ವೆಂಕಟೇಶನು ಬರೆಸಿಕೊಟ್ಟ ಗೇಣಿಚೀಟಿನ ಕ್ರಮವೆಂತೆಂದ್ರೆ- ನಿಮ್ಮ ಚಿಕ್ಕತಂದೆ ಸುಬ್ಬಯ್ಯ
ಶಾನುಭಾಗರಿಗೆ ಗ. ೨||೦ಕ್ಕೆ ಬರಕೊಟ್ಟ ಪತ್ರಲೆಕ್ಕದ ಹೊರ್ತು ಬೇರೆ ಈ ವರ್ಷಕ್ಕೆ
ನಿಮ್ಮಿಂದ ಚಾಲುಗೇಣಿಗೆ ಗೆಯ್ಯುವರೆ ಮಾಡಿಕೊಂಡ ಕಣಿಪುರ ದೇವಸ್ಥಾನದ ತೆಂಕ
ಪಾರ್ಶ್ವದಲ್ಲು ಇರುವ ಮಾನುದಾಸನ ಹಿತ್ತಿಲನ್ನು ಗೇಣಿಗೆ ಗಯ್ಯುವರೆ ಮಾಡಿಕೊಂಡು
ಕೊಡುವರೆ ಮಾಡಿದ ಗೇಣಿ ರೂ. ಗ ||೧|೦ ಆರ್ಹಣ ಹಾಗವು.... (ಮಲೆಯಾಳ
ಬರಹದಲ್ಲಿ) ವೆಂಕಟೇಶನ ರುಜು, ಕಿದೂರು ಈಶ್ವರಯ್ಯನ ಸಾಕ್ಷಿ."
ಹೀಗಿರುವುದರಿಂದ ಕೋರ್ಟು ದಾಖಲೆಯ ಪಾರ್ತಿಸುಬ್ಬಣ್ಣನೆಂಬುವನು ಕವಿ
ಪಾರ್ತಿಸುಬ್ಬನಲ್ಲವೆಂಬುದು ಮತ್ತೆ ದೃಢವಾಯಿತು. ಮೂಡಪ್ಪದ ಲೆಕ್ಕದ ಪಟ್ಟಿಯಲ್ಲಿ
ಕಾಣುವ ಜನರ ಹೆಸರುಗಳೂ ಪ್ರಾಕು ದಾಖಲೆಯಲ್ಲಿ ಇದ್ದುದನ್ನೇ ಬರೆದಿಟ್ಟಿದ್ದೆಂದಾದ
ಪಕ್ಷದಲ್ಲಿ ಅಲ್ಲಿ ಕಾಣುವ ಕಣಿಪುರದ ಪಾರ್ತಿಸುಬ್ಬನು ನಿಜವಾದ ಕವಿ ಪಾರ್ತಿಸುಬ್ಬ
ನಾಗಿರಬಹುದು. ಅದಲ್ಲದೆ ಹೋದಲ್ಲಿ ಆತನು ಇನ್ನೂರು ವರ್ಷಗಳ ನಂತರ ಆ
ಕಣಿಪುರದಲ್ಲಿದ್ದ ಸ್ಥಾನಿಕ ವರ್ಗದ ಇನ್ನೊಬ್ಬ ಪಾರ್ತಿಸುಬ್ಬನೇ ಸರಿ. ಹೀಗೆ ಒಂದೇ
ಹೆಸರಿರುವವರು ಕಾಲಾಂತರದಲ್ಲಿ ಒಂದೇ ಸ್ಥಳದಲ್ಲಿ ಇರಲಾರರೆಂದೇನೂ ಇಲ್ಲ. ಹಾಗೂ
ಪಾರ್ತಿಸುಬ್ಬನೆಂಬ ಹೆಸರಾಗಬೇಕಿದ್ದರೆ ಆ ವ್ಯಕ್ತಿಯು ಪಾರ್ತಿ ಎಂಬವಳ ಮಗನೇ
ಆಗಬೇಕೆಂದೂ ಇಲ್ಲ, 'ಪಾರ್ತಿ'ಯನ್ನು 'ಸಂಬಂಧ'ಕ್ಕೆ ಇಟ್ಟುಕೊಂಡವನಿಗೂ ಆ ಹೆಸರು
ಬೀಳಬಹುದು. ಹಾಗೆ ಅಚ್ಚಮ್ಮನ ಮಾಲಿಂಗ, ಅಮ್ಮಣ್ಣಿ ರಾಮ, ಬಾಲಕ್ಕನ ಗೋವಿಂದ
ಇತ್ಯಾದಿ ಹೆಸರಾದವರು ಆ ಊರಿನಲ್ಲಿ ಬೇರೆ ಎಷ್ಟೋ ಮಂದಿ ಇದ್ದರು, ಇದ್ದಾರೆ.
ಅದೇನಿದ್ದರೂ ಪಾರ್ತಿಸುಬ್ಬನ ಹೆಸರಿನ ಒಂದು ಹಿತ್ತಿಲು ಇದ್ದಿತ್ತೆಂಬುದೂ ಅದು
ಕೂಡಲು ಮನೆಯವರಿಗೆ ಹೋಗಿತ್ತೆಂಬುದೂ ಆತನು ಸ್ಥಾನಿಕ ಹಾಗೂ ಪಾಟಾಳಿಯಾಗಿದ್ದ
ನೆಂಬುದೂ ಮೇಲಿನ ಕಟ್ಟುಕಡಿ ರಶೀದಿಯಿಂದ ನಿರ್ಣಯವಾಗುವುದು. ಹಿಂದೆ ಕೊಟ್ಟ
ಮೂಡಪ್ಪದ ದಾಖಲೆಯು ದಿ| ಗೋವಿಂದ ಪೈಗಳ ಹೇಳಿಕೆಯಲ್ಲಿ 'ಓಲೆಗರಿಯದೇನೋ'
ಎಂದಿರುವುದಾದರೆ, (ಮಾಯಿಪಾಡಿ) ಸಿರಿಬಾಗಿಲು ವೆಂಕಪ್ಪಯ್ಯನೆಂಬವರು ಪಾರ್ತಿಸುಬ್ಬನ
ಹೆಸರಿರುವ ಆ ಲೆಕ್ಕವು ಕಡತದಲ್ಲಿ ಬರೆದಿದ್ದುದನ್ನು ತಾವು ನೋಡಿರುವುದಾಗಿ ಹೇಳಿದ್ದಿದೆ.
(ಲೇಖನ 'ಮಧುರಸ್ಮೃತಿ', ಗ್ರಂಥ, ಪು. ೫೧-೫೨, ಗೀತಾ ಪ್ರಕಾಶನ, ಕಾಸರಗೋಡು,
೧೯೬೫) ಮೇಲೆ ಪಡಿಯಚ್ಚಿನಲ್ಲಿ ಕೊಟ್ಟಿರುವುದು (ಚಿತ್ರ ೪-೧, ೪-೨) ಆ ಓಲೆಯದೋ
ಕಡತದ್ದೋ ಪಟ್ಟಿಯಿಂದ ಕೂಡಲು ಶ್ಯಾನುಭಾಗರು ಕಾಗದದಲ್ಲಿ ತೆಗೆದು ಬರೆದಿಟ್ಟ
ಪ್ರತಿಯಾಗಿರಬೇಕು.......
(ಪಾರ್ತಿಸುಬ್ಬನ ಯಕ್ಷಗಾನಗಳು : ಕನ್ನಡ ಅಧ್ಯಯನ ಸಂಸ್ಥೆ,
ಮೈಸೂರು ವಿಶ್ವವಿದ್ಯಾಲಯ ೧೯೭೫.)