ಈ ಪುಟವನ್ನು ಪರಿಶೀಲಿಸಲಾಗಿದೆ

ಮಂಗಳವೇಡೆಯ ಅಗ್ನಿದಾಹ

೧೫೩


ಪ್ರಾರಂಭವಾದಂತಿದೆ, ಕರ್ಣದೇವರಸರೆ. ಅಣ್ಣನ ಆಹ್ವಾನದಂತೆ ಅತಿಥಿಯಾಗಿ ಬಂದ ಚಾಲುಕ್ಯ ರಾಣಿಯನ್ನು ತಮ್ಮನು ಬಂಧನದಲ್ಲಿಡಲು ಹವಣಿಸುತ್ತಿರುವನಲ್ಲವೆ? ಅದೇನೇ ಇರಲಿ, ನಾನು ಆ ವಿಚಾರಕ್ಕೆ ಪ್ರವೇಶಿಸುವುದಿಲ್ಲ. ಈಗ ನಿಮ್ಮ ಕಥೆ ಹೇಳಿ. ಶಾಂತಿಯಿಂದ ಕುಳಿತು ಕೇಳುತ್ತೇನೆ,” ಎಂದನು.

ಕರ್ಣದೇವನು ತನ್ನ ಬಟ್ಟಲಲ್ಲಿದ್ದ ಮಧುವನ್ನು ಆಗಾಗ ಎತ್ತಿ ಕುಡಿಯುತ್ತ ಹೇಳಿದನು-

“ಏಳು ವರ್ಷಗಳ ಹಿಂದಿನ ಘಟನೆ. ಕಂಪಿಲ ದುರ್ಗದಲ್ಲಿ ಅಜ್ಞಾತವಾಸದಲ್ಲಿದ್ದ ತೈಲಪನು ತೀರಿಕೊಂಡು ಕೆಲವು ತಿಂಗಳಾಗಿದ್ದುವು. ತುಂಬುಜವ್ವನದ ಹೊಚ್ಚ ಹೊಸ ವಿಧವೆಗೆ ತಕ್ಕಂತೆ ತೈಲಪನ ರಾಣಿ ಕಾಮೇಶ್ವರಿ, ತನ್ನ ಮೈದುನನಾದ ಜಗದೇಕಮಲ್ಲರಸನನ್ನು ನಿಯೋಗ ವಿಧಿಯಿಂದ ವರಿಸಿ ಪುತ್ರ ಸಂತಾನ ಪಡೆಯಲು ಬಿಜ್ಜಳರಾಯರ ಅನುಮತಿ ಕೇಳಿದಳು. ನಿಯೋಗ ಪದ್ಧತಿ ಈಗ ಪ್ರಚಾರದಲ್ಲಿಲ್ಲವೆಂದು ಅಣ್ಣನವರು ನಿರಾಕರಿಸಿದರು. ಜಗದೇಕಮಲ್ಲರಸರನ್ನು ನೋಡುವ ಅವಕಾಶವೂ ದೊರಕಲಿಲ್ಲ ಕಾಮೇಶ್ವರಿಗೆ.

“ಆಗ ರಾಣಿ ನನ್ನನ್ನು ಆಶ್ರಯಿಸಿದಳು. ಸಹಾಯ ಮಾಡಲು ನಾನು ಒಪ್ಪಿದೆ. ಅದಕ್ಕೊಂದು ರಹಸ್ಯ ಕಾರಣವಿತ್ತು. ಕದಂಬ ರಾಜಕನ್ಯೆ ಕುಸುಮಾವಳಿಯ ಹೆಸರು ಕೇಳಿರಬಹುದು ನೀವು. ಆಗ ಅವಳು ಬನವಾಸಿಯ ಮಧುಕೇಶ್ವರ ಮಂದಿರದ ನರ್ತಕಿಯಾಗಿದ್ದಳು. ಅಸಮಾನ ರೂಪವತಿ. ಗೀತ ನರ್ತನಗಳನ್ನು ಚೆನ್ನಾಗಿ ಅಭ್ಯಾಸ ಮಾಡಿದ್ದಳು. ಕಾಮೇಶ್ವರಿಯ ಅತಿಥಿಯಾಗಿ ಚಾಲುಕ್ಯ ಬಿಡಾರದಲ್ಲಿದ್ದ ಅವಳನ್ನು ನಾನು ಮೋಹಿಸಿದ್ದೆ. ರಾಜಾಂತಃಪುರಗಳ ಎಲ್ಲ ಹೆಣ್ಣುಗಳಂತೆ ಅವಳು ನನ್ನೊಡನೆ ಒಲಿದೂ ಒಲಿಯದ ಕಣ್ಣಾಮುಚ್ಚಾಲೆಗೆ ಪ್ರಾರಂಭಿಸಿದ್ದಳು. ಹಕ್ಕಿ ಬಲೆಗೆ ಬೀಳಲು ಏನಾದರೊಂದು ಉಪಾಯ ಹೂಡುವುದು ಅಗತ್ಯವಾಗಿತ್ತು. ನಾನು ಕಾಮೇಶ್ವರಿಗೆ ಹೇಳಿದೆ, 'ಇನ್ನೆರಡು ದಿನದಲ್ಲಿ ಜಗದೇಕಮಲ್ಲರಸರು ಬೇಟೆಗೆ ಹೋಗುತ್ತಾರೆ. ಆಗ ನೀವು ಮತ್ತು ಕುಸುಮಾವಳಿ ಸಮೀಪ ಗ್ರಾಮದ ನನ್ನ ಬಿಡಾರಕ್ಕೆ ಬಂದರೆ, ಬೇಟೆಯ ಶಿಬಿರದಲ್ಲಿ ಜಗದೇಕಮಲ್ಲರಸರನ್ನು ನೋಡಲು ಏರ್ಪಡಿಸುತ್ತೇನೆ,' ಎಂದು.

“ಕಾಮೇಶ್ವರಿ ಒಪ್ಪಿಕೊಂಡಳು. ಅದರಂತೆ ಮರುದಿನ ನಾವು ಗ್ರಾಮ ಬಿಡಾರಕ್ಕೆ ಹೋದೆವು. ಆ ರಾತ್ರಿಯನ್ನು ಕಾಮೇಶ್ವರಿ, ಗೋಮಂತಕದ ನರ್ತಕಿಯ ವೇಷದಲ್ಲಿ ಜಗದೇಕಮಲ್ಲರಸರ ಶಿಬಿರದಲ್ಲಿ ಕಳೆದಳು. ಬಿಡಾರದಲ್ಲಿ ನಾನು ಮತ್ತು ಕುಸುಮಾವಳೀ ಇಬ್ಬರೇ ಉಳಿದೆವು. ಈಗ ಹಕ್ಕಿ ನನ್ನ ಕೈಗೆ ಸಿಕ್ಕಂತೆ ಎಂದು