ಈ ಪುಟವನ್ನು ಪರಿಶೀಲಿಸಲಾಗಿದೆ

೧೬೬

ಕ್ರಾಂತಿ ಕಲ್ಯಾಣ


ಬಿಡಾರದ ಕೆಳಗೆ ಅಡಿಗೆಯ ಸಾಲು. ರಾಣಿಯ ದಾಸಿಯರು ಬೇಕಾದ ಭಕ್ಷ್ಯಭೋಜನಗಳನ್ನು ಮಾಡಿಟ್ಟಿದ್ದರು. ಒಡತಿಯ ಕೈಕಾಲು ತೊಳೆಸಿ ಉಷಾವತಿ ಪಾರ್ಶ್ವದ ಕೊಠಡಿಯಲ್ಲಿ ಆರೋಗಣೆಗೆ ಅಣಿಮಾಡಿದಳು.

ಬಡಿಸಿದ ತಿನಿಸುಗಳ ರುಚಿ ನೋಡಿ ಏನನ್ನೂ ತಿನ್ನದೆ ಎದ್ದುಬಿಟ್ಟಳು ಕಾಮೇಶ್ವರಿ. ಮನಸ್ಸಿನ ತಳಮಳ ಮತ್ತೆ ಮರುಕಳಿಸಿತ್ತು.

ವಾಸಗೃಹದ ಮಂಚದ ಮೇಲೆ ದಿಂಬುಗಳಿಗೊರಗಿ ಅವಳು ಕ್ಷಣಕಾಲ ಮಲಗಿದಳು, ಎದ್ದು ಶತಪಥ ತಿರುಗಿದಳು. ಆ ಅಜ್ಞಾತ ಗ್ರಾಮ್ಯಕವಿಯ ಹಾಡಿನ ನುಡಿಯೊಂದರ ನೆನಪಾಯಿತು.

ತೈಲವಿಲ್ಲದ ದೀಪ, ಗಂಡನಿಲ್ಲದ ತಾಪ,
ಹೌಹಾರುತಿದ್ದಾಳ ಲಕ್ಕಿ.
ಬಿಜ್ಜಳನ ಬಿಡುತಾಳ, ತೊಡೆಯೇರಿ ಕುಳಿತಾಳ,
ಇಬ್ಬರಿಗೂ ಮಕ್ಕಿಕಾ ಮಕ್ಕಿ !

ಭಾಷೆ, ಛಂದಸ್ಸು, ಶೀಲ, ಅಶ್ಲೀಲಗಳ ಪರಿವೆಯೂ ಇಲ್ಲದೆ ಎಷ್ಟೊಂದು ಸ್ವಾಭಾವಿಕವಾಗಿ ನುಡಿದಿದ್ದಾನೆ ಆ ನಾಡ ಕವಿ! ಬಿಜ್ಜಳನ ತೊಡೆಯೇರಲು ಬಯಸಿದೆನೇ ನಾನು? ನಮ್ಮ ವರಸಾಮ್ಯ “ಮಕ್ಕಿಕಾ ಮಕ್ಕಿ” ಎನ್ನುವಷ್ಟು ಈಡುಜೋಡಾಗಿದೆಯೇ?

ವಿದ್ಯೆಯ ಗಂಧವಿಲ್ಲದೆ ಕವಿಯಾಗಲೆಳಸುವ ಪಾಮರನಿಗೂ ಒಲಿಯುವ ಹೆಣ್ಣು ಸರಸ್ವತಿ ! ಮಾನವನ ಆಸೆ ಆಕಾಂಕ್ಷೆಗಳಿಗೆ ಅಧಿದೇವತೆಯಾಗಿ ಸರಸ್ವತಿಯನ್ನು ಸೃಷ್ಟಿಸಿದ ಬ್ರಹ್ಮದೇವನೇ ಅವಳ ಕಾಮದೇವನಾದದ್ದು ಹೇಗೆ? ಸರಸ್ವತಿಯ ಸ್ವೈರವರ್ತನೆಯನ್ನು ಸೂಚ್ಯವಾಗಿ ನಿರ್ದೇಶಿಸುವುದು ಆ ಪುರಾಣ ಕಥೆಯ ಉದ್ದೇಶವೆ?

ಸರಸ್ವತಿಯ ರಮ್ಯ ರೋಚಕ ಲಾವಣ್ಯಮಯ ಲಜ್ಞಾಹೀನ ಪ್ರತಿಸೃಷ್ಟಿಯೇ ಲಕ್ಷ್ಮೀ. ಮೂಲದಿಂದ ಬೇರೆಯಾಗುವುದು ಪ್ರಯತ್ನಿಸಿದರೂ ಸಾಧ್ಯವಲ್ಲ ಅವಳಿಗೆ. ಏಕಕಾಲದಲ್ಲಿ ಈ ಇಬ್ಬರು ಸ್ವೈರಿಣಿಯರನ್ನು ಒಲಿಸಲು ಪ್ರಯತ್ನಿಸಿ ಶೂಲಕ್ಕೇರಿದನು ಆ ನತದೃಷ್ಟ ಕವಿ,

-ಎಂದು ಯೋಚಿಸುತ್ತ ಕಾಮೇಶ್ವರಿ ವಾತಾಯನದ ಬಳಿ ಹೋದಳು. ಹೊರಗೆ ಗಾಡಾಂಧಕಾರ, ಏನೂ ಕಾಣುತ್ತಿರಲಿಲ್ಲ. ಬಿಡಾರದ ಹೊರಗಿನ ಮೊಗಶಾಲೆಯಲ್ಲಿ ನಿಂತು ನೋಡಿದರೆ, ಬೆಳುದಿಂಗಳ ಬೆಳಕಿನಲ್ಲಿ ಶೂಲದ ಮರ ಕಾಣಬಹುದು.