ಈ ಪುಟವನ್ನು ಪ್ರಕಟಿಸಲಾಗಿದೆ
ಅಧ್ಯಕ್ಷ ಭಾಷಣ / ೧೫೭

ಪ್ರತಿಯಲ್ಲಿಯೂ ಇದೆಯಷ್ಟೆ! ಇಷ್ಟು ಮಾತ್ರ ಅಲ್ಲ ಹನುಮದ್ರಾಮಾಯಣದ ಕಥಾ ಭಾಗವು ಸಹ ರಾಮಾಯಣ ಪ್ರಸಂಗಗಳ ಕಥೆಯಿಂದ ಬಹುಧಾ ಭಿನ್ನವಾಗಿದೆ. ಶೂರ್ಪನಖಿಯ ಕುಚಚ್ಛೇದನವು ಅದರಲ್ಲಿಲ್ಲ. ವೆಂಕಾರ್ಯನ ಮಗ ಸುಬ್ಬನು ಬಸವಪ್ಪ ನಾಯಕನಿಂದ ರಾಜಮನ್ನಣೆ ಪಡೆದವನು. ಆಸ್ಥಾನ ಕವಿ ಎಂಬಿತ್ಯಾದಿ ಶ್ರೀ ಕಾರಂತರ ಹೇಳಿಕೆಗಳು ಕೇವಲ ಕಲ್ಪಿತ. ಈ ಕುರಿತು ಕೂಲಂಕುಶ ವಿಮರ್ಶೆಯನ್ನು ನನ್ನ ಗ್ರಂಥದಲ್ಲಿ ನೋಡುವಿರಿ.
ಹೀಗೆ ಕೇರಳದ ಕಥಕಳಿಯ ವಿಧಾತನಾದ 'ವಂಚಿಕ್ಷ್ಮಾ ವರ ಬಾಲವೀರ ಕೇರಳವಿಭು' ಎಂಬ ಖ್ಯಾತಿಯುಳ್ಳ ಕೊಟ್ಟಾರಕರ ಮಹಾರಾಜನಿಂದ ರಚಿಸಲ್ಪಟ್ಟ ಕಥಕಳಿ ದೃಶ್ಯ ಪ್ರಯೋಗದ ಆದ್ಯ ಪ್ರಬಂಧವಾದ 'ರಾಮನಾಟ'ವನ್ನು ಅನುಸರಿಸಿ ಪಾರ್ತಿಸುಬ್ಬನು ರಾಮಾಯಣ ಕೃತಿಗಳನ್ನು ರಚಿಸಿದನೆಂದು ಪ್ರತ್ಯಕ್ಷ ಪ್ರಮಾಣದಿಂದ ಸಿದ್ಧವಾಗುತ್ತದೆ. ಇನ್ನೇಕೆ ಅನುಮಾನ? ಕಥಕಳಿಯ ಸೃಷ್ಟಿಕರ್ತನು ತನಗೆ ಮಾತ್ರ ಅಲ್ಲ ಕನ್ನಡ ಯಕ್ಷಗಾನಕ್ಕೆ ಗುರು ಎಂಬ ಭಕ್ತಿಭಾವದಿಂದ ಯಕ್ಷಗಾನ ಪ್ರಯೋಗಾರಂಭದ ಪೂರ್ವರಂಗ ವಿಧಿಯಲ್ಲಿ ಸರ್ವರೂ ಆತನಿಗೆ ವಂದನೆಯನ್ನು ಸಮರ್ಪಿಸಬೇಕೆಂದು ಪಾರ್ತಿಸುಬ್ಬನು ವಿಧಿಸಿದ್ದಾನೆ. ನೀವೆಲ್ಲರೂ ತಿಳಿದೆ ಇರುವಂತೆ ಸಭಾ ಲಕ್ಷಣದಲ್ಲಿರುವ 'ವಂಚಿತರಾ ವಂಚಿತನುಂ .. ವಂಚಿತ ಮಹಾಶೂರ', 'ಬಾಲರಹೇ ವಂಶನುತ ಬಾಲಯಶೋಖ್ಯಾತ', 'ವರದ ರಘುಕುಲಕಾಯ ವಾರಣಧ್ವಂಸಿವರ ವಂಚಿತನ್ ವೀರ ಕೇರಳ ಶುಭೋ ಸಹಿತ' ಇತ್ಯಾದಿ ಮಲೆಯಾಳ ಭಾಷೆಯಲ್ಲಿ ಪಾಠದೋಷದಿಂದ ಕಂಡು ಬರುತ್ತಿರುವ ಪದ್ಯಭಾಗಗಳ ಮೂಲವನ್ನು ರಾಮನಾಟದ ಆರಂಭದಲ್ಲಿ ಮತ್ತು ಅಂತ್ಯದಲ್ಲಿರುವ ಮಂಗಲ ಪದ್ಯಗಳಿಂದ ತಿಳಿದುಕೊಳ್ಳಬಹುದಾಗಿದೆ.

'ವಂಚಿಕ್ಷ್ಮಾವರವೀರ ಕೇರಳವಿಭೋ ರಾಜ್ಯಃ ಸ್ವಸೋಃ ಸೂನುನಾ'ಎಂದು ಕೊಟ್ಟಾರಕರ ಮಹಾರಾಜನು ರಾಮನಾಟದ ಆರಂಭದಲ್ಲಿ ಸ್ವವಿಷಯವಾಗಿ ಹೇಳಿಕೊಂಡ ಪದ್ಯವಿದೆ. ಕೊಟ್ಟಾರಕರ ರಾಜ್ಯಕ್ಕೆ 'ವಂಚಿಕ್ಷ್ಮಾ' 'ವಂಚಿಧರಾ' (ವಂಚಿದೇಶ) ಎಂಬುದು ಚರಿತ್ರಪ್ರಸಿದ್ಧವಾದ ಹೆಸರು.

ಪಂಚಶರೋಪಮ ಸುಂದರನಿಜಗತಿ ವಂಚಿತ ವರಗಜರಾಗತಿಂ |
ವಂಚಿವೀರ ಕೇರಳ ಹೃದಯಾಂಬುಜ ನಿವಾಸಲೋಲಪದಾಂಬುರುಹಂ |
ವಂಚಿಧರಾವರ ಬಾಲವೀರ ಕೇರಳ ಮಾನಸ ವಾಸಹರೇ

ಎಂಬೀ ವಚನಗಳು ರಾಮನಾಟದ ಮಂಗಲ ಪದ್ಯಗಳಲ್ಲಿರುವಂಥವು. ಪ್ರತಿಯೊಬ್ಬ ಯಕ್ಷಗಾನ ಭಾಗವತನೂ, ವೇಷಧಾರಿಯೂ ತಿಳಿದಿರುವಂತೆ ನಮ್ಮ ಯಕ್ಷಗಾನ ಸಭಾ ಲಕ್ಷಣದಲ್ಲಿ, ಪೂರ್ವರಂಗ ವಿಧಿಯ ಪ್ರಾರಂಭಕ್ಕೆ ತಪ್ಪದೆ ಹಾಡಬೇಕೆಂಬ ನಿಯಮವಿರುವ 'ಹರಿಹರ .ಜಿತುಹರ ಅಮರ ಪೂಜಿತುರೇ ವಾಮನ ರೂಪ | ಏಕದಂತ ಚದುರೋ ಹಯತೇ- ಲಂಬೋದರರೇ | (ಚಾರು ಚತುರ್ಭುಜ ಲಂಬೋದರರೇ) ವಾರಣ ಕಾರಣ ನಾಗಾಭರಣ ಕಾಮಿತ ಫಲದಾಯಕ ಗಣನಾಥ' ಎಂಬುದಾಗಿ ಯಕ್ಷಗಾನ ಸಭಾ ಲಕ್ಷಣದ ಅಚ್ಚಿನ ಪುಸ್ತಕಗಳಲ್ಲಿ ಅಪಪಾಠದಿಂದ ಕಾಣುವ ಪದ್ಯವು ಕಥಕಳಿಯ 'ತೋಡಯ'ದಲ್ಲಿ ಮೊದಲನೆಯ ವಿಘ್ನೇಶ ಸ್ತುತಿ ಪದ್ಯವೇ ಆಗಿದೆ. ಕಥಕಳಿ ಪ್ರಸ್ಥಾನವು ತೊಡಗುವುದ ಈ ಪದ್ಯದಿಂದ. ಅದೇ ನಿಯಮವು ಯಕ್ಷಗಾನದಲ್ಲಿಯೂ ತಪ್ಪದೆ ಪಾಲಿಸಲ್ಪಡಬೇಕೆಂದು ಪಾರ್ತಿಸುಬ್ಬನು ವಿಧಿಸಿರುವಂತೆ ಇಂದಿನ ವರೆಗೆ ನಡೆದು ಬಂದಿರುವುದನ್ನೆಣಿಸಿದರೆ ನಮ್ಮ ಯಕ್ಷಗಾನವು ಪಾರ್ತಿಸುಬ್ಬನಿಗೂ, ಕಥಕಳಿಗೂ ಅದೆಷ್ಟು ಋಣಿಯಾಗಿದೆ ಎಂದು