ಈ ಪುಟವನ್ನು ಪ್ರಕಟಿಸಲಾಗಿದೆ

ಕುಕ್ಕಿಲ ಕೃಷ್ಣ ಭಟ್ಟರ ಕಣ್ಮರೆ


ಹಾ. ಮಾ. ನಾಯಕ


ಕನ್ನಡದ ಎಲೆಮರೆಯ ವಿದ್ವಾಂಸರಲ್ಲಿ ಒಬ್ಬರಾಗಿದ್ದ ಕುಕ್ಕಿಲ ಕೃಷ್ಣ ಭಟ್ಟರು ತೀರಿಕೊಂಡು (ಜುಲೈ ೨೧) ಇಂದಿಗೆ ಸರಿಯಾಗಿ ಒಂದು ತಿಂಗಳಾಯಿತು. ಮಂಗಳೂರಿನ ಮಿತ್ರರು ಶ್ರೀ ಪ್ರಭಾಕರ ಜೋಶಿ ಕಾಗದ ಬರೆದು ತಿಳಿಸದಿದ್ದರೆ ನನಗೆ ಸುದ್ದಿ ತಿಳಿಯು ತ್ತಲೇ ಇರಲಿಲ್ಲವೆಂದು ತೋರುತ್ತದೆ. ಕೃಷ್ಣಭಟ್ಟರ ಮಹತ್ವದ ಗ್ರಂಥ 'ಪಾರ್ತಿಸುಬ್ಬನ ಯಕ್ಷಗಾನಗಳು ಪ್ರಕಟಣೆಯಲ್ಲಿ ನಾನು ಆಸಕ್ತನಾಗಿದ್ದರಿಂದಲೋ ಏನೋ, ಜೋಶಿ ಯವರು ವಿಷಯ ನನಗೆ ತಿಳಿಯಲಿ ಎಂದು ಕಾಗದ ಬರೆಯುವ ಸೌಜನ್ಯ ತೋರಿದರು. ನಮ್ಮ ಪತ್ರಿಕೆಗಳು ಈ ಸುದ್ದಿಯನ್ನು ಪ್ರಕಟಿಸಲಿಲ್ಲ. ಪ್ರಕಟಿಸಿದ ಒಂದು ಪತ್ರಿಕೆಗೂ ಇದು ಮುಖ್ಯವಾದ ಸುದ್ದಿ ಆಗಿರಲಿಲ್ಲವಂತೆ.
ಕೃಷ್ಣ ಭಟ್ಟರು ಹುಟ್ಟಿದ್ದು (ಜೂನ್ ೭, ೧೯೧೧) ದಕ್ಷಿಣ ಕನ್ನಡದ ಒಂದು ಹಳ್ಳಿ ವಿಟ್ಲಪಡ್ರುರು ಕುಕ್ಕಿಲದಲ್ಲಿ, ಅಜ್ಜ ಅಪ್ಪಯ್ಯ ಭಟ್ಟರಿಂದಲೇ ಅವರಿಗೆ ಶಿಕ್ಷಣದ ಆರಂಭ. ಕನ್ನಡದ ಹಿರಿಯ ವಿದ್ವಾಂಸರಲ್ಲಿ ಒಬ್ಬರಾಗಿರುವ ಭಾವ ಸೇಡಿಯಾಪು ಕೃಷ್ಣ ಭಟ್ಟರು ಆಗ ಕುಕ್ಕಿಲರ ಸಹಾಧ್ಯಾಯಿ. ಮುಂದೆ ಸೋದರಮಾವ ಬಡೆಕ್ಕಿಲ ವೆಂಕಟರಮಣ ಭಟ್ಟರ ಮನೆಯಲ್ಲಿ ಕನ್ನಡ ಸಂಸ್ಕೃತಗಳ ಪಾಠ ಅಲ್ಲಿಂದಲೇ ಕೆಲಕಾಲ ಶಾಲೆಗೂ ಹೋಗಿ ಬರುತ್ತಿದ್ದರು. ಎಂಟನೆಯ ತರಗತಿಗೇ ಶಾಲೆಯ ಓದು ನಿಲ್ಲಬೇಕಾಗಿ ಬಂತು. ಮುಂದೆಯೂ ಇದೇ ಗತಿ. ಒಟ್ಟಾರೆ ಅವರಿಗೆ ಪದವಿ ಪಡೆಯುವುದು ಸಾಧ್ಯವಾಗಲಿಲ್ಲ. ಆದರೆ ಅವರು ಸ್ವನಿರ್ಮಿತ ಮನುಷ್ಯರಾದರು. ವಿದ್ವಾಂಸರೆನ್ನಿಸಿದರು.
ಸೋದರ ಮಾವನ ಮನೆಯ ಮರೆಯದ ಪರಿಸರವನ್ನು ಮುಂದೆ ಎಷ್ಟೋ ವರ್ಷಗಳ ಮೇಲೆ ಕುಕ್ಕಿಲರು ಹೀಗೆ ನೆನಪಿಸಿಕೊಂಡರು : ಇದ್ದವರು ಬಂದವರು ದೊಡ್ಡವರು ಸಣ್ಣವರು ಯಾರೇ ಆಗಲಿ, ಅವರನ್ನು ಕರೆದು ಕೂರಿಸಿಕೊಂಡು ಹಳೆಗನ್ನಡ ಕಾವ್ಯಗಳನ್ನು ಓದಿ ಅರ್ಥ ಹೇಳಿ ಅದರ ಸ್ವಾರಸ್ಯವನ್ನು ವರ್ಣಿಸುವುದೆಂದರೆ ಅವರಿಗೆ (ವೆಂಕಟರಮಣ ಭಟ್ಟರಿಗೆ) ಅಷ್ಟೊಂದು ಪ್ರೀತಿ, ಕಾವ್ಯಗಳಷ್ಟೇ ಅಲ್ಲ, ಯಕ್ಷಗಾನ ಪದ್ಯಗಳೂ, ತಾವೇ ರಚಿಸಿದ ಕವಿತೆಗಳೂ ಈ ಪ್ರವಚನದಲ್ಲಿ ಇರುತ್ತಿದ್ದವು. ರಸಿಕರು ವಿದ್ವಾಂಸರಾರಾದರೂ ಬಂದಿದ್ದರೆಂದರೆ ರಾತ್ರಿ ಬೆಳಗಾಗುವ ತನಕವೂ ಈ ಕಾವ್ಯಗೋಷ್ಟಿ ನಡೆಯುವುದಿತ್ತು. ಈ ರಸದೂಟಕ್ಕಾಗಿಯೇ ಊರ ಒಳಗಿನ ವಿದ್ವಾಂಸರು, ಕವಿಗಳು, ಭಾಗವತರು, ಅರ್ಥದಾರಿಗಳು ಅದೆಷ್ಟೋ ಮಂದಿ ದಿನ ದಿನ ಬರುತ್ತಿದ್ದರು. ಆಗ ಇವರು ನನಗೊಬ್ಬನಿಗೇ ಏಕೆ, ಎಲ್ಲರಿಗೂ ದೊಡ್ಡ ಮಾವ ಎಂದೆನಿಸಿತ್ತು.
ಇಂಥ ಸಾನ್ನಿಧ್ಯದಲ್ಲಿ ಕುಕ್ಕಿಲ ಕೃಷ್ಣಭಟ್ಟರ ರುಚಿ ಅಭಿರುಚಿಗಳು ಬೆಳೆದವು. ಕಡವ ಶಂಭು ಶರ್ಮ, ಕನ್ನೆಪ್ಪಾಡಿ ಪರಮೇಶ್ವರ ಶಾಸ್ತ್ರಿ, ಮಿತ್ತೂರು ನಾರಾಯಣ ಶಾಸ್ತ್ರಿ ಮೊದಲಾದ ಅಂದಿನ ವಿದ್ವಾಂಸರೊಡನೆ ಅವರು ಸಂಸ್ಕೃತವನ್ನು, ವಿಶೇಷವಾಗಿ ನಾಟ್ಯ ಶಾಸ್ತ್ರವನ್ನು ಅಧ್ಯಯನ ಮಾಡಿದರು. ವಿದ್ವಾನ್ ಕೃಷ್ಣ ಉಡುಪರೊಡನೆ ಸಂಗೀತ, ಶಾಸ್ತ್ರ ಗಳನ್ನು ಅಭ್ಯಸಿಸಿದರು. ಕಡೆಂಗೋಡ್ಲು ಶಂಕರಭಟ್ಟರು ನಡೆಸುತ್ತಿದ್ದ 'ರಾಷ್ಟ್ರಬಂಧು'

24