ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನ ತೆಂಕಮಟ್ಟು / ೫೩

ಸೊಂಟದ ಮೇಲಿನ ಭಾಗ ಮಾತ್ರ ಪ್ರೇಕ್ಷಕರಿಗೆ ಕಾಣುವುದಾಗಿದ್ದು, ಕಾಲಿಲ್ಲದ ವ್ಯಕ್ತಿ ನಡುವಿನಿಂದಲೇ ಕುಣಿದಾಡುವಂತೆ ಭಾಸವಾಗುವ ಒಂದು ವಿಶೇಷ ಬಗೆಯ ಹಾಸ್ಯ ನೃತ್ಯವದು. ಮಲೆಯಾಳದಲ್ಲಿ ಅದಕ್ಕೆ 'ಚಟ್ಟಿನ್‌ಮೇಲ್‌ಕಳಿ' ಎಂದೂ ಹೆಸರಿದೆ.
ಇದಲ್ಲದೆ ಮೊದಲು ನಮ್ಮ ಆಟದಲ್ಲಿ 'ಕಟ್ಟುಹಾಸ್ಯ'ಗಳೆಂದು ರೂಢಿಯಲ್ಲಿದ್ದ ಸಿಂಗರಪಾಟಿನ ಹಾಸ್ಯ, ಕೊರವಂಜಿ ಹಾಸ್ಯ, ಮಲೆಯಾಳ ಮಲೆಯಾಳ ಮಡಿವಾಳನ ಹಾಸ್ಯ ಮುಂತಾದುವೂ ಕೇರಳದಿಂದ ಬಂದಂಥವೇ ಸರಿ.
ತೆಂಕಮಟ್ಟಿನ ನಮ್ಮ ಆಟದ ವೇಷಭೂಷಣಗಳಲ್ಲಿ ಹಾಗೂ ಕುಣಿತದಲ್ಲಿ ಹೆಚ್ಚಿನ ಮಟ್ಟಿಗೆ ಕೇರಳದ ಕಥಕಳಿಯ ಸಾದೃಶ್ಯವಿರುವುದಂತೂ ಪ್ರತ್ಯಕ್ಷ ಕಾಣುವ ವಿಚಾರ. ಸುಮಾರು ೫೦ ವರ್ಷಗಳ ಹಿಂದೆ ನೋಡಿದರೆ ಈ ಸಾದೃಶ್ಯವು ಈಗ ಇರುವಷ್ಟಲ್ಲ. ಕಥಕಳಿಯ ವೇಷಗಳಿಗೂ, ನಮ್ಮ ವೇಷಗಳಿಗೂ ವ್ಯತ್ಯಾಸವೇ ಇಲ್ಲ ಎಂಬಂತಿತ್ತು. ನಮ್ಮ ಬಾಲ್ಯದಲ್ಲಿ ನಾವು ನೋಡಿರುವ ಹಾಗೂ ನಮ್ಮ ಹಿರಿಯರಿಂದ ಕೇಳಿ ತಿಳಿದಿರುವ ಪ್ರಕಾರ ಅ೦ದಿನ ವೇಷ ರಚನೆಗಳು ಹೀಗಿದ್ದುವು:
ರಾಜಪುತ್ರಾದಿ ಎಳೆಹರೆಯದ ವೀರವೇಷಗಳನ್ನೂ, ಋಷಿ, ಬ್ರಾಹ್ಮಣ, ದೂತ ಮುಂತಾದ ಅಲ್ಪ ವೇಷಗಳನ್ನೂ ಬಿಟ್ಟು ಉಳಿದ ಎಲ್ಲ ತರಗತಿಯ ವೇಷಗಳಿಗೂ ಬೇರೆ ಬೇರೆ ಕ್ರಮದಲ್ಲಿ ಮುಖಕ್ಕೆ ಬಣ್ಣ ಹಚ್ಚುವುದಿತ್ತು. ಆ ಮುಖಚಿತ್ರಣದಿಂದಲೆ ಅದು ಇಂತಹ ಭೂಮಿಕೆ ಎನ್ನುವುದನ್ನು ಗುರುತಿಸಲಾಗುವಂತಿತ್ತು. ಅಂತಹ ಪ್ರತಿಯೊಂದು ವೇಷಗಳಿಗೂ ಅವುಗಳ ಸ್ವಭಾವಗುಣಕ್ಕೆ ತಕ್ಕಂತೆ ಬೇರೆ ಬೇರೆ ತರದ ಅಲಂಕಾರಗಳೂ, ಕಿರೀಟಗಳೂ ಇದ್ದವು. ಒಟ್ಟು ಹದಿನೆಂಟು ತರದ ಭಿನ್ನ ರಚನೆಯ ಕಿರೀಟಗಳನ್ನು ಉಪಯೋಗಿಸುತ್ತಿದ್ದರು. ವಿಷ್ಣು, ಕೃಷ್ಣ ಮುಂತಾದ ದೇವತಾಸ್ವರೂಪಗಳಿಗೆ ಎಳೆಹಸಿರು ಬಣ್ಣ ಹಾಕುವುದಿತ್ತು. ಈಗ ಕೃಷ್ಣನ ವೇಷಕ್ಕಾದರೂ ಬೂದಿ ಬಳಿದಂತೆ ನಸುಬಿಳುಪನ್ನು ಲೇಪಿಸುತ್ತಾರೆ. ರಾಕ್ಷಸ ವೇಷಗಳ ಬಣ್ಣಗಳಲ್ಲಿ ಮತ್ತು ಚುಟ್ಟಿ ಇಡುವ ಕ್ರಮಗಳಲ್ಲಿ ಹಾಗೂ ಕುಣಿತದಲ್ಲಿ ಮೊದಲಿದ್ದ ವೈಶಿಷ್ಟ್ಯಗಳು ಈಗ ಕ್ಷೀಣಿಸುತ್ತಾ ಬಂದಿವೆ. ಪುಂಡುವೇಷ, ಮುಖ್ಯ ವೇಷ, ರಾಕ್ಷಸವೇಷ (ಬಣ್ಣದ ವೇಷ), ಸ್ತ್ರೀವೇಷ, ಋಷಿ, ಬ್ರಾಹ್ಮಣ, ಚಾರಕ ಇತ್ಯಾದಿ ಪಾತ್ರಗಳ ಗತಿಪ್ರಚಾರಗಳಲ್ಲಿ ಹಿಂದಕ್ಕೆ ಬೇರೆ ಬೇರೆ ಕ್ರಮಗಳಿದ್ದವು. ಒಂದೊಂದರ ಪ್ರವೇಶಕ್ಕೂ ಚೆಂಡೆ ಮೃದಂಗಗಳ ಗತ್ತುಗಳು ಬೇರೆ ಬೇರೆ ಇದ್ದುವು. ಆ 'ದಸ್ತು-ದಿಂಗಿಣ' ಕೇಳಿದ ಮಾತ್ರದಿಂದ ಇದೀಗ ಇಂತಹ ವೇಷವೇ ರಂಗಸ್ಥಳಕ್ಕೆ ಬರುವುದು ಎಂದು ಹೇಳಬಹುದಾಗಿತ್ತು.

ಹಿಂದಕ್ಕಾದರೆ ಸ್ತ್ರೀವೇಷಗಳ ರಚನೆಯಲ್ಲಿಯೂ ವಿಶೇಷ ಕಲಾವಂತಿಕೆ ಇತ್ತು. ಮುಖಕ್ಕೆ ಚಾಯ ಹಚ್ಚಿ, ಮುತ್ತೇರಿ ಹಾಕಿ, ಕಪ್ಪು ಬಣ್ಣದಿಂದ ಹುಬ್ಬುಗಳನ್ನು ಬೇರೆ ತಿದ್ದಬೇಕು; ಕಪೋಲಗಳ ಮೇಲೆ ಕಪ್ಪು ಚುಕ್ಕಿಗಳಿಂದ ಹಾಗೂ ಸಣ್ಣ ರೇಖೆಗಳಿಂದ ಪತ್ರಿಕೆ ಬಿಡಿಸಬೇಕು; ಗಲ್ಲಕ್ಕೆ ಬೊಟ್ಟಿಡಬೇಕು; ಹಣೆಗೆ ಕುಂಕುಮದ ಉದ್ದ ಬೊಟ್ಟೂ, ಅದರ ಕೆಳಗೆ ಚಿಕ್ಕ ಉರುಟು ಬೊಟ್ಟೂ ಇಡಬೇಕು. ಬಗತಲೆ- ಬಾಸಿಗ, ಮುಂದಲೆ ಬೊಟ್ಟು, ನಾಗನೆಳೆಗಳಿಂದ ಹಣೆಯನ್ನಲಂಕರಿಸಬೇಕು. ಜಡೆ ಹಾಕುವ ಸ್ತ್ರೀವೇಷಗಳು ಜಡೆಗೊಂಡೆ ಕಟ್ಟಬೇಕು; ಮುಡಿ ಕಟ್ಟಿದರೆ ಚೆಂಡಿಟ್ಟು, ರಂಡೆಸೂಡಿ ಹಾಕಿ ಚೂಡಕವನ್ನಿಡಬೇಕು. ಕಿವಿಗೆ ಓಲೆಕ್ಕುಚ್ಚಿ, ಗಿಳಿಯೋಲೆ, ಬುಗುಡಿ ಸರಪಣಿ, ಅರಳೆಲೆ ಕುಂಡಲಗಳ ಅಭರಣಗಳಿದ್ದುವು. ಕೊರಳಿಗೆ ಗುಂಡಡ್ಡಿಗೆ , ಗೆಜ್ಜೆ ಟಿಕ್ಕು, ಎಕ್ಕಾವಳಿ, ಕಾಯಿಸರ, ಹವಳಸರಗಳಿದ್ದವು. ಮೂಗಿಗೆ ನತ್ತು, ಕತ್ತಿಗೆ, ಕೈಗೆ ಕಡಗ, ಕಂಕಣ ತೋಟ್ಟು, ಸೊಂಟಕ್ಕೆ ಡಾಬು, ಒಡ್ಯಾಣ,