ಈ ಪುಟವನ್ನು ಪ್ರಕಟಿಸಲಾಗಿದೆ

ಮರೆಯದ ನೆನಪು / ೩೫೫

ಹೇಳಿದ ಭಾರತ ಕಥೆ ಕೇಳಿದ್ದೆ. ಕರಿಮೈಯ ಕೆಂಗಣ್ಣ, ಕೆಮ್ಮೀಸೆಯ, ಕರಾಳ ಮೂರ್ತಿ ಕೌರವ ಎಂಬ ಕಲ್ಪನೆಯಾಗಿತ್ತು. ಆ ಕೌರವನಿಗೂ ದೊಡ್ಡ ಮಾವನಿಗೂ ಇರುಳು ಹಗಲು. ಬಹಳ ಅನ್ಯಾಯವಾಯಿತೆಂದು ನೊಂದುಕೊಂಡೆ. ಕೌರವನ ಒಡ್ಡೋಲಗದಿಂದಲೇ ತಾಳಮದ್ದಲೆ ಸುರುವಾಯಿತು. ಅರ್ಥಮುಂದುವರಿದಂತೆಲ್ಲ ನನ್ನ ಕಲ್ಪನೆ ಬದಲಾಗುತ್ತ ಬಂತು. ಕೊನೆಗಂತೂ ಕೌರವನೆಂದರೆ ಇಷ್ಟೊಂದು ಧೀರನೇ, ಯೋಗ್ಯನೇ, ಸಾಹಸಿಯೇ ಎಂದು ಆಶ್ಚರ್ಯವಾಯಿತು. ಪಾಂಡವರೇ ಹೇಡಿಗಳು, ಪಾಪಿಗಳು, ಕೌರವನ ತಪ್ಪೇನು? ನನ್ನ ಅಜ್ಜಿಯ ಮೇಲೂ ಆ ಮೋಸಗಾರ ಕೃಷ್ಣನ ಒಳಸಂಚೇ ಎಂದೆನಿಸಿತು.
ಮುಂದೆ ಮಾವ ರನ್ನನ 'ಗದಾಯುದ್ಧ' ಓದಿಸುವಾಗ ಅರ್ಥವಾಯಿತು, ದೊಡ್ಡ ಮಾವನ ಕೌರವ ರನ್ನನ ಕೌರವ ಎಂದು.
ಆ ಮೇಲೆ ಕೇಳಿದ ತಾಳಮದ್ದಳೆಗಳು ಹಲವು. ವಾಲಿಸಂಹಾರ, ಅಂಗದ ಸಂಧಾನ, ರಾಜಸೂಯ ಇತ್ಯಾದಿ. ಎಲ್ಲದರಲ್ಲಿಯೂ ದೊಡ್ಡಮಾವನಿಗೆ ಸಿಕ್ಕುವುದು ವಾಲಿ, ಪ್ರಹಸ್ತ, ರಾವಣ, ಜರಾಸಂಧ ಮುಂತಾದ ಇದಿರಾಳಿಗಳ ಅರ್ಥ, ಸೋತವರ ಪಕ್ಷ. ಆದರೂ ಗೆದ್ದು ಬಿಡುವುದು ಅವರೇ! ಒಮ್ಮೆ ವಾಲಿಸಂಹಾರದಲ್ಲಿ ಮರೆಯಲ್ಲಿ ನಿಂತು ಬಾಣಹೂಡಿದ ಆ ರಾಮ ವಾಲಿಯ ಮೂದಲಿಕೆಯ ಮಾತುಗಳ ಝಡಿಮಳೆಗೆ ಬೆದರಿ ಮತ್ತೆ ಎದುರು ಬರಲೇ ಇಲ್ಲ. ಅಂದಿನ ತಾಳಮದ್ದಳೆ ಅಲ್ಲಿಗೇ ಮುಗಿಯಿತು.
ಮತ್ತೊಮ್ಮೆ ಅಂಗದಸಂಧಾನ. ಭಾರೀ ಕೊಚ್ಚಿಕೊಂಡು ಬಿರುಸಿನಿಂದ ಬಂದು ರಾವಣನ ಸಭೆಯಲ್ಲಿ ಕುಳಿತ ಅಂಗದನ ಗತಿ. ಪ್ರಹಸ್ತನ ನಾಲ್ಕೇ ಮಾತುಗಳಲ್ಲಿ “ಯಾಕಿಲ್ಲಿ ಬಂದೆ ಬಡಜೀವ' ಎಂಬಂತಾಗಿತ್ತು. 'ಬಾಯ ಹೊಯ್ಸುವರು ಹೋಗಾ ಕಡೆಯಲಿ ನಿಲ್ಲು, ಕೈಯಾಯುಧವ ಕೆಳಗಿಟ್ಟು ಮಾತಾಡು' ಎಂಬ ಪದ್ಯಕ್ಕೆ ಪ್ರಹಸ್ತನು 'ಏ ಕಪೀ, ನೀನು ಕುಳಿತದ್ದೆಲ್ಲಿ? ಎದ್ದು ನಡಿಯೋ ಆಚೆ! ನಿನ್ನ ಕೈಗಳಲ್ಲೇನಿದು? ಮರ ಗುಡ್ಡ? ಇಡೋ ಕೆಳಗೆ' ಎಂದು ದಟ್ಟಿಸಿದ ಭರಕ್ಕೆ, ಪಾಪ, ಆ ಅಂಗದನೆಂಬ ಪ್ರಾಣಿ, ಬಡ ಪ್ರಾಣಿ, ಕುಳಿತ ಅಡಿಯಿಂದ ಒಂದು ಮಾರು ಹಿಂದೆ ಸರಿದಿತ್ತು! ಭಾಗವತನ ಕೈಯಲ್ಲಿದ್ದ ಕಂಟೆ, ಕೋಲು ಎರಡೂ ನೆಲಕ್ಕೆ ಬಿದ್ದಿತ್ತು!! ಮುಂದೊಮ್ಮೆ ಜರಾಸಂಧವಧೆಯಲ್ಲಿ ಮಾಗಧನ ಬೈಗಳ ಬೇಗೆಯನ್ನು ತಡೆಯಲಾರದೆ ಆ ಕೃಷ್ಣ ಎಂಬವನಿಗೆ ಇನ್ನೆಲ್ಲಿಗಾದರೂ ದೂರ ಓಡಿಹೋಗಿ ದನಮೇಯಿಸಿಕೊಂಡಿರುವುದೇ ಕ್ಷೇಮ ಎಂದೆನಿಸುವಂತಾಗಿತ್ತು.
ವಾಲಿಯ ಎದುರಿಗೆ ಯುದ್ಧಕ್ಕೆ ನಿಂತ ಯಾವನಿಗಾದರೂ ತನ್ನ ಅರ್ಧ ಶಕ್ತಿ ಕುಗ್ಗುತ್ತಿತ್ತಂತೆ. ನನ್ನ ದೊಡ್ಡ ಮಾವ ವಾಲಿ ಎಂದಲ್ಲ ಇನ್ನಾವುದೇ ಅರ್ಥ ವಹಿಸಿ ಕಂಡರೂ ಇದಿರಾಗುವ ಪಾತ್ರದ ಅರ್ಧ ಜೀವವೇ ಹಾರಿಹೋಗುತ್ತಿತ್ತು! ಅಂಥ ಇವರ ಅರ್ಥ ಕೇಳುವುದಕ್ಕಾಗಿಯೇ - ಊರಲ್ಲಿ ಆಗಾಗ ಅದೆಷ್ಟೋ ತಾಳಮದ್ದಳೆಗಳ ಏರ್ಪಾಡುಗಳಾಗುತ್ತಿದ್ದುವು.
ಅರ್ಥಗಾರಿಕೆಯಲ್ಲಿ ಮಾತ್ರವಲ್ಲ, ಪದಗಳ ರಚನೆ, ತಾಳ, ಹಾಡುವ ಪದ್ಧತಿ ರಂಗಸ್ಥಳ ಸಂಪ್ರದಾಯ ಮುಂತಾಗಿ ಯಕ್ಷಗಾನದ ಶಾಸ್ತ್ರೀಯ ಪದ್ಧತಿ ಹೇಗಿತ್ತು, ಹೇಗಿರಬೇಕು ಎಂಬುದನ್ನೂ ಅವರಲ್ಲಿಯೇ ಕೇಳಬೇಕು.
ಹೀಗೆ ಪೂಜ್ಯರಾದ ಶ್ರೀ ವೆಂಕಟರಮಣ ಭಟ್ಟರು ಅದೆಂದು ನನಗೆ ದೊಡ್ಡ ಮಾವನಾಗಿ ಆದರೋ ಅಂದಿಗೇ ಅವರು ದೊಡ್ಡ ವಿದ್ವಾಂಸರೂ, ದೊಡ್ಡ ಅರ್ಥಧಾರಿ ಗಳೂ, ದೊಡ್ಡ ಕವಿಗಳೂ, ದೊಡ್ಡ ವಾಗ್ಮಿಗಳೂ ಆಗಿದ್ದರು. ...ಮಾತರಿವವರೊಳ್