ಈ ಪುಟವನ್ನು ಪರಿಶೀಲಿಸಲಾಗಿದೆ

ಮಂಗಳವೇಡೆಯ ಅಗ್ನಿದಾಹ

೧೪೯


ವರದಿ ಇಂದು ನನ್ನ ಕೈಸೇರಿದೆ. ರಾಜಗೃಹದಲ್ಲಿ ಈಗೊಂದು ವಾರದಿಂದ ಪ್ರತಿದಿನ ಒಂದು ಸಾವಿರ ಮಂದಿ ಜಂಗಮರಿಗೆ ದಾಸೋಹ ನಡೆಯುತ್ತಿದೆಯಂತೆ. ದಿನ ದಿನಕ್ಕೆ ಶರಣರ ಪ್ರಭಾವ ಬೆಳೆಯುತ್ತಿರುವುದು ರಾಜ್ಯಕ್ಕೆ ವಿಪತ್ಕಾರಕ !”

-ಎಂದು ಉತ್ತರಿಸಿದನು ಕರ್ಣದೇವ.

ಬರಿದಾಗಿದ್ದ ಕರ್ಣದೇವನ ಪಾನಪಾತ್ರೆಯನ್ನು ದಾಸಿ ತುಂಬಿದಳು. ಒಂದೇ ಗುಟುಕಿಗೆ ಮುಗಿಸಿದನು. ದಾಸಿ ಪುನಃ ತುಂಬಿದಳು. ಕರ್ಣದೇವ ಮುಗಿಸಿದನು. ದಾಸಿಯ ಕೈಯಲ್ಲಿದ್ದ ಪಾತ್ರೆಯೂ ಬರಿದಾಯಿತು.

ಆಗ ಕರ್ಣದೇವ ದಾಸಿಯ ಕೈಹಿಡಿದೆಳೆದು ತೊಡೆಯ ಮೇಲೆ ಕುಳ್ಳಿರಿಸಿ ಕೊಂಡು ಚುಂಬಿಸುತ್ತ -

“ಈಗ ನಾನು ಈ ತುಟಿಗಳ ತನಿರಸವನ್ನು ಕುಡಿಯುತ್ತೇನೆ” ಎಂದನು.

ಈ ಬೆದೆಯಾಟ ನಡೆಯುತ್ತಿದ್ದಂತೆ ಅಗ್ಗಳನು ಪಾನಶಾಲೆಯ ಸುತ್ತ ನೋಡಿದನು. ದ್ಯೂತಕ್ಕೆ ಗೊತ್ತಾಗಿದ್ದ ಸಭಾಂಗಣ ಅರಮನೆಯ ಉಪ್ಪರಿಗೆಯಲ್ಲಿತ್ತು. ಅದರ ಇನ್ನೊಂದು ಕೊನೆಯಲ್ಲಿ ಪಾನಶಾಲೆ. ಅದರ ಪಾರ್ಶ್ವದ ಮೊಗಶಾಲೆಯಿಂದ ರಾಜೋದ್ಯಾನದ ಮರಗಿಡಗಳು ಕಾಣುತ್ತಿದ್ದವು. ಪಾರಿಜಾತದ ಕೊಂಬೆಗಳು ಮೊಗಶಾಲೆಯವರೆಗೆ ಹರಡಿ, ಅಲ್ಲಲ್ಲಿ ಹೂವು ಎಲೆಗಳು ಉದುರಿದ್ದವು.

ಕೊಂಚ ಹೊತ್ತಿನ ಮೊದಲು ಅವರು ಬಂದಾಗ ನಿರ್ಜನವಾಗಿದ್ದ ಪಾನಶಾಲೆಯ ಬಾಗಿಲು ವಾತಾಯನಗಳಲ್ಲಿ ಈಗ ಕರ್ಣದೇವನ ಭಟರು ಕಾವಲು ನಿಂತಿದ್ದರು. ಅಗ್ಗಳನ ಮನಸ್ಸು ಅಳುಕಿತು. ನನ್ನನ್ನು ಬಂಧಿಸುವುದಕ್ಕಾಗಿಯೇ ಕರ್ಣದೇವ ಇಲ್ಲಿಗೆ ಕರೆತಂದನೇ ? ಎಂದು ಅವನು ಶಂಕಿಸಿದನು.

“ನಿಮ್ಮ ಬೆಡಗಿನ ಮಧುಪಾನ ನಿರಾತಂಕವಾಗಿ ನಡೆಯಲಿ, ಕರ್ಣದೇವರಸರೆ. ನಾನು ಹೋಗುತ್ತೇನೆ,” -ಎಂದು ಅಗ್ಗಳನು ಸುಖಾಸನದಿಂದೆದ್ದನು.

ಆಗ ಕರ್ಣದೇವ ದಾಸಿಯನ್ನು ಕೆಳಗೆ ತಳ್ಳಿ “ಕುಳಿತುಕೊಳ್ಳಿರಿ, ಅಗ್ಗಳದೇವ. ನಿಮ್ಮ ಸಂಗಡ ಮಾತಿದೆ. ನಮ್ಮ ಮಂತ್ರಾಲೋಚನೆ ಮೊದಲಾಗುವುದರಲ್ಲಿ ನೀವು ಹೊರಟುಬಿಟ್ಟರೆ ಹೇಗೆ?”

ದಾಸಿ ಎದ್ದು ಸೆರಗು ಮುಂಗುರುಳುಗಳನ್ನು ಸರಿಪಡಿಸಿಕೊಂಡು ಮಧುಪಾತ್ರೆಯನ್ನು ತುಂಬಿ ತರಲು ಒಳಗೆ ಹೋದಳು.

“ನೋಡು ಅಗ್ಗಳ, ನಿಮ್ಮ ಮಹಾರಾಣಿ ಮಂಗಳವೇಡೆಗೆ ಬಂದು ಕಲಚೂರ್ಯ ರಾಜಿಕಕ್ಕೆ ಕೈಹಾಕುತ್ತಿದ್ದಾಳೆ. ಅದರಿಂದ ನಮ್ಮ ರಾಜವಾಡೆಯಲ್ಲಿ, ಸಾಮಂತ ಮನ್ನೆಯರಲ್ಲಿ ಒಡಕು ತಲೆದೋರಿದೆ. ಆಗಲೆ ಕೆಲವರು ರಾಣಿಯ ವಿರುದ್ದ ಕತ್ತಿ