ಈ ಪುಟವನ್ನು ಪ್ರಕಟಿಸಲಾಗಿದೆ

ಗೆಡು ಇಟ್ಟು ಬೀಡಿನಿಂದ ಇಳಿದದ್ದು

17

ವೀಳ್ಯದೆಲೆಯ ಕವಳೆಯನ್ನು ಕೈಯಲ್ಲಿ ಹಿಡಿದು, ಬಲ್ಲಾಳನು ಓಲಗವಾಗಿದ್ದಲ್ಲಿಗೆ ಹೋಗಿ, “ನಮ್ಮ ಮಾತನ್ನು ಸಲ್ಲಿಸುವುದಕ್ಕೆ ಆರು ವರುಷದ ಗಡು” ಎಂದು ಗಟ್ಟಿಯಾಗಿ ಒದರಿ, ಆ ವೀಳ್ಯದೆಲೆಯನ್ನು ಗದ್ದಿಗೆಯ ಮೇಲೆ ಇಟ್ಟು, ಹೆದರದೆ ಅಲ್ಲಿಯೇ ನಿಂತನು. ಕೋಟಿಯು ಹೀಗೆ ಗಡು ಇಟ್ಟಿದ್ದನ್ನು ಕಂಡು ಬಲ್ಲಾಳನ ಉಪ್ಪರಿಗೆಯೇ ಗಡಗಡನೆ ನಡುಗಿತು; ಅಂತಃಪುರದಲ್ಲಿ ದಿಗಿಲು ಉಂಟಾಯಿತು; ಬೀಡಿನವರೆಲ್ಲಾ ಮೂಕರಂತೆ ಪಿಳಪಿಳನೆ ನೋಡ ಹತ್ತಿ ದರು. ಕೋಟಿ ಚೆನ್ನಯರ ಆ ವೀರಾವೇಷವನ್ನು ಕಂಡು, ಅವರ ಮೈ ಮುಟ್ಟುವಷ್ಟು ಧೈರ್ಯವಿಲ್ಲದೆ ಅಲ್ಲಿದ್ದವರೆಲ್ಲರೂ ಅಂಜುಬುರುಕರಂತೆ ಹಿಂಜರಿದರು,

ಕೋಟಿ ಚೆನ್ನಯರು ಯಾರ ತಡೆಯು ಇಲ್ಲದೆ ಬಡಬಡಬಡ ಮೆಟ್ಟಲು ಇಳಿದು, ಬೀಡಿನಿಂದ ಮಾಯವಾದರು.

ಕನಸು ಕಂಡಂತೆಯೂ ಕಣ್ಣು ಕತ್ತಲೆ ಬಂದಂತೆಯೂ ಅರಸುಮಣೆಯಲ್ಲೇ ಮರವೆಗೊಂಡಿದ್ದ ಪೆರುಮಾಳು ಬಲ್ಲಾಳನು ಒಂದು ತಾಸಿನ ತರುವಾಯ ಕಣ್ಣು ತೆರೆದು “ಬೆಳೆಯ ಬಿಟ್ಟ ಬಳ್ಳಿಯು ಬೆಳಿಸಿದವನನ್ನೇ ಬಂಧಿಸಿಬಿಟ್ಟಿತಲ್ಲಾ” ಎಂದು ಯೋಚಿಸಿ, “ಈ ಬಿಲ್ಲರ ಕೊಬ್ಬು ಬೀಡಿಗೆ ಕೆಡಕು, ನಾಡಿಗೆ ಒಡಕು ” ಎಂದು ಬಗೆದು, ಅವರನ್ನು ಹಿಡಿದು ಕೊಲ್ಲಿಸುವುದಕ್ಕೆ ನಾನಾ ಪ್ರಕಾರವಾಗಿ ಸಾಧಿಸಿದನು.

ಬಲ್ಲಾಳನ ಕೈಗೆ ಸಿಗದೆ ಅವನ ರಾಜ್ಯದಲ್ಲಿ ಹಂಗುಹೆದರಿಕೆಯಿಲ್ಲದೆ ಸುತ್ತಾಡುತ್ತಿದ್ದ ಕೋಟಿಚೆನ್ನಯರು ಒಂದು ದಿನ ನಡುಹಗಲ ಬಿಸಿಲಲ್ಲಿ ದಾರಿ ನಡೆದು, ಬಳಲಿ ಬೇಸತ್ತು, ದಣಿವಾರಿಸುವುದಕ್ಕೆಂದು ಒಂದು ಅರಳಿ ಕಟ್ಟೆಯ ಹತ್ತಿರ ಬಂದರು. ಆ ಕಟ್ಟೆ ಪರಿಷ್ಕಾರವಾಗಿತ್ತು; ಕಪ್ಪಾದರೂ ಕನ್ನಡಿಯಂತೆ ಬೆಳಗುವ ನೆಲ, ನೆಲದ ಮೇಲೆ ನಾಲ್ಕು ಕೊಡ ನೀರು ಹಿಡಿಯುವ ಗಡಿಗೆ, ಗಡಿಗೆಯ ಹತ್ತಿರ ಒಂದು ಬಿಂದಿಗೆ, ಅದರ ಎಡಕ್ಕೆ ಸ್ವಲ್ಪ ದೂರ ಒಂದು ಕಂಚಿನ ಕೈದಂಬೆ--ಇವುಗಳಿಂದ ಅದು ಅರವಟ್ಟಿಗೆ ಕಟ್ಟಿ ಎಂದು ಗೊತ್ತಾಗುತಿತ್ತು,

ಒಂದು ನಿಮಿಷದ ಮೇಲೆ ಚೆನ್ನಯನು “ಯಾರೂ ಇಲ್ಲವೆ? ಆಸರಿಗೆ

ನೀರು ಬೇಕು. ಎಂದು ಕೂಗಿದನು.

2