ಈ ಪುಟವನ್ನು ಪ್ರಕಟಿಸಲಾಗಿದೆ

ಯಕ್ಷಗಾನ ಬಯಲಾಟದ ಸಭಾಲಕ್ಷಣ

ನಾಟ್ಯ ಪ್ರಯೋಗದಲ್ಲಿ ಮುಖ್ಯ ಕಥಾರಂಭಕ್ಕೆ ಮೊದಲು ರಂಗಸ್ಥಳದಲ್ಲಿ ವಿಘೋಪಶಾಂತಿಗಾಗಿ ದೇವತಾ ಸ್ತುತಿಪೂರ್ವಕ ಏನೊಂದು ವಿಧಿವಿಧಾನಗಳು ನಡೆಯ ತಕ್ಕದ್ದಿವೆಯೋ ಅವಕ್ಕೆಲ್ಲಾ ಬಯಲಾಟ ಸಂಪ್ರದಾಯದಲ್ಲಿ, ಸಮಷ್ಟಿಯಿಂದ 'ಸಭಾ ಲಕ್ಷಣ'ವೆಂದು ಕರೆಯಲಾಗಿದೆ. ಇದನ್ನು ಸಭಾವಂದನೆಯೆಂದೂ, ಮಂಗಳಾಚಾರವೆಂದೂ, ಪೂಜಾವಿಧಿಯೆಂದೂ• ಕರೆಯುವುದುಂಟು. ಸಂಸ್ಕೃತ ನಾಟಕಗಳಲ್ಲಿ ಹಾಗೂ ಕೆಲವೊಂದು ನಾಟ್ಯಲಕ್ಷಣ ಗ್ರಂಥಗಳಲ್ಲಿ ಇದನ್ನು 'ನಾಂದೀವಿಧಿ' ಎಂದು ಕರೆಯಲಾಗಿದೆ. ಭರತ ಮುನಿಯ ನಾಟ್ಯಶಾಸ್ತ್ರದಲ್ಲಿ 'ದೇವಪೂಜಾಧಿಕಾರ'ವೆಂಬ ಈ ಕ್ರಿಯಾಕಲಾಪಗಳೆಲ್ಲವನ್ನೂ ಒಳಗೊಳ್ಳುವ 'ಪ್ರಯೋಗ'ಕ್ಕೆ 'ಪೂರ್ವರಂಗ'ವೆಂದು ಹೆಸರಿಸಲಾಗಿದೆ.

ಯಸ್ಮಾದ್ರಂಗ ಪ್ರಯೋಗೋsಯಂ ಪೂರ್ವಮೇವ ಪ್ರಯೋಜ್ಯತೇ ।
ತಸ್ಮಾದಯಂ ಪೂರ್ವರಂಗೋ ವಿಶ್ಲೇಯೋSತ್ರ ದ್ವಿಜೋತ್ತಮಾಃ ॥
ಅಸ್ಯಾಂಗಾನಿ ತು ಕಾರ್ಯಾಣಿ ಯಥಾವದನುಪೂರ್ವಶಃ ।
ತಂತ್ರೀಭಾಂಡಸಮಾಯೋಗೈ: ಪಾಠ್ಯಯೋಗಕೃತೈಸ್ತಥಾ ॥

ಅರ್ಥ : ಯಾವ ಕಾರಣದಿಂದ ಈ ಪ್ರಯೋಗವು ಮೊದಲು ನಡೆಯತಕ್ಕದ್ದು ಮತ್ತು ಪ್ರಧಾನವಾಗಿ ಆಚರಿಸಬೇಕಾಗಿರುವುದೋ ಅದಕ್ಕಾಗಿ ಇದನ್ನು ಪೂರ್ವರಂಗವೆಂದು ಕರೆಯಲಾಗಿದೆ. ಈ ಪೂರ್ವರಂಗದಲ್ಲಿ ಅನೇಕ ಉಪಾಂಗಗಳಿವೆ. ಅವುಗಳೆಲ್ಲಾ ವೀಣೆ, ವೇಣು ಮುಂತಾದ ಸ್ವರವಾದ್ಯಗಳಿಂದಲೂ ಮೃದಂಗ ಪಟಹಾದಿ ತಾಳವಾದ್ಯಗಳಿಂದಲೂ ಕೂಡಿ, ಶ್ಲೋಕ ಗೀತ ಮಾತುಗಳಿಂದ ಅನುಕ್ರಮವಾಗಿ ಪ್ರಯೋಗಿಸಲ್ಪಡತಕ್ಕವು. 'ಪೂರ್ವರಂಗ'ವೆಂಬ ಈ ಸಂಯುಕ್ತ ಪದದಲ್ಲಿ 'ಪೂರ್ವ' ಶಬ್ದಕ್ಕೆ ಮೊದಲನೆಯದೆಂದೂ, ಪ್ರಧಾನವಾದುದೆಂದೂ ಎರಡು ಅರ್ಥಗಳು ಪ್ರಸಿದ್ಧವಾಗಿವೆ. ನಾಟ್ಯಶಾಸ್ತ್ರದಲ್ಲಿ ಹೇಳಿದ ಈ ಪೂರ್ವರಂಗದ ಉಪಾಂಗಗಳು ಯಾವುದೆಂದರೆ ಪ್ರತ್ಯಾಹಾರ, ಆಶ್ರಾವಣ, ಆರಂಭ,ಸಂಗೀತವಿಧಿ, ನಿರ್ಗೀತ ವಿಧಿ, ಉದ್ಲಾಪನ, ಪರಿವರ್ತನ, ರಂಗಾರಚಾರಿ, ಮಹಾಚಾರಿ ಎಂಬವು.

ಪ್ರತ್ಯಾಹಾರಾದಿ ಚಾರಂತಂ ರಂಗದೈವತಪೂಜನಂ - ಎಂಬ ಲಕ್ಷಣವಿದೆ.

ಅರ್ಥ : ಇಷ್ಟು ವಿಧಾನಗಳಿಗೂ ಶಾಸ್ತ್ರರೂಢಿಯಲ್ಲಿ 'ರಂಗದೈವತಪೂಜನ' ಎಂಬ ಹೆಸರು. ಅದರ ಕ್ರಮ ಹೀಗಿದೆ : ಮೊದಲಾಗಿ ರಂಗಸ್ಥಳದಲ್ಲಿ ವಿಧಿಪ್ರಕಾರ ಮಂಡಲ ವನ್ನು ಬರೆದು ಅದರಲ್ಲಿ ಮಹಾರುದ್ರನೇ ಮೊದಲಾದ ನಾನಾ ದೇವತೆಗಳಿಗೆ ತಕ್ಕ ಸ್ಥಾನವನ್ನು ಕಲ್ಪಿಸಿ ಆಹ್ವಾನಿಸಬೇಕು. ಅದರ ಲಕ್ಷಣಶ್ಲೋಕ ಹೀಗಿದೆ :

ಆದೌ ನಿವೇಶ್ಯ ಭಗವಾನ್ ಸಾರ್ಧ೦ ಭೂತಗಣೆ: ಶಿವಃ ।
ನಾರಾಯಣ್‌ ಮಹೇಂದ್ರಶ್ಚ ಸ್ಕಂದಾರ್ಕಾವಶ್ಚಿನ್ ಶಶೀ ।।
ಸರಸ್ವತೀಂ ಚ ಲಕ್ಷ್ಮೀಂ ಚ ಶ್ರದ್ಧಾ೦ ಮೇಧಾಂ ಚ ಪೂರ್ವತಃ ।
ನಾಗರಾಜಕುಮಾರೀಂ ಚ ತಥಾ ವಿಘ್ನ ವಿನಾಯಕಾನ್ ।।
ಏವಮನ್ಯಾನ್‌ ಖುಷೀನ್ ಸರ್ವಾನ್ ನಾಗರಾಜಂ ಖಗೇಶ್ವರಂ । ಇತ್ಯಾದಿ.