ಈ ಪುಟವನ್ನು ಪ್ರಕಟಿಸಲಾಗಿದೆ

೧೦೩

"ಏಕೆ ಸಾಧ್ಯವಲ್ಲ?"

"ನಿಮ್ಮ ಭಟರು ಮಹಮನೆಯ ಮರದಿಂದಲೇ ಪತ್ರಗಳನ್ನು ತಂದರೆಂದು ಹೇಗೆ ನಂಬುವುದು?"

ಹೆಗ್ಗಡೆ ನಕ್ಕು, "ಬಿಲ್ವಪತ್ರಗಳಲ್ಲಿ ಒಂದು ಮರದ ಎಲೆಗೂ ಇನ್ನೊಂದು ಮರದ ಎಲೆಗೂ ವ್ಯತ್ಯಾಸವಿರುವುದೆಂದು ನಾನು ಇದೇ ಮೊದಲಸಾರಿ ಕೇಳಿದ್ದು," ಎಂದನು.

"ತಮ್ಮ ಕಣ್ಣುಗಳಿಗೆ ಯಾವ ವ್ಯತ್ಯಾಸವೂ ಕಾಣದಿರಬಹುದು. ಆದರೆ ನಮ್ಮ ಗುರುಗಳು ಪತ್ರಗಳನ್ನು ನೋಡುತ್ತಲೆ ಇದು ಮಹಮನೆಯ ಮರದ್ದು, ಇದು ಬೇರೆ ಮರದ್ದೆಂದು ಹೇಳಿಬಿಡುತ್ತಾರೆ. ಒಂದು ದಿನ ಏನಾಯಿತು ಗೊತ್ತೆ ಹೆಗ್ಗಡೆಗಳೆ?"

"ಏನಾಯಿತು?"

"ಆ ದಿನ ನಾನು ನಗರಕ್ಕೆ ಸಮೀಪದಲ್ಲಿರುವ ಬಾಂಧವರ ಓಣಿಗೆ ಹೋಗಿದ್ದೆ. ಅಲ್ಲಿಂದ ತಂದ ಪತ್ರಗಳನ್ನೇ ಪೂಜೆಗಿಟ್ಟೆ. ಗುರುಗಳು ಪತ್ರವಿಲ್ಲದೆ ಪೂಜೆ ಮುಗಿಸಿದರು. ಪ್ರಸಾದ ತೆಗೆದುಕೊಳ್ಳಲಿಲ್ಲ. ಅವರ ಕೋಪ ಶಾಂತವಾಗಬೇಕಾದರೆ ನಾಲ್ಕು ದಿನಗಳಾದವು."

ಕೊನೆಗೆ ಹೆಗ್ಗಡೆ ಅನುಮತಿ ಕೊಡಲೊಪ್ಪಿ, "ದಿನಕ್ಕೊಂದು ಸಾರಿ ಹೊರಗೆ ಹೋಗಿಬರಲು ರಹದಾರಿ ಬರೆದುಕೊಡುತ್ತೇನೆ. ಅದನ್ನು ನಿಮ್ಮ ಹೊರತಾಗಿ ಮತ್ತಾರೂ ಉಪಯೋಗಿಸಬಾರದು. ಪ್ರತಿಯಾಗಿ ನೀವು ನನ್ನ ಇನ್ನೊಂದು ಕಾರ್ಯದಲ್ಲಿ ಸಹಾಯ ಮಾಡಬೇಕು," ಎಂದನು.

ಹೆಗ್ಗಡೆಯ ಸ್ನೇಹ ಪ್ರಯೋಜನಕಾರಿಯೆಂದು ಭಾವಿಸಿ ಬ್ರಹ್ಮಶಿವ ಕೂಡಲೆ ಒಪ್ಪಿದನು.

ಹೆಗ್ಗಡೆ ಹೇಳಿದನು: "ಮುಂದಿನ ಮಾಘಮಾಸದ ಪರ್ವದಿನಗಳಲ್ಲಿ ಒಂದುವಾರ ಜಂಗಮ ದಾಸೋಹ ನಡೆಸಲು ಪ್ರಭುಗಳು ಅಪೇಕ್ಷಿಸಿದ್ದಾರೆ. ಪ್ರತಿದಿನ ಸಾವಿರ ಮಂದಿ ಜಂಗಮರಿಗೆ ಆಹ್ವಾನ ಕೊಟ್ಟಿದೆ. ದಾಸೋಹದ ಏರ್ಪಾಡಿಗಾಗಿ ಮಂತ್ರಿ ಚೆನ್ನಬಸವಣ್ಣನವರು ಇಬ್ಬರು ಕಾರ್ಯಕರ್ತರನ್ನು ಕಳುಹಿಸುವರು. ಆದರೂ ಮುಖ್ಯ ಕೆಲಸಗಳು ನನ್ನ ಮೇಲೆ ಬೀಳುತ್ತವೆ."

"ನಿಮ್ಮ ಕೆಲಸದಲ್ಲಿ ನಾನು ಸಹಾಯ ಮಾಡುತ್ತೇನೆ," ಎಂದನು ಬ್ರಹ್ಮಶಿವ.

"ನಾನು ಅಪೇಕ್ಷಿಸುವುದು ನಿಮ್ಮ ಸಹಾಯವನ್ನಲ್ಲ. ಪ್ರವಚನ ನಡೆಯುವಾಗ ನಾನಾಗಲಿ, ಕರ್ಣದೇವರಸರಾಗಲಿ ಎದುರಿಗಿರಬೇಕೆಂದು ಬಿಜ್ಜಳರಾಯರ ಆಜ್ಞೆ. ಕರ್ಣದೇವರಸರು ಊರಲ್ಲಿಲ್ಲ. ದಾಸೋಹದ ಕೆಲಸ ಕಾರ್ಯಗಳಿಂದ ನನಗೆ