೨೬೨ / ಕುಕ್ಕಿಲ ಸಂಪುಟ
ವಾಗಿಯೇ ಬರೆಯಬೇಕಾಗಿದ್ದಿರುವುದರಿಂದ ಪ್ರಕೃತ ಆ ವಿಷಯವನ್ನು ಸಶೇಷವಾಗಿರಿಸಿ ಪ್ರಸ್ತುತವನ್ನು ಪೂರೈಸೋಣ.
ಇಲ್ಲಿ ಇನ್ನೊಂದು ವಿಚಾರವು ಸೂಚಿಸತಕ್ಕದ್ದಿದೆ. ಎಂದರೆ, ಮೇಲೆ ಹೇಳಿದಂತೆ ಹಾಡತಕ್ಕ 'ಪದ'ಕ್ಕೆ ಅಥವಾ ವಾಗ್ಗೇಯ ಪ್ರಬಂಧಕ್ಕೆ 'ವರ್ಣಕ' ಎಂಬ ಸಂಜ್ಞೆಯೂ ಗಾನಕ್ರಿಯೆಗೆ ಎಂದರೆ ಹಾಡುವಿಕೆಗೆ ವರ್ಣ ಎಂಬ ವ್ಯವಹಾರವೂ ಸಂಗೀತಶಾಸ್ತ್ರದ ಪರಿಭಾಷೆಯಲ್ಲಿದ್ದುದೇ ಆದುದರಿಂದ ನಮ್ಮ ಅಲಂಕಾರಿಕರ ವಸ್ತುಕ- ವರ್ಣಕ ಎಂಬ ಕಾವ್ಯ ವಿಭಾಗದಲ್ಲಿ 'ವರ್ಣಕ' ಅಥವಾ 'ವರ್ಣಕವಿತೆ' ಎಂದು ಹಾಡುಗಬ್ಬವನ್ನೇ ಹೇಳಿದ್ದಿರ ಬೇಕೆಂದು ನ್ಯಾಯವಾಗಿ ಊಹಿಸಬಹುದು. ಕವಿಗಳು ಹಾಗೂ ಲಕ್ಷಣಕಾರರು ಕೆಲವರಲ್ಲಿ ಇದೇ ಅಭಿಪ್ರಾಯವಿದ್ದಿರುವಂತೆ ತಿಳಿಯುವುದು. ತಾತ್ಪರ್ಯವಾಗಿ ವರ್ಣಕವೆಂದರೆ ಹಾಡುಗಬ್ಬವೆಂದೂ ವಸ್ತುಕವೆಂದರೆ ಬಾಜನೆಗಬ್ಬವೆಂದೂ ಮೂಲಾರ್ಥವಿದ್ದಿರುವುದು ಸಹಜವಾಗಿ ಕಾಣುವುದು.
ಹೀಗೆ ಲಕ್ಷಣ ಶುದ್ದವಾಗಿ ಬೆದಂಡೆ ಎಂಬುದು ಕರ್ಣಾಟಕ ಜಾತಿಛಂದಸ್ಸುಗಳಿಂದ ರಚಿಸಲ್ಪಡುತ್ತಿದ್ದ ಹಾಡುಗಬ್ಬ, ನಿಜವಾದ ವರ್ಣಕವೆಂದರೆ ಅದೇ ಸರಿ. ಬೆದಂಡೆ ಎಂಬುದು ಅದಕ್ಕಿದ್ದ ರೂಢಿಯ ಹೆಸರೆಂದು ನಾಗವರ್ಮನೇ ಹೇಳಿರುತ್ತಾನಷ್ಟೆ? ಈ ರೂಢಿಗಾದರೂ ನಿಜವಾದ ಅರ್ಥವೇನಾದರೂ ಇದೆಯೇ ಎಂಬುದನ್ನೀಗ ಪರಿಶೀಲಿಸ ಬೇಕು.
ಕೇಶಿರಾಜನು ಶಬ್ದಮಣಿದರ್ಪಣದಲ್ಲಿ 'ಬೆದಂಡೆ' ಎಂಬುದು 'ವೈದಂಡಿಕಂ' ಎಂಬ ಸಂಸ್ಕೃತಪದದ ತದ್ಭವ ರೂಪವೆಂದೂ ಅದು ಒಂದು ಕಾವ್ಯವೆಂದೂ ಹೇಳುತ್ತಾನೆ. ಆದರೆ ಸಂಸ್ಕೃತದಲ್ಲಿ ಆ ಹೆಸರಿನ ಕಾವ್ಯಭೇದವಿದ್ದಂತೆ ತಿಳಿಯುವುದಿಲ್ಲ. ಹಾಗಾಗಿ ಸಾಹಿತ್ಯದೃಷ್ಟಿ ಯಿಂದ ಇದು ಅನ್ವರ್ಥನಾಮವೆಂದು ಹೇಳುವಂತಿಲ್ಲ. ಸಂಗೀತದ ದೃಷ್ಟಿಯಲ್ಲಿ ಪರಿಶೀಲಿಸಿದ್ದಾದರೆ ಈ ಹೆಸರು ಅನ್ವರ್ಥವಾಗಿಯೇ ರೂಢಿಯಲ್ಲಿ ಬಂದುದಿರಬೇಕೆಂದು ತೋರುವುದು. ಹಿಂದಿನ ದೇಶೀಗಾನ ಸಂಪ್ರದಾಯದಲ್ಲಿ ವಿಶಿಷ್ಟವಾದ ಒಂದೊಂದು ಗೇಯಭಾಗಕ್ಕೂ 'ದಂಡೀ' ಎಂಬ ಹೆಸರು ರೂಢಿಯಲ್ಲಿದ್ದಂತೆ ತಿಳಿಯುವುದು. ಆ ಪ್ರಕಾರ ಠಾಯೆ, ಆಲಾಪ, ಗೀತ, ಪ್ರಬಂಧ ಇವು ನಾಲ್ಕೂ ಒಂದೊಂದು ದಂಡಿಗಳು. ಈ ನಾಲ್ಕು ದಂಡಿಗಳನ್ನು ಕ್ರಮದಂತೆ ವಿಸ್ತರಿಸುವ ಸಂಪೂರ್ಣ ಗಾನಕ್ಕೆ 'ಚತುರ್ದಂಡೀ' ಸಂಪ್ರದಾಯ ಎಂದು ಹೆಸರು. ಇದಕ್ಕನುಸಾರವಾಗಿಯೇ ಪ್ರಸಿದ್ಧ ಸಂಗೀತಶಾಸ್ತ್ರಕರ್ತನಾದ ವೆಂಕಟ ಮಖಿಯು ತನ್ನ ಗ್ರಂಥವನ್ನು 'ಚದುರ್ದಂಡೀ ಪ್ರಕಾಶಿಕೆ' ಎಂದು ಕರೆದಿದ್ದಾನೆ. ಹಾಗೂ
ಈ ನಾಲ್ಕು ದಂಡಿಗಳನ್ನು ಪ್ರತ್ಯೇಕ ನಾಲ್ಕು ಅಧ್ಯಾಯಗಳಲ್ಲಿ ನಿರೂಪಿಸಿರುತ್ತಾನೆ. ಪೂರ್ವದಲ್ಲಿ ಗೋಪಾಲ ನಾಯಕನೆಂಬ ಸಂಗೀತ ಪರಿಣತನು ಈ ಚತುರ್ದಂಡೀ ಗಾನದಲ್ಲಿ ಪ್ರಖ್ಯಾತನಾಗಿದ್ದನೆಂದು ವೆಂಕಟಮಖಿಯ ಗ್ರಂಥದಿಂದ ತಿಳಿಯಬಹುದು. ಈ ದಂಡೀಗಾನ ಸಂಪ್ರದಾಯವು ಬಹಳ ಪುರಾತನ ಪರಂಪರೆಯದೆಂದು ತಂಜಾವೂರಿನ ತುಳಜೀ ಮಹಾರಾಜನ ಸಂಗೀತಶಾಸ್ತ್ರ ಗ್ರಂಥದಿಂದಲೂ ವ್ಯಕ್ತವಾಗುವುದು. ಗಾನದಲ್ಲಿ ಪ್ರಬಂಧಗಳನ್ನು ಹಾಡುವ ಕ್ರಮವೆಂಬುದು ವಿಶೇಷವಾದ ಒಂದು ದಂಡಿಯಾಗಿತ್ತು. ಈ ದಂಡೀ ವಿಷಯಕವಾದ ವಸ್ತುವೇ ಎಂದರೆ ಪ್ರಬಂಧವೇ ವಿದಂಡಿಕ, 'ವಿ' ಎಂಬ ಉಪಸರ್ಗವು
೧. “ವಸ್ತುಕ ಕವಿಗಳ ಕಾವ್ಯಗೋಷ್ಠಿಯುಂ ವರ್ಣಕ ಕವಿಗಳ ಗೀತಗೋಷ್ಠಿಯುಂ ಮನಂಗೊಳಿಸ”