ಈ ಪುಟವನ್ನು ಪ್ರಕಟಿಸಲಾಗಿದೆ

೩೮೨ | ಕುಕ್ಕಿಲ ಸಂಪುಟ
ಪಾರ್ತಿಸುಬ್ಬ ಕವಿಯು ೧೮ನೇ ಶತಮಾನಕ್ಕಿಂತಲೂ ಹಿಂದೆಯೇ ಇದ್ದವನು ಎಂದು ನಿರ್ಧರಿಸಿದರು. ಆ ಮೇಲೆ ಅವರಿಗೆ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಲಿಖಿತ ಗ್ರಂಥಭಂಡಾರದಲ್ಲಿ ಎರಡು ಯಕ್ಷಗಾನ ಪ್ರಸಂಗಗಳ ಪ್ರತಿಗಳು ದೊರಕಿದುವು. 'ಕುಶಲವರ ಕಾಳಗ' ಎಂಬ ಪ್ರಸಂಗವು ೧೬೧೨ರಲ್ಲಿ ಪ್ರತಿಯಾದುದು, ಹಾಗೂ 'ಐರಾವತ' ಎಂಬ ಪ್ರಸಂಗವು ೧೬೭೨ರಲ್ಲಿ ಪ್ರತಿಯಾದದ್ದು ಎಂದು ನಿರ್ಧರಿಸಿದರು. ಹಿಂದಿನವರು ಯಾವುದೇ ಗ್ರಂಥಗಳನ್ನು ಪ್ರತಿಮಾಡುವಾಗ ಹಲವಾರು ಪ್ರತಿಕಾರರು ಕಾರ್ಯವು ಸಂಪೂರ್ಣವಾದ ದಿನದ ತಿಥಿ, ವಾರ, ನಕ್ಷತ್ರ, ಸಂವತ್ಸರಗಳನ್ನು ಉಲ್ಲೇಖಿಸುವ ಪರಿಪಾಠ ಇತ್ತು. 'ಎಫೆಮೆರಿಸ್' ಎಂಬ ಕೋಷ್ಟಕದ ಸಹಾಯದಿಂದ ಇಸವಿ, ತಿಂಗಳು, ತಾರೀಕುಗಳನ್ನು ನಿರ್ಧರಿಸಲು ಸಾಧ್ಯವಾಗುತ್ತದೆ. ಮೇಲಿನ ಎರಡೂ ಪ್ರಸಂಗಗಳು ಪಾರ್ತಿಸುಬ್ಬನವು ಅಥವಾ ಇತರ ರಾಮಾಯಣ ಪ್ರಸಂಗಗಳ ಕವಿಯಿಂದಲೇ ರಚಿತವಾದುವು ಎಂಬುದರಲ್ಲಿ ಭಿನ್ನಾಭಿಪ್ರಾಯವಿಲ್ಲ. ಹಾಗಾಗಿ ಪಾರ್ತಿಸುಬ್ಬನ ಕಾಲವು ೧೬ನೇ ಶತಮಾನವೆಂದೂ ತಮ್ಮ ಹಿಂದಿನ ಊಹೆ (೧೮೨೭) ತಪ್ಪೆಂದೂ ೧೯೭೫ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಪ್ರಕಟವಾದ ತಮ್ಮ 'ಪಾರ್ತಿಸುಬ್ಬನ ಯಕ್ಷಗಾನಗಳು ಎಂಬ ಗ್ರಂಥದಲ್ಲಿ ಹೇಳಿದ್ದಾರೆ. ಹೆಚ್ಚು ಕಡಮೆ ಇದೇ ಕಾಲದಲ್ಲಿ ಡಾ| ಕಾರಂತರೂ ತಮ್ಮ ಹಿಂದಿನ ಅಭಿಪ್ರಾಯವನ್ನು ಬಿಟ್ಟುಕೊಟ್ಟು ಈ ಕವಿ ೧೬ನೇ ಶತಮಾನದವನೆಂದೂ, ಆದರೆ ಅವನ ಹೆಸರು, ಊರು ಗೊತ್ತಿಲ್ಲವೆಂದೂ ೧೯೭೪ರಲ್ಲಿ ಮೈಸೂರು ವಿಶ್ವವಿದ್ಯಾಲಯವು ಪ್ರಕಟಿಸಿದ ತಮ್ಮ 'ಯಕ್ಷಗಾನ' ಎಂಬ ಗ್ರಂಥದಲ್ಲಿ ಹೇಳಿದರು. ಹಾಗಾಗಿ ಕವಿಯ ಕಾಲದ ಬಗ್ಗೆ ಇಬ್ಬರಲ್ಲಿಯೂ ಏಕಾಭಿಪ್ರಾಯ ಮೂಡಿಬಂತು. ಆದರೆ ಕೃಷ್ಣ ಭಟ್ಟರು ಅವನು ಪಾರ್ತಿಸುಬ್ಬನೆಂದೂ, ಕುಂಬಳೆಯವನೆಂದೂ ಸಾಧಿಸಿದರೆ ಕಾರಂತರು ಅವನೊಬ್ಬ ಅಜ್ಞಾತ ಕವಿ ಎಂದೂ ಎಲ್ಲಿಯವನೆಂದು ತಿಳಿಯದು ಎಂದೂ ಹೇಳಿದರು.
ಕೃಷ್ಣ ಭಟ್ಟರ ಆಸಕ್ತಿ, ಪಾರ್ತಿಸುಬ್ಬನಿಗೇ ಸೀಮಿತವಾಗಿರಲಿಲ್ಲ. ಇಡಿಯ ಯಕ್ಷಗಾನ ರಂಗಕ್ಕೇ ಅದು ವಿಸ್ತರಿಸಿತು. ಯಕ್ಷಗಾನದ ಬಗ್ಗೆ ತಿಳಿಯಲು ಅವರ ಅಧ್ಯಯನವು ಸಂವಾದಿ ಕಲೆಗಳಾದ ಕೇರಳದ ರಾಮನಾಟ್ಟಂ, ಆಂಧ್ರದ ಯಕ್ಷಗಾನಗಳ ಕಡೆಗೂ ಸಾಗಿತು. ೧೬-೧೭ನೆಯ ಶತಮಾನದಲ್ಲಿದ್ದ ಗೋವಿಂದ ದೀಕ್ಷಿತನ ಸಂಗೀತ ಸುಧಾ, ೧೭ನೇ ಶತಮಾನದ ಆದಿಭಟ್ಟ ನಾರಾಯಣ ದಾಸನ ಕೃತಿ, ಚೆಂಗ ಕಾಳಕವಿಯ ರಾಧಾವಿಲಾಸ, ೧೫ನೇ ಶತಮಾನದ ಆಂಧ್ರ ಕವಿ ಶ್ರೀನಾಥನ ಭೀಮೇಶ್ವರ ಪುರಾಣ, ೧೫ನೇ ಶತಮಾನದಲ್ಲಿದ್ದ ತಿರುಪತಿ ಅಣ್ಣಮಾಚಾರ್ಯನ ಸಂಕೀರ್ತನ ಲಕ್ಷಣ, ೧೪ನೇ ಶತಮಾನದ ಲಕ್ಷಣದೀಪಿಕಾ ಮೊದಲಾದ ಗ್ರಂಥಗಳ ಅಧ್ಯಯನದಿಂದ, ಆ ಗ್ರಂಥಗಳಲ್ಲಿ ಯಕ್ಷಗಾನದ ಲಕ್ಷಣಗಳ ವಿವರಣೆಗಳಿರುವುದರಿಂದ, ಅದೂ ಅಲ್ಲದೆ ಮೂಲತಃ ಆಂಧ್ರ ಛಂದಸ್ಸು ಆಗಿರುವ ದ್ವಿಪದೀ ಬಂಧವು ನಮ್ಮ ಯಕ್ಷಗಾನ ಪ್ರಸಂಗಗಳಲ್ಲಿ ಕಂಡು ಬರುವುದರಿಂದ ಯಕ್ಷಗಾನ ಪ್ರಸಂಗ ರಚನೆಯು ಆಂಧ್ರ ಯಕ್ಷಗಾನಗಳಿಂದ ಪ್ರಭಾವಿತ ವಾಗಿರಬೇಕೆಂದು ಕುಕ್ಕಿಲರು ತರ್ಕಿಸಿದ್ದಾರೆ. ಕೊಟ್ಟಾರಕರದ ರಾಜನಾದ ಬಾಲಕೇರಳ ವರ್ಮನು ರಚಿಸಿದ ಮಲಯಾಳ ರಾಮಾಯಣ ಕೃತಿಗಳಲ್ಲಿನ ಹಲವಾರು ಪದ್ಯಗಳನ್ನು ಪಾರ್ತಿಸುಬ್ಬನ ರಾಮಾಯಣ ಪ್ರಸಂಗಗಳಲ್ಲಿ ಅನುಸರಿಸಿರುವುದನ್ನೂ ಲಕ್ಷಿಸಿದ್ದಾರೆ. ಯಕ್ಷಗಾನವನ್ನು ಒಂದು ಪ್ರತ್ಯೇಕ (isolated) ಪದ್ಧತಿಯಾಗಿ ನೋಡದೆ ದಕ್ಷಿಣ ಭಾರತದ ದೇಸಿ ರಂಗಭೂಮಿಯ ವಿಶಾಲವಾದ ಕ್ಷೇತ್ರದ ಹಿನ್ನೆಲೆಯಲ್ಲಿ ಪರಿಗಣಿಸಿರು