನಡೆದಳು ತ್ವರಿತದಲಿ.

"ಅಯ್ಯೋ !” ಎನ್ನುತ ಮುಂದಕೆ ಬಂದನು
ಸುತ್ತಿಗೆ ಹಿಡಿದಾ ಪೂಜಾರಿ ।
ಸುಯ್ಯುತ ನೋಡಿದ ದೇವರ ಮುಖವನು
ಅತ್ತನು ಬಳ ಬಳ ಪೂಜಾರಿ.

೫೭