ಈ ಪುಟವನ್ನು ಪ್ರಕಟಿಸಲಾಗಿದೆ
೯೦
ಕುಕ್ಕಿಲ ಸಂಪುಟ

'ಯಕ್ಷಗಾನ ಪ್ರದರ್ಶನಗಳಲ್ಲಿ ಸ್ತ್ರೀವೇಷಗಳು ಹೊರತು, ಸ್ತ್ರೀ ಜಾತಿಗೆ ಅದರಲ್ಲಿ ಪ್ರವೇಶವೇ ಎಲ್ಲಿಯೂ ಇಲ್ಲವೆಂಬುದೂ ಗಮನಾರ್ಹ. ಈ 'ಎಕ್ಕಲಗಾಣ'ದ ಕುರಿತು ಇಷ್ಟು ವಿಸ್ತರಿಸಿದ್ದು ಯಾಕೆಂದರೆ, ಎಕ್ಕಲಗಾಣವೇ ಯಕ್ಷಗಾನವೆಂದು ಹೇಳಿದ ಮಹನೀಯರು ನಮ್ಮಲ್ಲಿಯ ಹೆಸರಾಂತ ವಿದ್ವಾಂಸರೂ, ಗ್ರಂಥಕರ್ತರೂ ಆಗಿರುವುದರಿಂದ ಇದು ಎಷ್ಟೊಂದು ಅನರ್ಥ ಪರಂಪರೆಗೆ ಕಾರಣ ವಾಗಿದೆಯೆಂದರೆ, ಇದನ್ನು ನಂಬಿ ಆಂಧ್ರದ ಯಕ್ಷಗಾನ ಸಂಶೋಧಕರು, ಅಗ್ಗಳನ ಆ ಗ್ರಂಥದಲ್ಲಿ ಎಕ್ಕಲಗಾಣರೆಂಬ ಆದಿವಾಸಿಗಳು ಯಕ್ಷಗಾನ ಹಾಡುತ್ತಿದ್ದರೆಂದಿದೆ; ಆಂಧ್ರದಲ್ಲಿ 'ಜಕ್ಕುಲ'ರೆಂಬ ಆದಿವಾಸಿಗಳು ಇದ್ದಾರೆ ಆ ಜಕ್ಕುಲರ 'ಪಾಟ'ದ ಜಾನಪದ ಶೈಲಿಯೇ ಯಕ್ಷಗಾನವಾಗಿದ್ದಿರಬೇಕೆಂದೂ ಊಹಿಸಲಾಗಿದೆ, ಕನ್ನಡದ ಆ ಎಕ್ಕಲಗಾಣರೂ, ಈ ಜಕ್ಕುಲರೂ ಒಂದೇ ಮೂಲದವರಾಗಿರಬಹುದು; ಹಾಗೂ 'ಭರತೇಶವೈಭವ'ದಲ್ಲಿ ಕಾಣುವ 'ಎಕ್ಕಡಿಗರೆಂಬವರು ಅದೇ ಮೂಲದವರಿರಬೇಕು; ಆ ಜಾನಪದ ಮೂಲ ದಿಂದಲೇ ಯಕ್ಷಗಾನವಾಗಿದ್ದಿರಬೇಕು, ಎಂಬಂತೆಲ್ಲ ಹೇಳತೊಡಗಿದ್ದಾರೆ. (ನೋಡಿ: ಆಂಧ್ರ ಯಕ್ಷಗಾನ ವಾಙ್ಮಯ ಚರಿತ್ರೆ : ಎಸ್. ವಿ. ಜೋಗಾರಾವು : ೧೯೬೧, ಪ್ರ :ಆಂಧ್ರ ವಿಶ್ವಕಲಾ ಪರಿಷತ್ತು).
ಹೀಗೆ ಜಾನಪದ ಗಾನ ಪದ್ಧತಿ ಎಂಬುದರಿಂದ ಯಕ್ಷಗಾನವೆಂಬ ಹೆಸರು ಬಂದ ದಿರಬೇಕನ್ನುವವರು, ಯಕ್ಷಗಾನವೆಂದು ಕರೆಯಲ್ಪಟ್ಟಿರುವುದೂ, ಪಡುತ್ತಿರುವುದೂ, ಗೇಯಪ್ರಬಂಧಗಳೇ ಎಂಬ ವಾಸ್ತವಾಂಶವನ್ನು ಗಮನಿಸುವುದಿಲ್ಲ. ಇಂದಿಗೂ ಸರ್ವತ್ರ ರೂಢಿಯಲ್ಲಿ ಪಂಚವಟಿ ಯಕ್ಷಗಾನ, ಕರ್ಣಾರ್ಜುನ ಯಕ್ಷಗಾನ, ಪಾರಿಜಾತ ಯಕ್ಷಗಾನ, ಯಕ್ಷಗಾನ ನಳಚರಿತ್ರೆ ಎಂಬಂತೆ ವ್ಯವಹಾರವಿರುವುದಲ್ಲದೆ ಕವಿಗಳೇ ತಮ್ಮ ರಚನೆ ಗಳನ್ನು ಯಕ್ಷಗಾನಗಳೆಂದು ಕರೆದಿರುವುದು ಆ ಕೃತಿಗಳಲ್ಲೇ ಕಂಡುಬರುತ್ತದೆ. ಪ್ರತ್ಯೇಕ ಗಾನಪದ್ಧತಿ ಎಂಬ ಅರ್ಥದಲ್ಲಿ ಯಾರೂ ವ್ಯವಹರಿಸಿದ್ದಿಲ್ಲ.
ಕಿಟ್ಟೆಲ್ಲರ ಕನ್ನಡ ನಿಘಂಟುವಿನಲ್ಲಿ ಯಕ್ಷಗಾನ ಶಬ್ದಕ್ಕೆ- A poetic compo- sition used in dramas ಎಂಬ ಅರ್ಥವನ್ನು ಕೊಡಲಾಗಿದೆ. ತೆಲುಗು ನಿಘಂಟು ಗಳಲ್ಲಿಯೂ ಪ್ರಬಂಧವೆಂಬ ಅರ್ಥವಿರುವುದಾಗಿದೆ. ಸಂಗೀತ ಶಾಸ್ತ್ರಕರ್ತರೂ 'ಯಕ್ಷಗಾನ'ವೆಂದು ಪ್ರಬಂಧವನ್ನೇ ಕರೆದಿದ್ದಾರೆ. ತಂಜಾವೂರನ್ನಾಳಿದ ರಘುನಾಥ ನಾಯಕನ (ಕ್ರಿ. ಶ. ೧೬-೧೭ನೇ ಶತಮಾನ) ಆಸ್ಥಾನ ವಿದ್ವಾಂಸನಾಗಿದ್ದ ಗೋವಿಂದ ದೀಕ್ಷಿತನು ತನ್ನ 'ಸಂಗೀತ ಸುಧಾ' ಎಂಬ ಶಾಸ್ತ್ರಗ್ರಂಥದಲ್ಲಿ, ಆ ರಾಜನ ನಾಯಕ ಗ್ರಂಥರಚನೆಗಳನ್ನು ಉಲ್ಲೇಖಿಸುತ್ತಾ
'ಶ್ರೀ ರುಕ್ಷ್ಮಿಣೀ ಕೃಷ್ಣ ವಿವಾಹ ಯಕ್ಷಗಾನಂ, ಪ್ರಬಂಧಾನಪಿ ನೈಕಭೇದಾನ್ | ನಿರ್ಮಾಯ ವಾಗ್ಫಿ : ಪ್ರಣುತಾರ್ಥ ಭಾಗ್ಫಿರ್ವಿದ್ವತ್ ಕವೀನಾಂ ವಿದಧಾಸಿ ಹರ್ಷ೦ ||

(೧-೬೩)- ಎಂದಿರುತ್ತಾನೆ.

ಸಂಸ್ಕೃತ 'ಗಾನ' ಶಬ್ದಕ್ಕೆ ಭಾವಾರ್ಥದಲ್ಲಿ ಹಾಡುವಿಕೆ ಎಂಬ ಅರ್ಥವಾದರೆ ಕರ್ಮಾರ್ಥದಲ್ಲಿ ಹಾಡಲ್ಪಡುವ ಪ್ರಬಂಧವೆಂದು ಅರ್ಥವಿರುವುದು. ಸಂಗೀತ ಶಾಸ್ತ್ರದಲ್ಲಿ ದೇಶೀಯ ಪ್ರಬಂಧಗಳನ್ನು ಸರ್ವಸಾಮಾನ್ಯವಾಗಿ 'ಗಾನ'ವೆಂದೇ ಕರೆದಿದೆ. ಅಲ್ಲಿ ಪ್ರಬಂಧಾರ್ಥದ ಈ ಗಾನಕ್ಕೆ, ರಾಗಾಂಗ ಭಾಷಾಂಗ ಕ್ರಿಯಾಂಗಾದಿ ದೇಶೀ ರಾಗಗಳಲ್ಲಿ, ಎಂದರೆ ಇಂದಿಗೂ ಸಂಗೀತ ರೂಢಿಯಲ್ಲಿರುವ ರಾಗಗಳಲ್ಲಿ ಹಾಡಲ್ಪಡತಕ್ಕ ದೇಶಭಾಷಾ