ಈ ಪುಟವನ್ನು ಪರಿಶೀಲಿಸಲಾಗಿದೆ

ಮಂಗಳವೇಡೆಯ ಅಗ್ನಿದಾಹ

೧೫೭


ಮತ್ತನಾಗಿ ದಿಂಬುಗಳಿಗೆ ಒರಗಿದೆ.”

“ಆಮೇಲೆ ?”

“ರಾಣಿ ನನ್ನ ಪಾರ್ಶ್ವದಿಂದೆದ್ದು, ಈ ದೀಪಗಳ ಬೆಳಕು ನನಗೆ ಲಜ್ಜೆ ತರುತ್ತಿದೆ ಎಂದು ಹೇಳಿ, ಒಂದನ್ನುಳಿದು ಉಳಿದೆಲ್ಲ ದೀಪಗಳನ್ನು ಆರಿಸಿಬಿಟ್ಟಳು.”

“ಆಮೇಲೆ?”

“ನಾನು ಒಳಗೆ ಹೋಗಿ ಈ ಒಡವೆ ವಸ್ತುಗಳನ್ನು ತೆಗೆದಿಟ್ಟು ಬೇರೆ ಬಟ್ಟೆ ಉಟ್ಟು ಬರುತ್ತೇನೆ, ಎಂದು ಹೇಳಿ ಪಾರ್ಶ್ವದ ಕೊಠಡಿಗೆ ಹೋದಳು. ನಾನು ದಿಂಬಿಗೊರಗಿ ಕಣ್ಣು ಮುಚ್ಚಿ ಆ ಅಪೂರ್ವ ಆನಂದ ಸಮಾಗಮದ ಕನಸು ಕಾಣುತ್ತಿದ್ದೆ.”

“ಕನಸಂತೆಯೇ ಮುಗಿಯಿತು ನಿಮ್ಮ ಆ ಸಮಾಗಮ!”

-ಎಂದು ಅಗ್ಗಳನು ಗಹಗಹಿಸಿ ನಕ್ಕನು.

“ಮುಗಿಯಲಿಲ್ಲ ಅಗ್ಗಳ. ಕೊಂಚ ಹೊತ್ತಿನ ಮೇಲೆ ಕಾಮೇಶ್ವರಿ ಪುನಃ ಅಲ್ಲಿಗೆ ಬಂದಳು.”-ಆತುರದಿಂದ ಒದರಿದನು ಕರ್ಣದೇವ.

“ಪುನಃ ಅಲ್ಲಿಗೆ ಬಂದವಳು ರಾಣಿಯಲ್ಲ, ಕರ್ಣದೇವರಸರೆ. ರಾಣಿಯಂತೆ ವೇಷ ಧರಿಸಿದ, ರೂಪ ಆಕೃತಿ ನಡೆ ನುಡಿಗಳಲ್ಲಿ ರಾಣಿಯನ್ನೇ ಹೋಲುವ ಒಬ್ಬ ಸಾಮಾನ್ಯ ದಾಸಿ. ಮಧುಪಾನದ ಅಮಲೇರಿದ್ದ ನಿಮಗೆ ಆ ವಂಚನೆಯನ್ನು ತಿಳಿಯುವ ಬುದ್ದಿ ಕೂಡ ಉಳಿದಿರಲಿಲ್ಲ. ನಿಮಗೆ ಆ ರಾತ್ರಿ ಒತ್ತೆ ನಿಂತವಳು ರಾಣಿಯ ದಾಸಿ, ರಾಣಿಯಲ್ಲ. ಕುಮಾರ ಪ್ರೇಮಾರ್ಣವ ನಿಮ್ಮ ಔರಸನಲ್ಲವೆಂಬುದಕ್ಕೆ ಬೇರೆ ಪ್ರಮಾಣವೇಕೆ ?”

ಅಗ್ಗಳ ಹೇಳಿದುದನ್ನು ಕೇಳಿ ಕರ್ಣದೇವ ಸ್ತಂಭಿತನಾದನು. ಚಡಪಡಿಸಿ ಹಾರಾಡುವ ಚೈತನ್ಯವೂ ಉಳಿದಿರಲಿಲ್ಲ ಆಗ ಅವನಲ್ಲಿ. “ಮಧು ಮಧು!” ಎಂದು ಕೂಗಿದನು ಮಾತ್ರ.

ದಾಸಿ ಓಡಿ ಬಂದು ಬಟ್ಟಲನ್ನು ತುಂಬಿದಳು. ಅಗ್ಗಳನ ಬಟ್ಟಲು ಹಿಂದಿನಂತೆ ತುಂಬಿರುವುದನ್ನು ಕಂಡು ಅವಳ ಮೊಗ ಮಿದುನಗೆಯಿಂದ ಅರಳಿತು. ಅಭಿನಂದನೆ ಆಶ್ವಾಸನೆಗಳನ್ನು ಚೆಲ್ಲಿತು, ಕಣ್ಣುಗಳ ಕಡೆನೋಟ.

ದಾಸಿ ಹೋದ ಮೇಲೆ ಅಗ್ಗಳನು ಅನುಕಂಪದ ಮೆಲ್ದನಿಯಿಂದ,

“ನಿಮ್ಮನ್ನು ನೋಡಿ ನನಗೆ ದುಃಖವಾಗುತ್ತಿದೆ, ಕರ್ಣದೇವರಸರೆ. ಆದರೆ ಏಳು ವರ್ಷಗಳ ಹಿಂದೆ ನಡೆದ ಒಂದು ಅಲ್ಪ ಘಟನೆಗಾಗಿ ನೀವೇಕೆ ಇಷ್ಟೊಂದು ಖಿನ್ನರಾಗಬೇಕು? ಅಲ್ಲಿಂದೀಚೆಗೆ ಎಷ್ಟು ನೀರು ಹರಿದಿದೆಯೋ ನಿಮ್ಮ ಬಾಳ