ಈ ಪುಟವನ್ನು ಪ್ರಕಟಿಸಲಾಗಿದೆ
ಆಂಧ್ರ ಯಕ್ಷಗಾನ - ತುಲನಾತ್ಮಕ ವಿವೇಚನೆ / ೧೩೧

ಹೇಳುವುದಾಗಿ ಉದ್ಧರಿಸಿ ಕೊಟ್ಟಿದ್ದಾರೆಂದು ತಿಳಿಯುವುದು. ಆ ಗ್ರಂಥದ ತೆಲುಗು ರೂಪಾಂತರವು ಅವರ ಮೊಮ್ಮಗನಿಂದ ರಚಿಸಲ್ಪಟ್ಟದ್ದು ತಿರುಪತಿ ವೆಂಕಟೇಶ್ವರ ವಿಶ್ವವಿದ್ಯಾನಿಲಯದಿಂದ ಪ್ರಕಾಶಕ್ಕೆ ಬಂದಿದೆ. ಹೀಗೆಲ್ಲ ಯಕ್ಷಗಾನವೆಂಬ ಹೆಸರು ಹಾಗೂ ಕೃತಿರಚನಾ ಸಂಪ್ರದಾಯವು ಆಂಧ್ರಮೂಲದಿಂದ ಹರಿದುಬಂದುದೆಂದು ಊಹಿಸಿದರೆ ನ್ಯಾಯವಾಗಬಲ್ಲುದು. ಕನ್ನಡ ಯಕ್ಷಗಾನ ರಚನೆಯಲ್ಲಿಯೂ ಇದಕ್ಕೆ ಪೋಷಕಾಂಶ ಸಾಕಷ್ಟು ದೊರೆಯುತ್ತದೆ. ಮುಖ್ಯವಾದ ಕೆಲವನ್ನು ಇಲ್ಲಿ ಗಮನಿಸಬಹುದು. ಮೊದಲನೆಯದಾಗಿ ಕನ್ನಡ ಯಕ್ಷಗಾನದಲ್ಲಿಯ ದ್ವಿಪದಿಗಳು, ಸಾಮಾನ್ಯವಾಗಿ ದ್ವಿಪದಿ ಗಳಿಲ್ಲದ ಯಕ್ಷಗಾನವಿಲ್ಲವೇ ಇಲ್ಲವೆಂದರೂ ಸಲ್ಲುವುದು. ಇಪ್ಪತ್ತೋ ಮೂವತ್ತೊ ದ್ವಿಪದಿಗಳು ಎಡೆಬಿಡದೆ ಬರುವುದೂ ಉಂಟಷ್ಟೆ! ಈ ದ್ವಿಪದಿ ಎಂಬುದು ತೆಲುಗಿನ ಛಂದಸ್ಸೇ ಹೊರತು ಕನ್ನಡದ್ದಲ್ಲ. ತೆಲುಗಿನಲ್ಲಿ ಸಮಗ್ರ ದ್ವಿಪದಿಯಲ್ಲೇ ರಚಿತವಾದ ಸಮಗ್ರ ಕಾವ್ಯಗಳು ಅನೇಕ ಇವೆ. ಆಂಧ್ರ ಛಂದೋಗ್ರಂಥಗಳಲ್ಲಿ ದ್ವಿಪದಿ ಲಕ್ಷಣವಿದೆ. ಕನ್ನಡದಲ್ಲಿ ಹಿಂದಿನ ದ್ವಿಪದಿ ಕಾವ್ಯಗಳೂ ಇಲ್ಲ; ಪ್ರಾಚೀನ ಕಾವ್ಯಗಳಲ್ಲಿ ದ್ವಿಪದಿ ಸೇರಿದ್ದೂ ಇಲ್ಲ; ನಮ್ಮ ಛಂದೋಲಕ್ಷಣದಲ್ಲಿಯೂ ಅದಿಲ್ಲ. ೧೨ನೇ ಶತಕದಲ್ಲಿದ್ದ ಆಂಧ್ರಕವಿ ಪಾಲ್ಕುರಿಕೆ ಸೋಮನು ಉಭಯಕವಿತಾ ವಿಶಾರದನು; ಕನ್ನಡದಲ್ಲೂ ಗ್ರಂಥರಚನೆ ಮಾಡಿದವನು. ತೆಲುಗಿನಲ್ಲವನು ದ್ವಿಪದೀ ಕಾವ್ಯವನ್ನು ರಚಿಸಿದ್ದಾನೆ. ಹೊರತು ಕನ್ನಡದಲ್ಲಲ್ಲ. ಈ ದ್ವಿಪದಿಯು ಅಲ್ಲಿ ಮೊದಲು ಅಂಶಗಣವಾಗಿದ್ದದ್ದು ಕ್ರಮೇಣ ಮಾತ್ರಾಗಣಕ್ಕೂ ಬಂದಿದೆ. ಪಾಲ್ಕುರಿಕೆ ಸೋಮನಿಂದಲೇ ದ್ವಿಪದಿಗಳು ಅಲ್ಲಿ ಕಾವ್ಯ ಪ್ರಶಸ್ತಿಯನ್ನು ಪಡೆದುವೆಂದು ಹೇಳುತ್ತಾರೆ. ಅದು ಹೇಗೇ ಇರಲಿ, ದ್ವಿಪದಿ ಯೆಂಬುದು ತೆಲುಗಿನಲ್ಲಿ ಹುಟ್ಟಿದ್ದೆನ್ನುವುದು ನಿರ್ವಿವಾದ. ಕನ್ನಡದಲ್ಲಿ ಇಲ್ಲವಾದ ಈ ದ್ವಿಪದೀ ಬಂಧವು ಒಂದೇ ಸಮನೆ ನಮ್ಮ ಯಕ್ಷಗಾನದಲ್ಲಿ ಕಾಣಿಸಿಕೊಂಡದ್ದು ಆಂಧ್ರ ಯಕ್ಷಗಾನದ ಮಾದರಿಯಿಂದಲೇ ಸರಿಯೆಂಬುದನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ.
ಇನ್ನು ಕನ್ನಡದಲ್ಲಿ ಯಾಲಪದಗಳು (ತೆಲುಗು-ವಿಲಲು) ಎಂದು ಕರೆಯಲ್ಪಡುವ ಬಂಧವು ನಮ್ಮ ಯಕ್ಷಗಾನಗಳಲ್ಲಿ ಪ್ರವೇಶಿಸಿದೆ; ಆದರೆ, ನಮ್ಮ ಅನೇಕ ಯಕ್ಷಗಾನ ಗಳಲ್ಲಿ ಅವನ್ನು 'ಏಲೆ' ಅಥವಾ 'ಯಾಲಪದ' ಎಂಬ ಹೆಸರು ಕೊಡದೆ, ಏಕತಾಳ, ಅಷ್ಟತಾಳ, ತಿತ್ತಿತ್ತ ತಾಳಗಳ ಪದ್ಯಗಳೆಂದು ಮಾತ್ರ ಕೊಡಲಾಗಿದೆ. ಇನ್ನು ಸೌರಾಷ್ಟ್ರ ತ್ರಿವುಡೆ, ಶಂಕರಾಭರಣ ತ್ರಿವುಡೆ, ಮಧ್ಯಮಾವತಿ ತ್ರಿವುಡೆ ಎಂದು ಸಾಮಾನ್ಯವಾಗಿ ನಮ್ಮ ಯಕ್ಷಗಾನಗಳಲ್ಲಿ ಕರೆಯಲಾಗುವ ಪದ್ಯರೂಪಗಳು ಆಂಧ್ರಮೂಲದಿಂದಲೇ ಬಂದಿವೆ ಯೆನ್ನಬಹುದು. ಏಕೆಂದರೆ ನಮ್ಮ ಹಿಂದಿನ ಕಾವ್ಯಗಳಲ್ಲಿ ಇವು ಒಂದೂ ಸೇರಿಲ್ಲ. ಆಂಧ್ರದಲ್ಲಾದರೆ ಆ ರೂಪಗಳು ಬಹಳ ಹಿಂದಿನಿಂದಲೇ ಇವೆ. ಅಲ್ಲಿಯ ಛಂದೋಗ್ರಂಥ ಗಳಲ್ಲಿ ಅವುಗಳು ವೃಷಭಗತಿ, ಹಯಪ್ರಚಾರ, ಹರಿಣಗತಿ ಇತ್ಯಾದಿ ಹೆಸರಿನ ರಗಡಭೇದ ಗಳಾಗಿ ನಿರೂಪಿಸಲ್ಪಟ್ಟಿರುವುದನ್ನು ಕಾಣಬಹುದು. ಅಂತೆಯೇ ಭೈರವಿ ಜಂಪೆ ಹಾಗೂ.. ಘಂಟಾರವ ಜಂಪೆ ಎಂದಿರುವ ಯಕ್ಷಗಾನ ಪದಗಳು ಆಂಧ್ರದಲ್ಲಿ 'ದ್ವಿರದ ಗತಿರಗಡ ಗಳೆಂದು ಪ್ರಸಿದ್ಧವಾಗಿವೆಯಲ್ಲದೆ, ಮೂಲ ದ್ವಿಪದಿಯಿಂದಲೇ ಸೆಟೆದು ಉಂಟಾದ ಬಂಧ ಅದೆಂದು ಊಹಿಸಲಿಕ್ಕೂ ಲಕ್ಷಣತಃ ಅವಕಾಶವಿದೆ.
ಕೆಲವೊಂದು ಕನ್ನಡ ಯಕ್ಷಗಾನಗಳಲ್ಲಿ (ಉದಾ : ಪಾರ್ತಿಸುಬ್ಬನ ಪಂಚವಟಿ) 'ಚಂದಮಾಮ ಮತ್ತು ತಂದನನ' ಎಂಬ ಸೊಲ್ಲುಗಳು ಸೇರಿದ ಪದ್ಯರಚನೆ