ಈ ಪುಟವನ್ನು ಪ್ರಕಟಿಸಲಾಗಿದೆ
ಅಧ್ಯಕ್ಷ ಭಾಷಣ

ಕವಿಯಿಂದ ಅಜಪುರದ ಮಹಾಲಿಂಗನ ಅಂಕಿತದಲ್ಲಿ ರಚಿಸಲ್ಪಟ್ಟ ಇನ್ನೊಂದು ಬಾಲಲೀಲೆ ಪ್ರಸಂಗದ ಕೊನೆಯಲ್ಲಿ ಪ್ರತಿಕಾರರ ಅಥವಾ ಮುದ್ರಣಕರ್ತರ ಪ್ರಮಾದದಿಂದ ಸೇರಿಹೋಗಿದೆ. ಇಂತಹ ಪ್ರಮಾದಗಳು ಹೆಚ್ಚಿನ ಪ್ರಸಂಗಗಳಲ್ಲಿ ಸರ್ವಸಾಮಾನ್ಯವಾಗಿ ಸಂಭವಿಸಿರುವಂಥವು. ಇದೊಂದು ನೆಪವು, ವೆಂಕಾರ್ಯನ ಮಗ ಸುಬ್ಬನು 'ಅಜಪುರ ಮತ್ತು 'ಕಣ್ವಪುರ' ಈ ಎರಡು ಮುದ್ರೆಗಳನ್ನು ಧರಿಸಿದವನು ಎಂಬ ಶ್ರೀ ಕಾರಂತರ ವಾದಸತ್ರಕ್ಕೆ ಅಂಕುರಾರ್ಪಣವಾಯಿತು! ಅಪೂರ್ಣವಾಗಿ ಅಚ್ಚಾದ ಪಾರ್ತಿಸುಬ್ಬನಿಂದ ರಚಿಸಲ್ಪಟ್ಟ 'ಬಾಲಲೀಲೆ'ಯ ಕೊನೆಯಲ್ಲಿರುವ ಉಡುಪಿ ಕೃಷ್ಣನ ಸ್ತುತಿಪರವಾದ ಪ್ರಕ್ಷಿಪ್ತ ಪದ್ಯವೊಂದು ಆ ಗ್ರಂಥವೇ ದೇವೀದಾಸನ ಕೃತಿಯೆಂಬ ಕಲ್ಪನೆಗೂ ನೆಪವಾಯಿತು. ಯಾರೋ ಮಾಡಿದ ಅಪರಾಧಕ್ಕೆ, ಶಿಕ್ಷೆ ಪಾರ್ತಿಸುಬ್ಬನಿಗೆ! 'ಚೌರಾಪರಾಧಾನ್ಮಾಂಡವ್ಯ ನಿಗ್ರಹಃ' ಎಂಬ ನ್ಯಾಯಕ್ಕೆ ಸರಿಯಾಯಿತು. (ಕಳ್ಳರು ಕದ್ದುದಕ್ಕೆ ಶೂಲಕ್ಕೆ ಹಾಕಿದುದು ನಿರಪರಾಧಿಯಾದ ಮಾಂಡವ್ಯ ಮುನಿಯನ್ನು, ಅವನಿಗೆ ಪಾಪ ಮೌನವ್ರತ!)
ಪಾರ್ತಿಸುಬ್ಬನ ಈ 'ಬಾಲಲೀಲೆ'ಯಲ್ಲಿ ಪೂತನಾ ಸಂಹಾರದ ವರೆಗಿನ ಪೂರ್ವ ಸಂಧಿಯು ಮಾತ್ರ ಅಚ್ಚಾಗಿದೆ. ಇದೀಗ ನಿಮ್ಮ ಮುಂದಿರಿಸಿದ ಈ ಓಲೆ ಪ್ರತಿಯಲ್ಲಿ ಗೋಪೀ ವಸ್ತ್ರಾಪಹಾರದ ವರೆಗಿನ ಉಭಯ ಸಂಧಿಗಳು ಸಮಗ್ರವಾಗಿವೆ. ಈ ಪ್ರಬಂಧಕ್ಕೆ ಪಾರ್ತಿಸುಬ್ಬನು 'ಕೃಷ್ಣ ಚರಿತೆ' ಎಂದು ಹೆಸರಿಟ್ಟಿದ್ದಾನೆ. ರೂಢಿಯಲ್ಲಿ 'ಕೃಷ್ಣಲೀಲೆ' ಎಂದೂ, 'ಬಾಲಲೀಲೆ' ಎಂದೂ ವ್ಯವಹಾರವಿದ್ದರೂ ಗ್ರಂಥಾರಂಭದಲ್ಲಿ 'ಪರಮ ವೈಷ್ಣವ ಶುಕಾಚಾರ್ಯ ಮುನಿವದನಸರಸಿರುಹದಿಂದೊಗೆದ ಶ್ರೀಕೃಷ್ಣ ಚರಿತವನು ನಾ ವಿರಚಿಸುವ ಕನ್ನಡದ ಯಕ್ಷಗಾನದಲಿ...' ಎಂದು ಕವಿಯೇ ಹೇಳಿರುತ್ತಾನೆ. ಪಾರ್ತಿಸುಬ್ಬನು ತನ್ನ ರಾಮಾಯಣ ಪ್ರಬಂಧಗಳನ್ನೂ 'ರಾಮ ಚರಿತೆ' ಎಂದು ಕರೆದಿದ್ದಾನೆ. ರಾಮಾಯಣ ಪ್ರಬಂಧಗಳ ಕೆಲವು ಪದ್ಯಗಳಲ್ಲಿ ಇದು ಸೂಚಿತವಾಗಿದೆ. ಕೊನೆಯದಾದ ಕುಂಭಕರ್ಣಾದಿ ಕಾಳಗದ ಅಂತ್ಯಕ್ಕಿರುವ ಭರತ ವಾಕ್ಯದ ಪದ್ಯದಲ್ಲಿಯಂತು 'ರಾಮಚರಿತವನು ಕನ್ನಡ ಯಕ್ಷಗಾನದಲಿ ನಾ ಮನಸು ಬಂದಂತೆ ಬಂದಂತೆ ವರ್ಣಿಸಿದೆ' ಎಂದಿರುವನಷ್ಟೆ.ಇಡೀ 'ಕೃಷ್ಣ ಚರಿತೆ'ಯ ಓಲೆ ಪ್ರತಿಯಲ್ಲಿ 'ಶ್ರೀಕೃಷ್ಣ ಚರಿತೆ ಬರೆವುದಕ್ಕೆ ಶುಭಮಸ್ತು' ಎಂದೇ ಶಿರೋಲೇಖನವಿದೆ. ಇದೇ ಓಲೆ ಪ್ರತಿಯಲ್ಲಿ ಆತನ ರಚನೆ ಎಂದು ವಿಶ್ವಾಸಾರ್ಹವಾದ ರಾಮಕೃಷ್ಣ ಚರಿತೆ' ಎಂಬುದಾಗಿ ರಾಮಾಯಣ ಭಾಗವತಗಳನ್ನು ಸಂಕ್ಷಿಪ್ತವಾಗಿಯೂ, ಸಂಯುಕ್ತವಾಗಿಯೂ ರಚಿಸಿದ ೩೫ ಪದ್ಯಗಳ ಚಿಕ್ಕ ಪ್ರಬಂಧವೊಂದಿದೆ. ಪ್ರತಿ ಪದ್ಯದ ಎರಡು ಚರಣಗಳಲ್ಲಿ ಮೊದಲನೆಯದರಲ್ಲಿ ರಾಮಾಯಣ ಕಥೆಯೂ ಎರಡನೆಯದರಲ್ಲಿ ಭಾಗವತ ಕಥೆಯೂ ಅನುಕ್ರಮವಾಗಿ ವರ್ಣಿಸಲ್ಪಟ್ಟಿದೆ. ಅದರಿಂದ ಮಾದರಿಗಾಗಿ ಒಂದೆರಡು ಪದ್ಯಗಳನ್ನು ಕೇಳಿರಿ :
. ದಶಶಿರ ದೈತ್ಯನು ಲೋಕವ ಬಾಧಿಸೆ ದಶರಥಗುದಿಸಿದ ಶ್ರೀರಾಮ |
ವಸುಧೆಯ ಭಾರವ ಕಳೆಯಲು ಜನಿಸಿದ ವಸುದೇವನುದರದಿ ಶ್ರೀಕೃಷ್ಣ ||

ತಂದೆಯವರವನು ಸಲಿಸಲು ವನಕ್ಕೆ ತಂದನು ಲಕ್ಷ್ಮಣ ಸಹರಾಮ |
ವೃಂದಾವನದೊಳು ನಲಿನಲಿದಾಡುತ ಚಂದದೊಳಿದ್ದನು ಶ್ರೀಕೃಷ್ಣ ||

ವನಚರರೊಡಗೂಡಿ ವನಿತೆಯನರಸಲು ಹನುಮನ ಕಳುಹಿದ ಶ್ರೀರಾಮ|
ವನಜಾಕ್ಷಿಯರನು ಸಹಿತಲೆ ನಾನಾ ವಿನಯದೊಳಾಡಿದ ಶ್ರೀಕೃಷ್ಣ ||