ಈ ಪುಟವನ್ನು ಪ್ರಕಟಿಸಲಾಗಿದೆ

೩ ನೆ ಯ ಭಾ ಗ .


ಎಣ್ಮೂರಲ್ಲಿ.

ಪಂಜವನ್ನು ಬಿಟ್ಟ ಕೋಟಿಚೆನ್ನಯರು ಎಣ್ಮೂರು ಸೀಮೆಯ ದಾರಿ ಹಿಡಿದರು. ಮುಂಚಿನ ಕಾಲದಲ್ಲಿ ಪಂಜದಿಂದ ಎಣ್ಮೂರಿಗೆ ಹೋಗುವವರು ಸುತ್ತು ದಾರಿಯನ್ನು ಹಿಡಿಯಬೇಕಾಗಿತ್ತು. ಈಗ ಇರುವ ದಾರಿಯುದ್ದಕ್ಕೆಲ್ಲಾ ಆ ಕಾಲದಲ್ಲಿ ದಟ್ಟಡವಿ ಬೆಳೆದಿತ್ತು. ಹುಲಿಗಳು ಮೇಯುವ ಹೊಲದಂತೆಯೂ, ಆನೆಗಳು ಅಲೆಯುವ ಆಟದ ಬೈಲಂತೆಯೂ ಇದ್ದು, ಸುಮಾರು ಎರಡು ಮೈಲು ಅಗಲಕ್ಕೆ ಮರಗಳಿಂದ ಕಿಕ್ಕಿರಿದಿದ್ದ ಈ ಕಾಡನ್ನು ಹಗಲು ಹೊತ್ತಿನಲ್ಲಾದರೂ ದಾಟುವುದಕ್ಕೆ ಆಗ ಜನರು ಧೈರ್ಯಪಡುತಿರಲಿಲ್ಲ , ಈ ಕಾಡೇ ಪಂಜಸೀಮೆಗೂ ಎಣ್ಮೂರು ಸೀಮೆಗೂ ಗಡಿಯಾಗಿದ್ದ ತುಪ್ಪೆ ಕಲ್ಲಿನ ಕಾಡು; ಇದರ ಸಂಬಂಧವಾಗಿ ಎರಡು ಸೀಮೆಗಳ ಬಲ್ಲಾಳರಿಗೆ ವಾದ ವಿವಾದಗಳು ಆಗಾಗ ಬರುತ್ತಲೇ ಇದ್ದುವು. ಅಡವಿಯ ಮೂಡುಕಡೆಯಲ್ಲಿ ಈಗ ಪಾಳುಬಿದ್ದಿರುವ ಅಯ್ಯನೂರು ಬೈಲಿಗಾಗಿ ಇಬ್ಬರು ಪರಸ್ಪರ ಹೊಡೆದಾಡುತಿದ್ದರು. ಕೋಟಿಚೆನ್ನಯರು ಈ ಬೈಲಿನ ಹತ್ತಿರದ ಅಡವಿಯಲ್ಲಿ ಅವಿತುಕೊಂಡು ಕೆಲವು ದಿನಗಳ ತನಕ ತಮ್ಮ ಪ್ರಾಣರಕ್ಷಣೆಯನ್ನು ಮಾಡಿಕೊಂಡರು.

ಪಡುಮಲೆಯ ಕೋಟಿಚೆನ್ನಯರ ಸಮಾಚಾರವು ಇದಕ್ಕಿಂತ ಮೊದಲೇ ಎಣ್ಣೂರಿನಲ್ಲಿ ಹಬ್ಬಿತ್ತು. ಅವರು ಪೆರುಮಾಳು ಬಲ್ಲಾಳನ ಗದ್ದಿಗೆಯಲ್ಲಿ ಗಡು ಇಡುವುದಕ್ಕೆ ಮುಂಚಿತವಾಗಿಯೇ ಅವರ ಸಾಕಣೆ ತಾಯಿ ಸಾಯಿನ ಬೈದಿತಿಯು ಪಡುಮಲೆಗೆ ಬೆನ್ನು ಹಾಕಿ, ಎಣ್ಮೂರಿಗೆ ಹೊರಟು ಬಂದು, ತನ್ನ ದೂರದ ಸಂಬಂಧಿಕರೊಬ್ಬರಲ್ಲಿ ಉಳುಕೊಂಡಿದ್ದಳು. ಕೋಟಿಚೆನ್ನಯರ ಪ್ರತಾಪವನ್ನು ಇವಳ ಬಾಯಿಂದ ಕೇಳಿದ ನೆಂಟರಿಷ್ಟರೂ ಜಾತಿಮತಸ್ಥರೂ ಅದಕ್ಕಾಗಿ ಬಹಳ ಹೆಚ್ಚಳಪಡುತಿದ್ದರು. ಅವರಿಬ್ಬರ ಮೇಲಿದ್ದ ಈ ಹೆಚ್ಚಳವು ಆ ವೀರರ ಸಾಹಸಶೌರ್ಯಗಳ ವಾರ್ತೆಯು ಹೆಚ್ಚಿ