ಈ ಪುಟವನ್ನು ಪ್ರಕಟಿಸಲಾಗಿದೆ
ನಮ್ಮ ತಂದೆಯವರು / ೩೯೧

ಮದುವೆ ಉಪನಯನ ಮೊದಲಾದ ಸಮಾರಂಭಗಳಲ್ಲಿ ಹಲವರು ಒಟ್ಟು ಸೇರಿರುವಾಗ ಹಾಸ್ಯಪ್ರಧಾನವಾದ ಮಾತುಗಳಿಂದ ಬಂದವರನ್ನು ನಗಿಸಿ ತಾನೂ ನಗುವ ಪ್ರವೃತ್ತಿ ನಮ್ಮ ತಂದೆಯವರಲ್ಲಿತ್ತು.

೧೯೫೯ರಿಂದ ಅವರಿಗೆ ಪ್ರಿಯವಾದ ಜೀವನಕ್ರಮ ಆರಂಭವಾಯಿತೆ೦ದು ಹೇಳಬಹುದು. ೧೯೫೮-೫೯ರಲ್ಲಿ ನಾನು ಪುತ್ತೂರಿನ ಫಿಲೋಮಿನಾ ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದೆ. ಆಗ ನಮಗೆ ಮಂಗಳೂರಲ್ಲಿ ಸ್ವಂತ ಮನೆಯಿತ್ತು. ೧೯೫೯ರ ಬೇಸಿಗೆ ರಜೆಯಲ್ಲಿ ಅವರು ನನ್ನ ಕೂಡೆ ಹೇಳಿದ ಮಾತು “ನೀನು ಒಂದೆರಡು ವರ್ಷ ಮನೆಯಲ್ಲಿರು, ಆಮೇಲೆ ಪುನಃ ಕೆಲಸಕ್ಕೆ ಹೋಗಬಹುದು. ನನಗೆ ಯಕ್ಷಗಾನದಲ್ಲಿ ಒಂದೆರಡು ಪುಸ್ತಕ ಬರೆಯಬೇಕಾಗಿದೆ. ಇಲ್ಲಿನ ಕೆಲಸಕ್ಕೂ ಅದಕ್ಕೂ ಸರಿ ಹೊಂದುವುದಿಲ್ಲ, ಅದಕ್ಕಾಗಿ ಮಂಗಳೂರಲ್ಲಿ ಇರುತ್ತೇನೆ. ಈವರೆಗೆ ನಾನು ಸಂಶೋಧನೆ ಮಾಡಿದ, ಸಂಗ್ರಹಿಸಿದ ವಿಚಾರಗಳನ್ನು ಬರೆದು ಮುಗಿಸಿ ಮನೆಗೆ ಹಿಂತಿರುಗುತ್ತೇನೆ." ಹಾಗೆ ಮಂಗಳೂರಿಗೆ ಹೋದವರು ಪುನಃ ಇಲ್ಲಿಗೆ ಬಂದು ಇಲ್ಲಿನ ವ್ಯವಹಾರವನ್ನು ಕೈಗೆ ತೆಗೆದುಕೊಳ್ಳಲೇ ಇಲ್ಲ. ನಾನೂ ಕುಕ್ಕಿಲ ಬಿಡಲೂ ಇಲ್ಲ.

೧೯೬೧ರ ವರೆಗೆ ಮಂಗಳೂರಲ್ಲಿ ಇದ್ದರು. ಆಮೇಲೆ ೧೯೭೫ರವರೆಗೆ ಮೈಸೂರಲ್ಲಿ. ಈ ಅವಧಿಯಲ್ಲಿ ಅವರು ಯಕ್ಷಗಾನ, ಸಂಗೀತಶಾಸ್ತ್ರ ಮತ್ತು ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಹಲವಾರು ಲೇಖನಗಳನ್ನು ಪುಸ್ತಕಗಳನ್ನು ಬರೆದು ಪ್ರಕಟಿಸಿದುದಾಗಿದೆ. ಅವರಿಗೆ ಸಂಸ್ಕೃತ ಮತ್ತು ಇಂಗ್ಲಿಷ್‌ನಲ್ಲಿ ಒಳ್ಳೆಯ ಪಾಂಡಿತ್ಯವಿತ್ತು. ತಮಿಳು, ತೆಲುಗು ಮತ್ತು ಮಲೆಯಾಳ ಪುಸ್ತಕಗಳನ್ನು ಓದಿ ಸರಿಯಾಗಿ ಅರ್ಥಮಾಡಿಕೊಳ್ಳ ಬಲ್ಲವರಾಗಿದ್ದರು.

ಸಾಂಸಾರಿಕ ಮತ್ತು ಧಾರ್ಮಿಕ ವಿಚಾರಗಳಲ್ಲಿ ಅವರು ಹಳೆಯ ಸಂಪ್ರದಾಯಗಳಲ್ಲಿ ವಿಶೇಷ ನಂಬಿಕೆಗಳನ್ನಿಟ್ಟುಕೊಂಡಿರಲಿಲ್ಲ. ಅಂತರ್ಜಾತೀಯ ವಿವಾಹಕ್ಕೆ ಅವರ ಪ್ರೋತ್ಸಾಹವಿತ್ತು. ಹೆಂಗಸರು ಮನೆವಾರ್ತೆ ಮಾತ್ರ ನೋಡಿಕೊಂಡಿರುವುದಲ್ಲ. ವಿದ್ಯೆ ಕಲಿತು, ಕಲಿತವಿದ್ಯೆಗೆ ತಕ್ಕ ಕೆಲಸ ಮಾಡಿಕೊಂಡಿರಬೇಕು. ಎಂಬ ಅಭಿಪ್ರಾಯ ಉಳ್ಳವರಾಗಿದ್ದರು.ಯಾವ ಜಾತಿಯವರು ನಮ್ಮಲ್ಲಿಗೆ ಅತಿಥಿಗಳಾಗಿ ಬಂದರೂ ಸಹಪಂಙ್ತಿ ಭೋಜನ ಇಲ್ಲಿನ ಪದ್ಧತಿಯಾಗಿತ್ತು.

ನಮ್ಮ ತಂದೆಯವರ ವಿಚಾರ ಬರೆಯುವಾಗ ಅವರ ಇನ್ನೊಂದು ಪ್ರಾವೀಣ್ಯವನ್ನು ಬರೆಯಲೇಬೇಕು. ಅವರು ಪಾಕಶಾಸ್ತ್ರ ಪ್ರವೀಣರು. ಯಾವುದೇ ಅಡುಗೆ, ಸಿಹಿತಿಂಡಿಗಳನ್ನು ನುರಿತ ಅಡುಗೆಯವರಂತೆಯೇ ತಯಾರಿಸಬಲ್ಲವರಾಗಿದ್ದರು. ರುಚಿಕರವಾದ ಅಡುಗೆಯೇ ಯಾವಾಗಲೂ ಆಗಬೇಕು. ಒಳ್ಳೆಯದಾಗದಿದ್ದರೆ ಊಟಮಾಡುವಾಗಲೇ ಹೇಳುವ ಸ್ವಭಾವವು ಇತ್ತು. ನಾವು ಸಣ್ಣವರಾಗಿರುವಾಗ ಮನೆಗೆ ಬಂದ ಅತಿಥಿಗಳಿಗೆ ಬಹಳ ಚೆನ್ನಾಗಿ ಆದರೋಪಚಾರ ನಡೆಯುತ್ತಿತ್ತು.

ಅವರು ಬಹು ದೊಡ್ಡ ವಿದ್ವಾಂಸರೆಂಬುದು ನನಗೆ ತಿಳಿದುದು ೧೯೬೦ರ ಅನಂತರವೇ, ಕುಂಬಳೆ ಪಾರ್ತಿಸುಬ್ಬನ ವಿಚಾರ, ಅವರ ಲೇಖನಗಳು ಪ್ರಕಟವಾದ ಮೇಲೆಯೇ. ಅವರ ವಿದ್ವತ್ತಿನ ನೂರನೇ ಒಂದಂಶದಷ್ಟು ನಮಗೆ ಮಕ್ಕಳಿಗೆ ಯಾರಿಗೂ ಬಂದಿಲ್ಲವಾದರೂ ಅವರ ಒಡನಾಟದಿಂದ ಯಕ್ಷಗಾನ ಮತ್ತು ಸಂಗೀತದ ಬಂದಿದೆ.