ಈ ಪುಟವನ್ನು ಪ್ರಕಟಿಸಲಾಗಿದೆ

೨೬೪ / ಕುಕ್ಕಿಲ ಸಂಪುಟ

ಹೀಗಿರುವುದರಿಂದ ಈ ಚತ್ತಾಣವೆಂಬುದೂ ನ್ಯಾಯವಾಗಿ ಅಂಥ ಒಂದು ಗೇಯ ಕಾವ್ಯವೆಂಬುದರಲ್ಲಿ ಸಂದೇಹವಿಲ್ಲ. ಆದರ ಈ ಹೆಸರೂ ಅನ್ವರ್ಥವಾಗಿಯೇ ಬಂದಿದೆ ಎಂಬುದನ್ನು ಊಹಿಸಬಹುದು. ಕಂದ, ವೃತ್ತ, ಅಕ್ಕರ, ಚೌಪದಿ, ಗೀತಿಕೆ, ತ್ರಿಪದಿ ಎಂಬ ಆರು ವಿಧದ ಛಂದಸ್ಸುಗಳೇ ಇದರಲ್ಲಿರುವುದಾದ್ದರಿಂದ ಇದು 'ಷಟ್‌ಸ್ಥಾನಕಾವ್ಯ'ವೆಂಬ ಹೆಸರನ್ನು ಸಹಜವಾಗಿಯೇ ಪಡೆದಿರಬೇಕು. ಷಟ್‌ಸ್ಥಾನದ ತದ್ಭವರೂಪವೇ ಚತ್ತಾಣ. ಕಾವ್ಯದ ಹೆಸರಾದ್ದರಿಂದ 'ಚತ್ತಾಣಂ' ಎಂದು ನಪುಂಸಕಲಿಂಗವಾಗಿರುವುದೂ ಸಹಜವೇ ಸರಿ. ಈ ಆರೇ ವಿಧದ ಬಂಧಗಳಿಗೆ ಆಶ್ರಯಸ್ಥಾನವಾದ ವಿಶಿಷ್ಟಗೇಯಕಾವ್ಯ ಅಥವಾ ಪಾಡುಗಬ್ಬವೇ 'ಚತ್ತಾಣ'- (ಷಣ್ಣಾಂ ಛಂದೋವಿಶೇಷಾಣಾಂ ಸ್ನಾನಂ ಷಟ್‌ಸ್ಥಾನಂ)

ನಮ್ಮ ಕರ್ಣಾಟಕ ದೇಶೀ ಸಂಗೀತ ಸಂಪ್ರದಾಯದಲ್ಲಿ, 'ಗೋಂಡಲಿ' ಮುಂತಾದ ಕರ್ಣಾಟಕ ದೇಶೀಯ ನೃತ್ತ ಪದ್ಧತಿಗಳಲ್ಲಿ ಸಮೇತ, ಏಲೆಯೇ ಮೊದಲಾದ ಕನ್ನಡ ಪದಜಾತಿಗಳು, ಮತಂಗನ ಕಾಲದಲ್ಲಿಯೇ ಅತ್ಯಂತ ಪ್ರಸಿದ್ಧವಾಗಿದ್ದುವೆಂದು 'ಬೃಹದ್ದೇಶಿ'ಯಿಂದ ತಿಳಿಯಬಹುದಾಗಿದೆ. ಕನ್ನಡ ಜಾತಿ ಛಂದಸ್ಸುಗಳಲ್ಲಿ ಅಕ್ಕರಗಳೆಂದು ಕರೆಯಲ್ಪಡುವವಕ್ಕೆ ಸಂಗೀತಗ್ರಂಥಗಳಲ್ಲಿ ವರ್ಣ, ವರ್ಣಸರ ಎಂಬ ಹೆಸರುಗಳಿದ್ದಂತೆ ತಿಳಿಯಬಹುದು. ಪಿರಿಯಕ್ಕರದ ಎರಡು ಪಾದಗಳೆಂದೇ ಹೇಳಬಹುದಾದ ಹಾಗೂ ಸಂಗೀತಶಾಸ್ತ್ರದಲ್ಲಿ ಹೇಳುವ ಕಾಮಲೇಖ ಎಂಬ ಏಲಾ ಪ್ರಭೇದಕ್ಕೆ ನಿರ್ವಿಶೇಷವಾದ ನಮ್ಮ 'ಸಾಂಗತ್ಯ'ಕ್ಕೂ 'ಸೊಬಗಿನ ಸೋನೆ' ಎಂಬ ಬಂಧಕ್ಕೂ 'ವರ್ಣ' ಎಂಬ ಹೆಸರು ರೂಢಿಯಲ್ಲಿರುವುದನ್ನು ಇಲ್ಲಿ ಗಮನಿಸಬಹುದು. ರತ್ನಾಕರವರ್ಣಿಯು ತನ್ನ 'ಭರತೇಶ ವೈಭವ'ವನ್ನು 'ವರ್ಣಕ' ಕಾವ್ಯವೆಂದು ಕರೆದಿರುವುದೂ ಗಮನಾರ್ಹವಾಗಿದೆ.






(ಪ್ರಬುದ್ಧ ಕರ್ನಾಟಕ : ಕಮ್ಮಟದ ಕಿಡಿಗಳು)