ಈ ಪುಟವನ್ನು ಪ್ರಕಟಿಸಲಾಗಿದೆ

ನೀಡಿದ್ದಾರೆ. ಈಯೆಲ್ಲ ಸಹಕಾರಗಳಿಗಾಗಿ ಬಹುವಿಚಾರತಜ್ಞರಾದ ಇವರೀರ್ವರಿಗೆ ವಿಶೇಷ ವಾಗಿ ಆಭಾರಿಯಾಗಿದ್ದೇನೆ.

ಈ ಸಂಪುಟದ ವಿಷಯದಲ್ಲಿ ಆರಂಭದಿಂದಲೂ ಆಸಕ್ತಿವಹಿಸಿ, ಸೂಚನೆಗಳನ್ನು ನೀಡಿರುವವರು ಹಿರಿಯ ಮಿತ್ರ, ವಿಮರ್ಶಕ, ಅರ್ಥದಾರಿ ಎಡ್ವಕೇಟ್ ಶ್ರೀ ಮುಳಿಯ ಮಹಾಬಲ ಭಟ್ಟರು. ಕರಡಚ್ಚಿನ ಕೆಲವು ಭಾಗಗಳನ್ನು ಇವರು ತಿದ್ದಿದ್ದಾರೆ. ಇವರಿಗೆ ವಂದನೆಗಳನ್ನು ಸಲ್ಲಿಸುತ್ತೇನೆ.

ಕುಕ್ಕಿಲರ ಮಿತ್ರರೂ ಅವರ ಗ್ರಂಥವೊಂದರ ಪ್ರಕಾಶನಕ್ಕೆ ಕಾರಣಕರ್ತರೂ ಆದ ಹಿರಿಯ ಲೇಖಕ ಡಾ. ಹಾ. ಮಾ. ನಾಯಕರು ಕುಕ್ಕಿಲರ ನಿಧನ ಸಂದರ್ಭದಲ್ಲಿ ಬರೆದ ಅಂಕಣ ಲೇಖನವನ್ನು ಇಲ್ಲಿ ಸೇರಿಸಲು ಒಪ್ಪಿಗೆ ಕೊಟ್ಟು ತಮ್ಮ ಕಾಣಿಕೆ ಸಲ್ಲಿಸಿದ್ದಾರೆ. ಡಾ. ನಾಯಕರಿಗೆ ಋಣಿಯಾಗಿದ್ದೇನೆ.

ಈ ಸಂಪುಟದ ಯೋಜನೆಯ ಹಂತದಲ್ಲೆ, ದಿ। ಸೇಡಿಯಾಪು ಅವರಿಂದ ಲೇಖನ ವನ್ನು ಕೇಳಿದಾಗ, ಪ್ರೀತಿಯಿಂದ ಬರೆದುಕೊಟ್ಟು ಸಂಪುಟದ ಘನತೆ ಹೆಚ್ಚಿಸಿದ್ದಾರೆ. ಆ ಮಹಾನ್ ಪಂಡಿತ ಸಾಹಿತಿಯ ದಿವ್ಯಚೇತನಕ್ಕೆ ಆದರದ ಶ್ರದ್ಧಾಂಜಲಿ.

ಸಾಹಿತ್ಯಕ ಸಾಂಸ್ಕೃತಿಕ ಕಾರ್ಯಗಳಲ್ಲಿ ಸದಾ ನೆರವು ನೀಡುವ ಮಿತ್ರ ಪ್ರೊ| ನಾಗರಾಜ ಜವಳಿಯವರು ಈ ಗ್ರಂಥದ ಕುರಿತೂ ಆಸಕ್ತಿ ವಹಿಸಿ, ಕರಡಚ್ಚಿನ ಕೆಲವು ಭಾಗಗಳನ್ನು ಪರಿಶೀಲಿಸಿದ್ದಾರೆ. ಅವರಿಗೆ ಆತ್ಮೀಯ ಧನ್ಯವಾದಗಳು.

ಪ್ರಕಾಶನ, ಸಾಹಿತ್ಯಕ ಕಾರ್ಯಗಳಲ್ಲಿ ದೊಡ್ಡ ರೀತಿಯ ಕೆಲಸಗಳನ್ನು ಮಾಡುತ್ತ ಬಂದಿರುವ, ಪ್ರಕಾಶನ ಸಾಹಸಿ, ಸಮರ್ಥ ಸಂಘಟಕ ಶ್ರೀ ಬೋಳಂತಕೋಡಿ ಈಶ್ವರ ಭಟ್ಟರು, ಈ ಗ್ರಂಥದ ಪ್ರಕಾಶನದ ಹೊರೆ ಹೊತ್ತಿದ್ದಾರೆ. ದೊಡ್ಡ ವೆಚ್ಚದ, ವ್ಯಾವಹಾರಿಕವಾಗಿ ಲಾಭಕರವಲ್ಲದ ಪ್ರಕಟಣೆಯಾಗಿದ್ದರೂ, ದಿ। ಕುಕ್ಕಿಲರ ಮೇಲಿನ ಅಭಿಮಾನ, ವಿಷಯದ ಕುರಿತ ಆದರ ಮತ್ತು ನನ್ನ ಮೇಲಿನ ಪ್ರೀತಿಯಿಂದ ಈ ಕೆಲಸವನ್ನು ಕೈಗೆತ್ತಿಕೊಂಡು, ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಅವರ ಉಪಕಾರಕ್ಕೆ ಕೃತಜ್ಞತೆ ಎಂದಷ್ಟೆ ಹೇಳಿದರೆ ಸಾಲದು.

ಈ ಸಂಪುಟವು ನಮ್ಮ ಕಾಲದ ಓರ್ವ ಅಸಾಧಾರಣ ವಿದ್ವಾಂಸರಾದ ಕುಕ್ಕಿಲ ಕೃಷ್ಣ ಭಟ್ಟರ ನೆನಪನ್ನು ಕನ್ನಡ ವಾಚಕರಲ್ಲಿ ಸ್ಥಾಯಿಯಾಗಿಸುವುದಲ್ಲದೆ, ಅವರ ಆಸಕ್ತಿಯ ಕ್ಷೇತ್ರಗಳಲ್ಲಿ ಹೊಸ ಚರ್ಚೆಗಳನ್ನು ಪ್ರೇರಿಸಲಿ, ಅದರಿಂದ ಸಂಶೋಧನ, ಚಿಂತನೆಗಳು ಮುಂದುವರಿಯಲಿ. ಅದೇ ಶ್ರೀ ಕುಕ್ಕಿಲ ಕೃಷ್ಣ ಭಟ್ಟರಿಗೆ ನಾವು ಅರ್ಪಿಸುವ ನಿಜವಾದ ಶ್ರದ್ಧಾಂಜಲಿ.

ಎಂ. ಪ್ರಭಾಕರ ಜೋಶಿ

ಯುಗಾದಿ, ೨೮ ಮಾರ್ಚ್, ೧೯೯೮
ಬೆಸೆಂಟ್ ಪದವಿಪೂರ್ವ ಕಾಲೇಜು'
ಮಂಗಳೂರು - ೫೭೫ ೦೦೩