ಈ ಪುಟವನ್ನು ಪ್ರಕಟಿಸಲಾಗಿದೆ
ಕೀರ್ತಿಶೇಷ ಶ್ರೀ ಕುಕ್ಕಿಲ ಕೃಷ್ಣ ಭಟ್ಟರು / ೩೬೭

'ಸಮ್ಮೇಳ'ವೆಂಬ ಹೆಸರಿನ ಯಮಲ ರೂಪದ ಅವನದ್ಧ ವಾದ್ಯ- ಇವು ಮೂರೇ ಇದ್ದರೂ ಮೇಳವು ಪೂರ್ಣವೆನಿಸಿಕೊಳ್ಳುತ್ತದೆ).

ಸಂಸ್ಕೃತದಲ್ಲಿ ಲಭ್ಯವಾಗುವ ಅನೇಕಾನೇಕ ಸಂಗೀತಶಾಸ್ತ್ರ ಗ್ರಂಥಗಳನ್ನು ಅತ್ಯಾಸಕ್ತಿ ಯಿಂದ ಓದಿದ್ದ ಕೃಷ್ಣ ಭಟ್ಟರಿಗೆ ಸ್ವರಭೇದಗಳ ವಿಚಾರದಲ್ಲಿ ಕೆಲಕೆಲವು ಗ್ರಂಥಗಳಲ್ಲಿ ಭಿನ್ನಾಭಿಪ್ರಾಯವಿರುವಂತೆ ಕಂಡುಬಂದುದರಿಂದ ಮತ್ತು ಒಂದು ಸ್ವರಸಪ್ತಕದಲ್ಲಿ ಅಡಕ ವಾಗಿರುವ ಇಪ್ಪತ್ತೆರಡು ಶ್ರುತಿಗಳ ಸ್ವರೂಪವೇನೆಂಬುದು ಆಜ್ಞೆಯವೆಂಬಷ್ಟರ ಮಟ್ಟಿಗೆ ಸಂಗೀತಜ್ಞರಿಗೆ ಅಪರಿಚಿತವಾಗಿರುವುದರಿಂದ ಆ ವಿಷಯದ ಯಥಾರ್ಥವನ್ನು ಕಂಡುಕೊಳ್ಳ ಬೇಕೆಂಬ ಕುತೂಹಲವುಂಟಾಗಿ ಆ ಪ್ರಯತ್ನದಲ್ಲಿ ಹಲವು ವರ್ಷಗಳ ಕಾಲವನ್ನು ವ್ಯಯಿಸಿದರು. ಮತ್ತು ಆಧುನಿಕ ಪಾಶ್ಚಾತ್ಯ ವಿದ್ವಾಂಸರು ಕಂಡುಹಿಡಿದ ಸ್ವರ ಕಂಪನ ಸಂಖ್ಯಾದಿ ವೈಜ್ಞಾನಿಕ ವಿಚಾರಗಳನ್ನು ಇಂಗ್ಲಿಷ್ ಭಾಷೆಯ ಗ್ರಂಥಗಳ ಅಧ್ಯಯನದಿಂದ ತಿಳಿದುಕೊಂಡರು. ಈ ತಮ್ಮ ಪರಿಶ್ರಮದ ಫಲವನ್ನು ಕನ್ನಡಿಗರಿಗೆಲ್ಲ ತಿಳಿಸುವ ಪ್ರಯತ್ನ ವಾಗಿ ಭಾರತೀಯ ಸಂಗೀತಶಾಸ್ತ್ರ” (ಭರತನ ಶ್ರುತಿ ಸಿದ್ದಾಂತ ಮತ್ತು ಶಾರ್ಙ್ಗದೇವನ ಸ್ವರಸಮೀಕರಣ) ಎಂಬ ಅಸಾಮಾನ್ಯವಾದೊಂದು ನಿಬಂಧವನ್ನು ಬರೆದು ಅದನ್ನು ಪುಸ್ತಕರೂಪವಾಗಿ ಪ್ರಕಾಶಪಡಿಸಿದರು. ಈ ಪುಸ್ತಕವನ್ನು ಓದಿ ನೋಡುವವರಿಗೆ ಕೃಷ್ಣಭಟ್ಟರ ವಿದ್ವತ್ತೆ ಎಷ್ಟು ಅಗಾಧವಾಗಿತ್ತೆಂಬುದರ ಪರಿಚಯವಾಗದಿರದು. ಅವರ ಈ ಗ್ರಂಥವು ಭಾರತೀಯ ಸಂಗೀತಶಾಸ್ತ್ರಕ್ಕೆ ಅವರು ಸಲ್ಲಿಸಿದ ಅಮೂಲ್ಯವಾದ ಕಾಣಿಕೆ ಯಾಗಿದೆ. ಈ ಗ್ರಂಥವು ಇಂತಹದಾಗಿದ್ದರೂ, ನನಗೆ ತಿಳಿದಂತೆ ಈವರೆಗೆ ಸಂಗೀತ ಶಾಸ್ತ್ರಜ್ಞರಾರೂ ಈ ಪುಸ್ತಕದ ಗೊಡವೆಗೆ ಹೋದಂತಿಲ್ಲ. ಕೃಷ್ಣ ಭಟ್ಟರ ಅಭಿಪ್ರಾಯ ಗಳನ್ನು ಸಮರ್ಥಿಸಿ ಅಥವಾ ಖಂಡಿಸಿ ಯಾರೊಬ್ಬರೂ ಏನನ್ನೂ ಬರೆದದ್ದು ತಿಳಿದು ಬಂದಿಲ್ಲ. ಸಂಗೀತಶಾಸ್ತ್ರದಲ್ಲಿ ಕೃಷ್ಣಭಟ್ಟರ ಹಾಗೆ ಶ್ರಮಿಸಿದ ವಿದ್ವಾಂಸರು ಕನ್ನಡಿಗರಲ್ಲಿ ಬಹುಶಃ ಯಾರೂ ಇಲ್ಲದಿರುವುದೇ ಇದಕ್ಕೆ ಕಾರಣವೆಂದು ತೋರುತ್ತದೆ.

ಈ ಮೇಲೆ ಹೇಳಿದ ಪುಸ್ತಕವನ್ನಲ್ಲದೆ ಸಂಗೀತಶಾಸ್ತ್ರದಲ್ಲಿ ಹೇಳಲ್ಪಟ್ಟಿರುವ ಇತರ ಹಲವು ವಿಷಯಗಳಲ್ಲಿಯೂ ಕೃಷ್ಣಭಟ್ಟರು ಕೆಲವು ಲೇಖನಗಳನ್ನು ಬರೆದಿರುತ್ತಾರೆ. ಅವುಗಳಲ್ಲಿ ಕೆಲವು ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ಪತ್ರಿಕೆಗಳಲ್ಲಿ ಪ್ರಕಾಶಿತವಾಗಿವೆ. ಕೃಷ್ಣ ಭಟ್ಟರು ಅವುಗಳಲ್ಲಿ ಸೂಡ (ಸೂಳ), ಸಾಲಗ ಅಥವಾ ಸಾಳಗ (ಛಾಯಾಲಗ) ಇತ್ಯಾದಿಯಾಗಿ ಸಂಗೀತ ಶಾಸ್ತ್ರಗ್ರಂಥಗಳಲ್ಲಿ ಕಂಡು ಬರುವ ಮತ್ತು ಅದುವರೆಗೆ ಸಮಂಜಸವಾದ ಅರ್ಥಗಳನ್ನು ಯಾರೂ ಹೇಳದಿರುವ ಹಲವು ಸಂಜ್ಞೆಗಳ ಅರ್ಥಗಳನ್ನು ಕಂಡುಹಿಡಿದು ಪ್ರಕಾಶಪಡಿಸಿರುತ್ತಾರೆ. ಅವರ ಇಂತಹ ಲೇಖನಗಳನ್ನೆಲ್ಲ ಒಂದುಗೂಡಿಸಿ ಪ್ರಕಟಪಡಿಸಿದರೆ ಅದೊಂದು ಅತ್ಯುಪಯುಕ್ತವಾದ ಪುಸ್ತಕವಾಗುವುದರಲ್ಲಿ ಸಂಶಯವಿಲ್ಲ.

ಕೃಷ್ಣ ಭಟ್ಟರು - ಗ್ರಂಥಲೇಖನ ಕಲೆಯಲ್ಲಿ ಮಾತ್ರವಲ್ಲ ಗ್ರಂಥಸಂಪಾದನ ಕಲೆಯಲ್ಲಿಯೂ ಶ್ರಮಿಸಿದ ಮಹನೀಯರು. ಕನ್ನಡ ಯಕ್ಷಗಾನದ ಸರ್ವೋನ್ನತ ಕವಿಯಾದ ಪಾರ್ತಿಸುಬ್ಬನ ರಚನೆಗಳನ್ನೆಲ್ಲಾ ಹಲವು ಪ್ರತಿಗಳ ಸಾಹಾಯದಿಂದ ಪರಿಶೋಧಿಸಿ ಆ ಕವಿಯ ಕಾಲದೇಶಗಳ ವಿಷಯವಾಗಿ ಮತ್ತು ಅವನ ರಚನೆಗಳ ವಿಶಿಷ್ಟತೆ ಇತ್ಯಾದಿಗಳ ಕುರಿತು ಪ್ರೌಢವಾದೊಂದು ಪೀಠಿಕೆಯನ್ನೊಳಗೊಂಡ 'ಪಾರ್ತಿಸುಬ್ಬನ ಯಕ್ಷಗಾನಗಳು ಎಂಬ ಹೆಸರಿನ ಸಮಗ್ರ ಸಂಪುಟವೊಂದನ್ನು ಅವರು ನಿರ್ಮಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯಿಂದ ಪ್ರಕಾಶಿತವಾದ ಈ