ಅಣ್ಣರಾಮರಿಯದಂದದೊಳೊಮ್ಮೆ ಬಂದಿವಳ
ಬಣ್ಣದುಟಿಯ ಸವಿದ- ಕೇಳು ವಿನೋದ || ಸಣ್ಣವರಾಟವಲ್ಲ ||
ಗೋಪಿ: ಎಂದೂ ಎನ್ನಣುಗನಿಗೆ-ಆಲದ ಹಣ್ಣ |
ತಿಂದು ಅಭ್ಯಾಸವಾಗೆ |
ಒಂದರಿಯದ ಬಾಲ ಮುಗುದ ನಿನ್ನಧರವ |
ತಿಂದರಿಂದೇನಾಯಿತೆ?- ಪೇಳೆಲೆ ಕಾಂತೆ || ಚಿಕ್ಕವನಲ್ಲವೇನೆ? ||
ದಿಟ್ಟೆ: ನಸುಬೆಳಗಾಗುವಾಗ- ಯವ್ವನವತಿ |
ಮೊಸರ ಮಂತಿಸುತಿಪ್ಪಾಗ ||
ಕುಶಲದಿಂದಳೆದಮರ್ದಪುತ ತರುಣಿಯ |
ಪೊಸಕುಚಂಗಳ ಮುಟ್ಟಿದ ನೋಡು ವಿನೋದ || ಸಣ್ಣವನಾಟ ||
ಗೋಪಿ:ದೇವತಾರ್ಚನೆಗೆನ್ನುತ-ನತ್ಯದಲ್ಲಿ ರಾ |
ಜೀವಗಳನೆ ಕೊಯ್ಯುತ |
ತಾವರೆ ಮೊಗ್ಗ ಎಂದರಿಯದೆ ಮುಟ್ಟಲು |
ಅವಮಾನ ಘನವಾಯಿತೆ?- ಹೇಳೆಲೆ ಕಾಂತ || ಚಿಕ್ಕವನಲ್ಲವೇನೆ?||
ದಿಟ್ಟೆ:ನೀರನು ತರ ಹೋಹಾಗ- ಈ ಸುದತಿಯ |
ದಾರಿಯಡ್ಡವ ಕಟ್ಟಿದ |
ನಾರಿ ಹೇಳಿದಕೇನು ಬೆಲೆ ಕೊಟ್ಟೆ? ಎನುತುಟ್ಟ |
ಸೀರೆಯನೆಗೆದೋಡಿದ ಕೇಳು ವಿನೋದ || ಸಣ್ಣವರಾಟವಲ್ಲ ||
ಗೋಪಿ:ಆರೇಳು ವರ್ಷವಾದ- ಬಾಲಕನುಟ್ಟ
ಸೀರೆಯಂದವ ನೋಡಿದ |
ಸೌರಮ್ಯಾಂಬರವಿದರ ಬೆಲೆ ಏನೆನುತ ಮೇಲೆ |
ಹಾರಿಸಲೇನಾಯಿತೆ? |- ಹೇಳೆಲೆ ಕಾಂತ || ಚಿಕ್ಕವನಲ್ಲವೇನೆ?||
ಈ ರೀತಿ ಹಲವು ಪರಿಯ ಚಾಟುಸಂಭಾಷಣೆಗಳಾಗಿ ಕಡೆಗೆ ಗೋಪಿಯು 'ಇನ್ನು
ಮುಂದೆ ಕೃಷ್ಣನು ನಿಮ್ಮಲ್ಲಿ ಕಳ್ಳಚೇಷ್ಟೆಗೆ ಬಂದರೆ ಆತನನ್ನು ಹಿಡಿದೆಳೆದು ತನ್ನಿರಿ, ತಕ್ಕ
ಶಿಕ್ಷೆ ಮಾಡುತ್ತೇನೆ' ಎಂದು ಸಮಾಧಾನ ಹೇಳಲು ಗೊಲ್ಲತಿಯರು ಹಿಂತೆರಳುತ್ತಾರೆ.
ಆಮೇಲೊಂದು ದಿನ ಸಮಯ ಸಾಧಿಸಿ ಪಾಲ್ಮೊಸರು ಕದ್ದೋಡುವ ಗೋಪಾಲಕೃಷ್ಣ
ಅವರ ಕೈಗೆ ಸಿಕ್ಕುತ್ತಾನೆ. ಕಳ್ಳ ಸಿಕ್ಕಿದ ಸಂತೋಷದಿಂದ ಅವರು ತಮ್ಮೊಳಗೆ
ಒಬ್ಬರಿಗೊಬ್ಬರು ಕೃಷ್ಣನ ತಪ್ಪುಗಳನ್ನು ಹೀಗೆ ಮೆಚ್ಚಿಸಿಕೊಳ್ಳುತ್ತಾರೆ.
ಸಿಕ್ಕಿದ ಕಳ್ಳ-ಸಿಕ್ಕಿದ ಇವನ |
ಅಷ್ಟತಾಳ :
ಸೊಕ್ಕುಗಳನೆ ಮುರಿದಿಕ್ಕದೆ ಬಿಡೆವೀಗ || ಪಲ್ಲ ||
ಬೊಂಬೆಯ ಮದುವೆಯಾಟದೊಳಿರಲಿವ ಬಾಲ |
ನೆಂಬುದಕ್ಕಾಗಿ ಸುಮ್ಮನೆ ಬಿಟ್ಟೆವು |
ಕಂಬದ ಮರೆಗಾಗಿ ಕರೆದೊಯ್ದಿ ತರುಣಿಯ |
ಚುಂಬಿಸಿ ತುಟಿಕಚ್ಚಲುಚಿತವೇನಮ್ಮ? ||