ಈ ಪುಟವನ್ನು ಪ್ರಕಟಿಸಲಾಗಿದೆ

ಉನ್ನತ ಶ್ರೇಣಿಯ ಸಂಶೋಧಕ ವಿದ್ವಾಂಸ

ಡಾ. ಎಂ. ಪ್ರಭಾಕರ ಜೋಶಿ

'ಘನ ಪಂಡಿತ', 'ಬಹುಶ್ರುತ ವಿದ್ವಾಂಸ' ಎಂಬ ಮಾತುಗಳಿಗೆ ನಿಜವಾದ ಅರ್ಹತೆಯುಳ್ಳ ಓರ್ವ ಅಸಾಧಾರಣ ಯೋಗ್ಯತೆಯ ವಿದ್ವಾಂಸರು ಕುಕ್ಕಿಲ ಕೃಷ್ಣ ಭಟ್ಟರು (೧೯೧೧-೧೯೮೮). ಕನ್ನಡದ ಸಂಶೋಧಕ ಪರಂಪರೆಯ ಗೋವಿಂದ ಪೈ, ಡಿ. ಎಲ್. ಎನ್., ಶ್ರೀನಿವಾಸ ಮೂರ್ತಿ, ಸೇಡಿಯಾಪು ಇಂತಹವರ ಅಗ್ರ ಪಂಕ್ತಿಯಲ್ಲಿ ಸ್ಥಾನಕ್ಕೆ ಅರ್ಹರಾದ ನಾಡಿನ ಪಂಡಿತ ಪರಂಪರೆಯ ಒಂದು ದೊಡ್ಡ ಹೆಸರೆನಿಸಿದ ವ್ಯಕ್ತಿ, ಸಂಗೀತ ಶಾಸ್ತ್ರ, ಛಂದಸ್ಸು, ಯಕ್ಷಗಾನ, ನಾಟ್ಯಶಾಸ್ತ್ರಗಳಲ್ಲಿ ಅಪೂರ್ವವೆನಿಸುವ ಪಾಂಡಿತ್ಯ ಮತ್ತು ಶೋಧಕ ದೃಷ್ಟಿಯ ಅಧ್ಯಯನವಿದ್ದ ಕುಕ್ಕಿಲರು, ನಾಡಿನ ವಿದ್ವನ್ಮಂಡಲಿಯಲ್ಲಿ ಹಿರಿದಾದ ಗೌರವಕ್ಕೆ ಪಾತ್ರರಾದವರು. ಗಾತ್ರದಲ್ಲಿ ಕಿರಿದಾದರೂ, ಯೋಗ್ಯತೆಯಲ್ಲಿ ವಿಶಿಷ್ಟವೆನಿಸಿದ ಅವರ ಬರಹಗಳು ಸಂಶೋಧಕರಿಗೆ ಆದರಣೀಯವೆನಿಸಿವೆ.

೧೯೧೧ರಲ್ಲಿ ವಿಟ್ಲಪಡೂರಿನ ಕುಕ್ಕಿಲದಲ್ಲಿ ಜನಿಸಿದ ಕೃಷ್ಣಭಟ್ಟರು, ಅಜ್ಜ ಅಪ್ಪಯ್ಯ ಯಾನೆ ಕೃಷ್ಣ ಭಟ್ಟರಿಂದ ಸಂಸ್ಕೃತ, ಕನ್ನಡಗಳನ್ನು ಕಲಿತರು. ಅಂದಿನಿಂದಲೇ ಅವರಿಗೆ ಓಲೆಗ್ರಂಥಗಳ ನಂಟು, ವಿದ್ವಾಂಸ, ಕಲಾವಿದ ಬಡಕ್ಕಿಲ ಸಾಹುಕಾರ ವೆಂಕಟರಮಣ ಭಟ್ಟರು ಇವರ ಸೋದರ ಮಾವ. ಅವರು ಬಡೆಕ್ಕಿಲಕ್ಕೆ ಕರಕೊಂಡು ಹೋಗಿ, ಶಾಲಾ ವಿದ್ಯಾಭ್ಯಾಸ ಮತ್ತು ಮನೆಯಲ್ಲಿ ಸಂಸ್ಕೃತ ಅಭ್ಯಾಸಕ್ಕೆ ವ್ಯವಸ್ಥೆ ಮಾಡಿದರು. ಬಳಿಕ ಪುತ್ತೂರು ಬೋರ್ಡು ಹೈಸ್ಕೂಲಲ್ಲಿ ಕಲಿಕೆ. ಈ ಕಾಲದಲ್ಲಿ ಹಿರಿಯ ಪಂಡಿತರಾದ ಕಡವ ಶಂಭು ಶರ್ಮ, ಕನ್ನೆಪ್ಪಾಡಿ ಪರಮೇಶ್ವರ ಶಾಸ್ತ್ರಿ, ಮಿತ್ತೂರು ನಾರಾಯಣ ಶಾಸ್ತ್ರಿಗಳಂತಹವರ ಶಿಷ್ಯರಾಗಿ, ಗುರುಕುಲ ಪದ್ಧತಿಯಿಂದ ಶಾಸ್ತ್ರಗ್ರಂಥಗಳ ಅಧ್ಯಯನ. ನಾಟ್ಯಶಾಸ್ತ್ರ, ಸಂಗೀತಶಾಸ್ತ್ರ ಅಧ್ಯಯನಕ್ಕೆ ಪ್ರೇರಣೆ ಒದಗಿತು. ಈ ಕಾಲದಲ್ಲಿ ಅಜ್ಜನ ನಿಧನದಿಂದ ಶಾಲೆ ಬಿಟ್ಟು ಮನೆಗೆ ಮರಳಿದರು. ಬಾಲ್ಯದಿಂದಲೂ ಇವರ ಸಹಾಧ್ಯಾಯಿ ಮತ್ತು ಬಂಧು ಸೇಡಿಯಾಪು ಅವರ ಸೂಚನೆಯಂತೆ, ಮಂಗಳೂರಿಗೆ ಬಂದು, ಬೆಳ್ಳ ಭುಜಂಗರಾಯರ ಆಶ್ರಯದಲ್ಲಿ ಬನಾರಸಿನ ಎಂಟ್ರೆನ್ಸ್ ಪರೀಕ್ಷೆಗೆ ತಯಾರಿ. ಜತೆಗೆ, ಕಡೆಂಗೋಡ್ಲು ಶಂಕರ ಭಟ್ಟರು, ಭಿಡೆ ಶೇಷ ಭಟ್ಟರು ನಡೆಸುತ್ತಿದ್ದ ರಾಷ್ಟ್ರಬಂಧು' ಪತ್ರಿಕೆಯಲ್ಲಿ ಉದ್ಯೋಗ, ಸ್ವಲ್ಪಕಾಲ ಕಾನ್ವೆಂಟಿನ ವಿದ್ಯಾರ್ಥಿಗಳಿಗೆ ಕನ್ನಡ ಅಧ್ಯಾಪಕ.

ಮಂಗಳೂರಲ್ಲಿ ಹಿರಿಯ ಸಂಗೀತ ವಿದ್ವಾಂಸ ದಿ| ಕೃಷ್ಣ ಉಡುಪರ ಮನೆಯಲ್ಲಿ, ಸೇಡಿಯಾಪು ಅವರೊಂದಿಗೆ, ವಾಸವಿದ್ದುದರಿಂದ ಸಂಗೀತ ಕಲಿಕೆಯಲ್ಲಿ ಮತ್ತಷ್ಟು ಪ್ರಗತಿ. ಆ ಕಾಲದಲ್ಲಿ ಕೇಳಿದ, ಬಿಂದೂರಾಯರ ಭಾರತ ವಾಚನ-ವ್ಯಾಖ್ಯಾನದಿಂದ, ಇವರು ಕಾವ್ಯವಾಚನವನ್ನೂ ಅಭ್ಯಸಿಸಿದರು.

ಸ್ವಾತಂತ್ರ್ಯ ಚಳುವಳಿಯ ಭರದ ಕಾಲವದು. ಗಲಭೆಗಳಿಂದಾಗಿ ಬನಾರಸಿನ ಪರೀಕ್ಷೆ ರದ್ದಾಯಿತು. ಅದನ್ನು ಬಿಟ್ಟು ಕನ್ನಡ ವಿದ್ವಾನ್ ಪರೀಕ್ಷೆಗೆ ಸಿದ್ಧತೆ. ಈ ಮಧ್ಯೆ ಗೃಹಕೃತ್ಯದ ಕರೆ. ಅಂತೂ, ಕುಕ್ಕಿಲರಿಗೆ ಪದವಿ ಒಲಿಯಲಿಲ್ಲ. ಆದರೆ, ಪರೀಕ್ಷೆಗಳ ಹಂಗಿಲ್ಲದೆ, ಸ್ವಂತ ಆಸಕ್ತಿಯಿಂದ ಅಧ್ಯಯನ ಮುಂದುವರಿಸಿದ ಅವರ ಅಧ್ಯಯನಾಸಕ್ತಿ