೨೭೪ / ಕುಕ್ಕಿಲ ಸಂಪುಟ
ಭರತನು ಹಾಗೂ ಅಭಿನವಗುಪ್ತನು ಹೇಳುವ ಶ್ರುತಿಲಕ್ಷಣವು ಹೀಗಿರುವುದಲ್ಲ
ಎಂದಷ್ಟೇ ಅಲ್ಲ ಇದಕ್ಕೆ ವಿರುದ್ಧವಾಗಿಯೇ ಇದೆ ಎಂಬುದನ್ನು ಹಿಂದೆ ಅಭಿನವಗುಪ್ತನ
ವ್ಯಾಖ್ಯಾನ ಸಂದರ್ಭದಲ್ಲಿ ನೋಡಿದೆವು. ಶಾರ್ಙ್ಗದೇವನು ಹೇಳುವ 'ಧ್ವನ್ಯಂತರಾಶ್ರುತಿ'
ಎಂಬ ಲಕ್ಷಣದ ಪ್ರಕಾರ ಆ ಶ್ರುತಿಗಳು ಕನಿಷ್ಟತಮ ಅಂತರದಲ್ಲಿ ಗೋಚರಿಸುವ ನಾದ
ಗಳೆಂದಾಗುವುದು. ಹೇಗೆ? ಮಧ್ಯದಲ್ಲಿ ಇನ್ನೊಂದು ಕೇಳಿಸುವುದಿಲ್ಲವೆಂಬ ನಾದಗಳೆಂದರೆ
ಅಂತರತಮ ಧ್ವನಿಗಳೇ ಆಗಿರಬೇಕೆಂದಿಲ್ಲ. ಏಕೆಂದರೆ ಧ್ವನಿಭೇದವನ್ನು ಗುರುತಿಸಲು
ಸಾಧ್ಯವಿಲ್ಲವೆಂಬುದಕ್ಕೆ ಒಂದು ಗರಿಷ್ಠಮಿತಿ ಉಂಟಷ್ಟೆ? ಅದು ಕೆಳಗಿನ ನಾದದಿಂದ ಎಷ್ಟು
ದೂರ ಮೇಲಕ್ಕೆ ಇರುವುದೋ ಮೇಲಿನ ನಾದದಿಂದಲೂ ಕೆಳಕ್ಕೆ ಅಷ್ಟೇ ದೂರದಲ್ಲಿರ
ಬಹುದು. ಎರಡು ಶ್ರುತಿಗಳೊಳಗೆ ಅಷ್ಟೊಂದು ಅಂತರವಿದ್ದರೂ ಧ್ವನ್ಯಂತರಾಶ್ರುತಿ
ಎಂಬ ಲಕ್ಷಣಕ್ಕೆ ಬಾಧೆ ಬರುವಂತಿಲ್ಲ. ಆದ್ದರಿಂದ ಮಧ್ಯದಲ್ಲಿ ಮೂರನೇ ಧ್ವನಿಯು
ಕೇಳದಿರುವ ಸ್ಥಿತಿಯಲ್ಲಿ ನಾದಗಳು ಒಂದರಿಂದೊಂದು ಹೆಚ್ಚೆಂದರೆ ಎಷ್ಟು ಅಂತರ
ದಲ್ಲಿರಬಹುದೋ ಆ ಗರಿಷ್ಠ ಪ್ರಮಾಣದಲ್ಲಿರುವ ಉಚ್ಚನೀಚ ನಾದಗಳೇ ಶ್ರುತಿಗಳೆಂದು
ಶಾರ್ಙ್ಗದೇವನ ಉದ್ದಿಷ್ಟಾರ್ಥವಾಗಿರಲಾರದೆ? ನ್ಯಾಯವಾಗಿ ಅದು ಹಾಗೆಯೇ ಇರಬೇಕು.
ಏಕೆಂದರೆ ಧ್ವನಿಭೇದವನ್ನು ಗುರುತಿಸಲಾಗುವ ಕನಿಷ್ಠತಮ ಅಂತರವೇ ಉದ್ದಿಷ್ಟ
ವಾಗಿದ್ದಲ್ಲಿ ಶ್ರುತಿ ಏರಿಸುವುದಕ್ಕೆ ಬೇರೊಂದು ಮಿತಿಯನ್ನು ನಿಮಿತ್ತವಾಗಿ ಹೇಳುವ
ಆವಶ್ಯಕತೆ ಇರುವುದಿಲ್ಲ. ಎಷ್ಟು ಸ್ವಲ್ಪ ತೀವ್ರಗೊಳಿಸಿದ ಮಾತ್ರಕ್ಕೆ ಮೊದಲಿನ ನಾದದಿಂದ
ಭಿನ್ನವಾಗಿ ಕೇಳಿಸುವುದೋ ಅಷ್ಟು ಮಾತ್ರ ಏರಿಸಬೇಕು ಎಂದೇ ಹೇಳುತ್ತಿದ್ದನು. ಎಷ್ಟಕ್ಕೆ
ಮೀರಬಾರದು ಎಂಬುದಕ್ಕಾಗಿ ತಾನೆ ನಿಯಮವನ್ನು ಹೇಳಬೇಕಾಗಿರುವುದು? ಕನಿಷ್ಠತಮ
ಎಂಬುದು ಅದೇ ಒಂದು ನಿಯಮವಾಗಿರುತ್ತಾ ಅದಕ್ಕೆ ಬೇರೊಂದು ನಿಯಮವು
ನ್ಯಾಯತಃ ಸಲ್ಲುವುದೂ ಇಲ್ಲ. ಅದರ ಆವಶ್ಯಕತೆಯೂ ಬೀಳುವುದಿಲ್ಲ. ಉದಾಹರಣೆ
ಗಾಗಿ : ಒಂದೇ ತರದ ೨೨ ಮಾದರಿ ಮನೆಗಳನ್ನು ಪ್ರತಿ ಎರಡು ಮನೆಗಳ ನಡುವೆ
ಅಂತಹ ಇನ್ನೊಂದು ಮನೆ ಕಟ್ಟುವಷ್ಟು ಎಡೆ ಇಲ್ಲದಂತೆ ಸಾಲಾಗಿ ಕಟ್ಟಿರಿ ಎಂದರೆ
ಒಂದರ ಗೋಡೆ ಇನ್ನೊಂದಕ್ಕೆ ತಾಗದಷ್ಟು ಮಾತ್ರ ಒತ್ತೊತ್ತಾಗಿ ಕಟ್ಟಿರಿ ಎಂದು
ಅರ್ಥವಾದೀತೆ? ಅಥವಾ ಕೆಲವು ಇಟ್ಟಿಗೆಗಳನ್ನು ಎರಡರ ಮಧ್ಯದಲ್ಲಿ ಇನ್ನೊಂದು
ನಿಲ್ಲುವಷ್ಟು ಎಡೆ ಇಲ್ಲದಂತೆ ನಿರಂತರವಾಗಿ ಇಡಬೇಕು ಎಂದರೆ ಒಂದಕ್ಕೊಂದು
ತಾಗದಷ್ಟು ಮಾತ್ರ ಎಡೆ ಇರಬೇಕೆಂದಾಗಲಿ ಹಾಗಿದ್ದರೆ ಮಾತ್ರ ಅವುಗಳೊಳಗೆ
ನಿರಂತರತ್ವವಿರುವುದೆಂದಾಗಲಿ ಎಣಿಸಲಾಗುವುದೇ? ಇನ್ನೊಂದು ಇಟ್ಟಿಗೆ ನಿಲ್ಲಲು
ಬೇಕಾಗುವ ಅವಕಾಶಕ್ಕಿಂತ ಸ್ವಲ್ಪ ಕಿರಿದಾದ ಅಂತರವಿರುವಂತೆ ಇಡಬೇಕು ಎಂಬುದೇ
ಅದರ ಉದ್ದೇಶವಾಗಿರುವುದು. ಹಾಗಿರುವುದರಿಂದ ಶ್ರುತಿಗಳಿಗೆ ನೈರಂತರ್ಯವೆಂದರೆ
ಅತ್ಯಂತ ಸಮೀಪವರ್ತಿಯಾದ ನೆರೆಹೊರೆತನದಲ್ಲಿ ಉಂಟಾಗುವ ಅಂತರ ಎಂದು
ತಿಳಿಯಬೇಕು' ಎಂದು ಸತ್ಯನಾರಾಯಣನವರು ಹೇಳುವ ಮಾತು ಒಪ್ಪತಕ್ಕದ್ದಲ್ಲ.
(ಪು. ಸಂ. ರ. ವ್ಯಾ. ೪೭೭)
ಶಾರ್ಙ್ಗದೇವನು ಹೇಳುವ ಶ್ರುತಿಗಳು ಪ್ರತಿ ಎರಡರ ಮಧ್ಯದಲ್ಲಿ ಇನ್ನೊಂದು
ನಾದವು ಕೇಳಿಸದಿರುವಂತೆ ಎಷ್ಟು ಹೆಚ್ಚು ಅಂತರದಲ್ಲಿರಬಹುದೋ ಆ ಪ್ರಮಾಣದಲ್ಲಿ
ಉಚ್ಚಚ್ಚತರವಾಗಿರುತ್ತವೆ ಎಂದೆಣಿಸಬೇಕು ಹೊರತು ಇವರೆನ್ನುವಂತೆ ಧ್ವನಿ
ವೈಲಕ್ಷಣ್ಯವು ಗೋಚರವಾಗುವ ಕನಿಷ್ಠತಮ ಪ್ರಮಾಣದಲ್ಲಿರುವವೆಂದಲ್ಲ.