ಈ ಪುಟವನ್ನು ಪ್ರಕಟಿಸಲಾಗಿದೆ

೧೭೦

ಕ್ರಾಂತಿ ಕಲ್ಯಾಣ

ವಿವರಣೆ, ಆಮೇಲೆ ಅವನು ತನ್ನ ಕೈಹಿಡಿದದ್ದು, ಇಷ್ಟು ಮಾತ್ರ ನೆನಪಿನಲ್ಲಿತ್ತು.

ಮುಂದೆ ದುರ್ಭೇದ್ಯ ಅಂಧಕಾರ! ಚಿರಸಂಚಿತ ಪೂರ್ವಸ್ಮೃತಿಗಳ ವಿಸ್ಮೃತಿ ಮಹಾಸಾಗರ! ಅದರ ತಲದ ಕಾರ್ಗತ್ತಲಲ್ಲಿ ಅದೆಷ್ಟು ಕಲ್ಪನೆ ಸ್ಪಂದನ ಉದ್ರೇಕಗಳು ಉದಾಯಿಸಿ ಬೆಳೆದು ಅಸ್ತವಾಗಿದ್ದವು! ಆ ಎಲ್ಲ ಸಮ್ಮರ್ದ ಆಘಾತ ಪ್ರತ್ಯಾಘಾತಗಳ ನೆನಪು ಅಳಿದಿದ್ದರೂ, ಅವುಗಳಿಗೆ ಆಶ್ರಯವಾಗಿದ್ದ ದೇಹದಲ್ಲಿ ಅವುಗಳಿಂದಾದ ಗುರುತುಗಳು ಇನ್ನೂ ಉಳಿದಿವೆ. ನರನಾಡಿ ಮಾಂಸಪಿಂಡಗಳು ಆ ಉನ್ಮತ್ತ ಅನುಭವಕ್ಕಾಗಿ ಈಗಲೂ ಹಂಬಲಿಸುತ್ತಿವೆ.

ಕಾಮೇಶ್ವರಿ ಚಿಂತಿಸಿದಳು-ಪಶುಪಕ್ಷಿ ಮಾನವರಿಗೆ ಸಮಾನವಾದ ಈ ಉದ್ರೇಕಕ್ಕಾಗಿ ಅನುಗಾಲ ಹಾರೈಸುವುದೇ ಮಾನವ ಜೀವನದ ಪರಾಕಾಷ್ಠೆಯೇ? ಅದಕ್ಕಿಂತ ಹೆಚ್ಚಿನ ಆಸೆ ಆಕಾಂಕ್ಷೆಗಳು ಮತ್ತಾವುದೂ ಇಲ್ಲವೆ? ಇಂದ್ರಿಯಜನ್ಯವಾದ ಈ ಉದ್ರೇಕಕ್ಕೊಳಗಾದಾಗ ಮಾನವನ ವಿದ್ಯೆ ಗೌರವ ಅಧಿಕಾರ ಪದವಿಪ್ರತಿಷ್ಠೆಗಳು, ಗಾಳಿಗೆ ಸಿಕ್ಕಿದ ಅರಳೆಯ ರಾಶಿಯಂತೆ ತೂರಿಹೋಗುವುವು. ಆಗ ಕಾಮೇಶ್ವರಿ ರಾಣಿಯಲ್ಲ, ಬಿಜ್ಜಳನು ಸರ್ವಾಧಿಕಾರಿ ದಂಡನಾಯಕನಲ್ಲ, ಎಚ್ಚೆತ್ತ ಇಂದ್ರಿಯಗಳ, ಅರಳಿದ ಮಾಂಸಖಂಡಗಳ, ಮಿಡಿಯುವ ನರನಾಡಿಗಳ ಉನ್ಮತ್ತ ಸ್ಪಂದನಮಾತ್ರ. ಬಾಹ್ಯೇಂದ್ರಿಯಗಳಲ್ಲಿ ಹುಟ್ಟಿದ ಈ ಚಲನೆ, ಮನಸ್ಸಿನಲ್ಲಿ ಸೆಲೆಗೊಟ್ಟು, ಬುದ್ಧಿಯಲ್ಲಿ ಹರಡಿ, ಚೇತನದಲ್ಲಿ ಹಾರಾಡಿ, ಆನಂದದ ತೆರೆಗಳನ್ನು ಎಚ್ಚಿಸುವುದು ಬುದ್ಧಿಜೀವಿಯಾದ ಮಾನವನಿಗೆ ಮಾತ್ರ ವಿಶಿಷ್ಟವಾದ ಘಟನೆಯೇ? ಅಥವಾ ಪಶುಪಕ್ಷಿಗಳೂ ಆ ಅನುಭಾವವನ್ನು ಪಡೆಯುವವೆ?

ಪ್ರವಾಹ ರೂಪವಾದ ಸೃಷ್ಟಿಕಾರ್ಯ ನಿರಂತರವಾಗಿ ನಡೆಯಲಿ ಪ್ರಕೃತಿದೇವತೆ ನಿಯೋಜಿಸಿದ ಈ ಸಂವಿಧಾನ ಮಾನವ ಜೀವನದ ಎಲ್ಲ ಆಸೆ, ಎಲ್ಲ ಆಕಾಂಕ್ಷೆ, ಎಲ್ಲ ಉದ್ಯಮಗಳನ್ನು ಪ್ರಚೋದಿಸುವ ಮೂಲಶಕ್ತಿಯಾದದ್ದು ಹೇಗೆ? ಧರ್ಮ, ಯಜ್ಞ, ಶಿಲ್ಪ, ಕಲೆ, ಸಂಗೀತ, ಸಾಹಿತ್ಯ –ಮಾನವನನ್ನು ಅಮೃತಾನುಭಾವಕ್ಕೆ ಕರೆದೊಯ್ಯಬಲ್ಲ ಎಲ್ಲ ಸಂಚಲನಗಳ ಮೂಲ. ಹೆಣ್ನಿನ ದೇಹದ ಮಾಂಸಪಿಂಡಗಳ ವಿಕಾಸ, ಸಂಕೋಚ, ವಿಸ್ಫುರಣ, ಆಸ್ಫಾಲನೆಯಲ್ಲಿ ನೆಲೆಸಬೇಕೆ?

ಬುದ್ಧಿಜೀವಿಯಾದ ಮಾನವನ ಮೇಲೆ ಬುದ್ಧಿಶೂನ್ಯೆಯಾದ ಪ್ರಕೃತಿ ನಡೆಸುವ ಪ್ರತಿಹಿಂಸೆಯ ಅತ್ಯಾಚಾರ ಇದು! ಆ ಪ್ರತಿಹಿಂಸೆಯಲ್ಲಿಯೂ ಸುಖದ ಕನಸು ಕಾಣುವುದು, ಆನಂದದ ನೆಲೆಯನ್ನು ಹುಡುಕುವುದು, ಮಾನವನ ಅವಿವೇಕ! ಬಹು ದಿನಗಳ ಅಭ್ಯಾಸದಿಂದ ರಕ್ತಗತವಾದ ಉನ್ಮಾದ!

ತುಟಿ ಕೆನ್ನೆ ಕಣ್ಣುಗಳ ಮೇಲೆ ಚುಂಬನಗಳ ನಿರಂತರದಾರೆ ಕಾಮೇಶ್ವರಿಯನ್ನು