ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನ ತೆಂಕಮಟ್ಟು

ಭರತನ ಶೃಂಗಾರವೇಷದ ಕಲ್ಪನೆಯೇ ಬೇರೆ. ತತ್ರ ಶೃಂಗಾರೋ ನಾಮ ಉಜ್ವಲ ವೇಷಾತ್ಮಕಃ' ಎನ್ನುತ್ತಾನೆ. ಸ್ತ್ರೀಪುರುಷರ ರತಿಯೇ ಸ್ಥಾಯೀಭಾವವಾದ ಶೃಂಗಾರಕ್ಕೆ ಸುಂದರ ವೇಷವೇ ಒಪ್ಪುವಂಥದಲ್ಲವೆ? ನಾನಾ ವಿಧದ ಬಣ್ಣಗಳಿಂದ ಚಿತ್ರಿಸಿದ ಮುಖದಲ್ಲಿ ಸೌಂದರ್ಯದ ಛಾಯೆಯೇ ಇಲ್ಲವಲ್ಲ? ಎಂದು ಸಹಜವಾಗಿಯೇ ಹುಟ್ಟುವ ಪ್ರಶ್ನೆಗೆ ಭರತನ ಸಮಾಧಾನವು ಹೀಗಿದೆ :
ಯಥಾ ಗೋತ್ರ ಕುಲೋತ್ಪನ್ನಾನಿ ಪುಂಸಾಂ ನಾಮಾನಿ ತಥ್ಯೆ |
ವೈಷಾo ರಸಾನಾo ಭಾವಾನಾಂ ಚ ನಾಟ್ಯಾಶ್ರಿತಾನಾಂಚಾರ್ಥಾನಾಂ ||
ಆಚಾರೋತ್ಪನ್ನಾನಿ ಆಪ್ರೋಪದೇಶ ಸಿದ್ಧಾನಿ ನಾಮಾನಿ ಭವಂತಿ |
ತದೇವಮೇವ ಗುರ್ವಾಚಾರಸಿದ್ಯೋ ಹೃದ್ಯೋಜ್ವಲವೇಷಾತ್ಮಕಃ ಶೃಂಗಾರ: |

ಹಾಗಾಗಿ ಶೃಂಗಾರರಸಾಧಿಷ್ಠಿತವಾದ ರಾಜವೇಷಗಳನ್ನೂ ಐದು ಬಣ್ಣಗಳಿಂದ ಉಜ್ವಲ ವಾಗುವಂತೆ ರೂಪಿಸಬೇಕೆಂದು ಹೇಳಿದ್ದಾನೆ. ಮತ್ತು ಶೂರಸ್ವಭಾವದ ರಾಜವೇಷವು ಸದಾ ಸಾಂಗ್ರಾಮಿಕ ವೇಷವಾಗಿರಬೇಕು (ಯುದ್ಧ ಸನ್ನದ್ಧವಾದಂತೆ) ಎನ್ನುತ್ತಾನೆ :
ವೇಷಃ ಸಾoಗ್ರಾಮಿಕವ ಶೂರಾಣಾಂ ಸಂಪ್ರಕೀರ್ತಿತಃ |
ವಿಚಿತ್ರ ಶಸ್ತ್ರಕವಚೋ ಬದ್ಧ ತ್ರಾಣೋ ಧರ್ನುಧರಃ ||
ವಿಚಿತ್ರ ವೇಷಃ ಕರ್ತವೊ ನೃಪಾಣಾಂ ನಿತ್ಯಮೇವಚ |

(ಭ.ನಾ. ೨೩-೧೨೮)

'ವಿಚಿತ್ರ' ಎಂದರೆ ಬಹುವರ್ಣಗಳುಳ್ಳದೆಂದರ್ಥ. ವೇಷಗಳ ಕಿರೀಟಗಳನ್ನು ಭರತನು 'ಕಿರೀಟ, ಅರ್ಧಮುಕುಟ, ಮೌಲಿ, ಶೀರ್ಷಮೌಲಿ ಎಂದು ನಾಲ್ಕು ವಿಧವಾಗಿ ಹೇಳಿದ್ದಾನೆ. ಅಮಾತ್ಯ, ಕಂಚುಕಿ, ಪುರೋಹಿತ, ಶ್ರೇಷ್ಟಿ (ಸೆಟ್ಟಿ) ಈ ಪಾತ್ರಗಳಿಗೆ ಮಾತ್ರ ಬಂಧ ಪಟ್ಟಾದಿವೇಷನ (ಮುಂಡಾಸು)ಗಳನ್ನು ಹೇಳಿದ್ದಾನಲ್ಲದೆ ಮಿಕ್ಕೆಲ್ಲ ಪುರುಷವೇಷಗಳೂ ತಮ್ಮ ಸ್ಥಾನಗೌರವಕ್ಕೆ ತಕ್ಕಂತೆ ಭಿನ್ನ ರಚನೆಯ, ಈ ನಾಲ್ಕು ವಿಧದ ಕಿರೀಟಗಳನ್ನೇ ಧರಿಸಬೇಕೆನ್ನುತ್ತಾನೆ. ಈ ಶಾಸ್ರೋಕ್ತ ಕ್ರಮವೇ ತೆಂಕಮಟ್ಟಿನ ನಮ್ಮ ಆಟಗಳಲ್ಲಿ ಅನುಸರಿಸಲ್ಪಡುತ್ತದೆ.
ನಮ್ಮ ವೇಷಗಳ ಕಿರೀಟದಿಂದ ಬೆನ್ನಮೇಲೆ ಮೊಣಕಾಲುಗಳ ವರೆಗೆ ಇಳಿಬಿಡುವ ಕೇತಭಾರವಿದೆಯಲ್ಲ, ಅದೂ ನಾಟ್ಯಶಾಸ್ರೋಕ್ತವಾದುದೇ- 'ಕೇಶಾನಾಂ ಚಾತಿ ದೀರ್ಘ ತಾತ್ ಸ್ಮೃತಂ ಮುಕುಟಧಾರಿಣಾಂ' ಎಂಬ ಲಕ್ಷಣವಿದೆ. ಕಿರೀಟಗಳನ್ನು ತಯಾರಿಸಲು ಬಳಸುವ ಸಾಧನಗಳೂ ನಮ್ಮ ಆಟದವರು ಉಪಯೋಗಿಸುವಂತಹದನ್ನೇ ಭರತನೂ ಹೇಳಿರುವುದಾಗಿದೆ. ಭೇಂಡ, ಪುಸ್ತ, ಕಿಲಿಂಜ, ಅಭ್ರಪತ್ರ, ಮಚ್ಛಿಷ್ಟ, ಶುಲ್ಕ, ಲಾಕ್ಷ, ವಸ್ತ್ರ ಇವುಗಳಿಂದ ಕಿರೀಟ, ಆಭರಣ ಇತ್ಯಾದಿಗಳನ್ನು ಮಾಡಬೇಕೆಂದಿದೆ. (ಭೇಂಡ = ಬೆಂಡು ಅಥವಾ ಹೀಲಿ, ಪುಸ್ತ = ತಾಳೆಯ ಮರದ ಗರಿಗಳು ಮತ್ತು ಅವುಗಳನ್ನು ಹೆಣೆದು ಮಾಡಿದ ಓಲೆ ತಟ್ಟಿ, ಕಿಲಿಂಜ = ಬಿದಿರಿನ ದಬ್ಬೆ ಅಥವಾ ಅವುಗಳಿಂದ ಮಾಡಿದ ತಟ್ಟಿ, ಓಲೆಯ ತಟ್ಟಿ ಎಂಬ ಅರ್ಥವೂ ಕಿಲಿಂಜಕ್ಕೆ ಇದೆ. ಅಭ್ರಪತ್ರ = ಬೇಗಡೆ, ಬಿಂಕದ ತಗಡು, ಮಧಚ್ಚಿಷ್ಟ-ಜೇನುಮಯಣ, ಲಾಕ್ಷ = ಅರಗು, ಶುಲ್ಕ = ದಾರ), ನಮ್ಮಲ್ಲಿ ಮತ್ತು ಕಥಕಳಿಯಲ್ಲಿ ಮೊರದ ಆಕಾರದ (ಮುಕುಟ) ದೊಡ್ಡ ಕಿರೀಟಕ್ಕೆ (ತಪ್ಪಿ ಕಿರೀಟ) ಮತ್ತು ಅದೇ ಆಕಾರದ ಸಣ್ಣದಕ್ಕೆ (ಅರ್ಧ ಮುಕುಟ) 'ಕೇಶಭಾರತಟ್ಟಿ' (ಕೇಶವರ ತಟ್ಟಿ) ಎಂದೇ ಹೇಳುತ್ತಾರೆ. ಎಂದರೆ ಹಿಂದಕ್ಕೆ ಇಳಿಬಿಡುವ ಕೇಶಭಾರವು, ಆ ಕಿರೀಟಕ್ಕೇ ಕಟ್ಟಿಕೊಂಡಿರುವುದರಿಂದ ಅದಕ್ಕೆ ಆ ಹೆಸರು. ಬಿದಿರ ದಬ್ಬಿ, ಓಲೆಯ ಗರಿ, ಬೆಂಡು