ಈ ಪುಟವನ್ನು ಪರಿಶೀಲಿಸಲಾಗಿದೆ

ಮಂಗಳವೇಡೆಯ ಅಗ್ನಿದಾಹ ಶೆಟ್ಟಿಯನ್ನು ರಂಗಣ್ಣ ಜನರಿಲ್ಲದ ಕಡೆ ಕರೆದುಕೊಂಡು ಹೋಗಿ ರಹಸ್ಯವಾಗಿ,
“ನೀವು ನಗರದಲ್ಲಿ ರಾಜಭಟರ ಮುಂದೆ ಹೀಗೆಲ್ಲ ನಡಕೊಳ್ಳಬಾರದು,
” ಎಂದು ಎಚ್ಚರಿಸಿದ.
“ಏನಪಾ ನಾ ಮಾಡಿದ್ದು ?” ಎಂದು ಶೆಟ್ಟಿ ಗೊಣಗಿದ.
“ಕಣ್ ಕೆಕ್ಕರಿಸಿ ಭಟರನ್ನ ನೋಡೋದು, ನಗೋದು, ಅವರು ಏನ್
ಮಾಡ್ತಾರ ಎಂತ ಕೇಳೋದು, ಇವೆಲ್ಲಾ ತಪ್ಪಾಗದ ಶೆಟ್ರ, ಈಗಿನ ಆಡಳಿತದಾಗ
ರಾಜಭಟರ ಎದುರಿಗೆ ನೀವು ತಲೆಬಾಗಿ ನಿಂದಿರಬೇಕು. ಅವರು ಎದುರಾದ್ರ ಪಕ್ಕಕ್ಕೆ
ಸರಿದು ಹೋಗಬೇಕು. ನೋಡಿದಲ್ಲ, ಆ ಹಾಡುಗಾರನ್ನ ಹಿಡಕೊಂಡು ಹೊದ್ದು?
ಸೋಲ್ಪ ಸಿಟ್ಟಾದ್ರೂ ಜನರ ಹಿಡೀತಾರ ಈ ಭಟರು.”
“ಅವನ್ನ ಏಕಾ ಹಿಡಿದದ್ದು ? ನೀ ಹೇಳಲೆ ಇಲ್ಲ ರಂಗಣ್ಣ.”
“ಚಾಲುಕ್ಯ ಮಹಾರಾಣಿ ಕಾಮೇಶ್ವರೀದೇವೀನ ಹಾಸ್ಯಮಾಡಿ ಹಾಡು
ಕಟ್ಟಿದ ಅಂತ”.
“ಯಾರಪಾ ಆಕಿ, ಯಾರೂ ಹಾಡುಕಟ್ಟಿ ಹಾಡಬಾರದ ಹೆಣ್ಣು ?”
“ಈಗ ಬರತಾಳ ನೋಡೀವಂತ. ಆಕೀನ ಎದುರುಗೋಳ್ಳೋದಕ್ಕೇ
ಇಷ್ಟೇಲ್ಲ ನಡೀತಿರೋದು. ಆ ಸಭಾಂಗಣದಾಗ ಬಿಜ್ಜಳರಾಯರ ಸಂಗಡ ಎಷ್ಟೊಂದು
ಮಂದಿ ಸಾಮಂತರು ಕೂಡಿದಾರ ಗೊತ್ತೇ ನಿಮಗ? ರಾಜಬೀದ್ಯಾಗ ಜನ
ಕಿಕ್ಕಿರಿದು ನಿಂತಿರೋದು ಆಕೀನ ನೋಡೋದಕ್ಕ”
ಅವರು ಮಾತಾಡುತ್ತಿದ್ದಂತೆ ರಾಜಮಾರ್ಗದ ತಿರುವಿನಲ್ಲಿ ರಾಹುತರು
ಬರುತ್ತಿರುವುದು ಕಾಣಿಸಿತು. ರಂಗಣ್ಣ ಮತ್ತು ಶೆಟ್ಟಿ ಮಾರ್ಗದ ಒಂದು ಪಕ್ಕದಲ್ಲಿ
ಜನರ ಹಿಂದೆ ನಿಂತರು. ಸ್ವಲ್ಪ ಹೊತ್ತಿನ ಮೇಲೆ ಕೆಂಪು ಹಸಿರು ಬಣ್ಣಗಳ ಸಮವಸ್ತ್ರ
ಧರಿಸಿ, ಕತ್ತಿ ಗುರಾಣಿ ಭರ್ಜಿಗಳನ್ನು ಹಿಡಿದಿದ್ದ ನೂರು ಮಂದಿ ರಾಹುತರ
ರಕ್ಷಕದಳ ಬಂದಿತು. ಅದರ ಹಿಂದೆ ಶೃಂಗತಮ್ಮಟೆ, ಶಂಖ, ಭೇರಿ, ಜಯಘಂಟೆ,
ಜಾಗಟೆ, ಈ ಪಂಚವಾದ್ಯಗಳನ್ನು ನುಡಿಸುವವರು ಕುಳಿತಿದ್ದ ದೊಡ್ಡ ಗಾಡಿ,
ಚಾಲುಕ್ಯರಾಜ್ಯ ಲಾಂಛನಗಳನ್ನು ಹಿಡಿದ ಭಟರು, ಹಾಡಿಕುಣಿಯುವ ನರ್ತಕಿಯರು,
ಪ್ರಶಂಸಾಪದ್ಯಗಳನ್ನು ಪಠಿಸುವ ಮಾಗಧರು, ಬಿರುದಾವಳಿಗಳನ್ನು ಉಗ್ಗಡಿಸುವ
ಬಡಿವಾರದವರು, ವೇದಮಂತ್ರಗಳನ್ನು ಓದುವ ಪ್ರೋತ್ರಿಯರು, ಈ ಅನುಕ್ರಮದಲ್ಲಿ
ಮೆರವಣಿಗೆ ಸಾಗಿತ್ತು. ಈ ಎಲ್ಲ ಶಬ್ದಗಳ ಸಂಮಿಳಿತ ಘೋಷ ಕಡಲ ತೆರೆಗಳ
ಅಬ್ಬರದಂತೆ ಕೇಳಿಸಿತು.
ಮೆರವಣಿಗೆಯ ಈ ಭಾಗದ ಹಿಂದೆ ಕಲಶ ಕನ್ನಡಿ ಫಲಪುಷ್ಪ ಮಂಗಳ
ದ್ರವ್ಯಗಳ ತಟ್ಟೆಗಳನ್ನು ಹಿಡಿದ ನಾಗರಿಕ ಸುಮಂಗಲಿಯರು, ಮಂಗಳವೇಡೆಯ