ಈ ಪುಟವನ್ನು ಪ್ರಕಟಿಸಲಾಗಿದೆ

೧೮೮

ಕ್ರಾಂತಿ ಕಲ್ಯಾಣ


ಯಾವಾಗಲೂ ಬುದ್ದಿಪೂರ್ವಕವಾಗಿ ಸತೀಧರ್ಮದ ಕಠಿಣಪಥವನ್ನು ಅತಿಕ್ರಮಿಸಿಲ್ಲ. ಈ ಆತ್ಮವಿಶ್ವಾಸ ಇದುವರೆಗೆ ನಿನಗೆ ಶಾಂತಿ ಸಮಾಧಾನಗಳನ್ನು ಕೊಟ್ಟಿತ್ತು, ಬಿಜ್ಜಳನ ದುಡುಕಿನಿಂದ ನಿನ್ನ ಆತ್ಮವಿಶ್ವಾಸ ಇಂದು ಮಣ್ಣುಗೂಡಿತು. ಬಿಜ್ಜಳನು ನಿನ್ನ ಸತೀತ್ವವನ್ನು ಅಪಹರಿಸಿದನು. ನೀನು ಚಾಲುಕ್ಯ ಚಕ್ರೇಶ್ವರನ ವಿಧವಾರಾಣಿ. ಮುಂದೆ ನೀನು ರಾಜಪ್ರತಿನಿಧಿ ಆಗಬಹುದು. ರಾಜಮಾತೆ ಎನಿಸಬಹುದು. ಆದರೂ ಜನರು ನಿನ್ನನ್ನು ಬಿಜ್ಜಳನ ಭೋಗಿನಿ ಎಂದು ಕರೆಯುವರು. ಬಿಜ್ಜಳನ ಪಟ್ಟ ಮಹಿಷಿಯರು, ಅಂತಃಪುರವಾಸಿನಿಯರಾದ ಗಣಿಕೆಯರು, ಅವನ ವಿಪುಳ ಪರಿವಾರ, ರಾಜ್ಯಲೋಭದಿಂದ ದೇಹವನ್ನು ಮಾರಿಕೊಂಡ ಕುಲಟೆಯೆಂದು ನಿನ್ನನ್ನು ಹಳಿಯುವರು. ಸೋಮೇಶ್ವರ ಸುಂದರವಲ್ಲಿಯರು ನಿನ್ನ ವಿಚಾರದಲ್ಲಿ ತೋರಿದ ಗೌರವ ಸನ್ಮಾನಗಳೂ ಬೆಳಗಿನ ಮಂಜಿನಂತೆ ಕ್ಷಣಾರ್ಧದಲ್ಲಿ ಕರಗಿಹೋಗುವುವು. ಇವರೆಲ್ಲರ ತಿರಸ್ಕಾರ ಅವಹೇಳನಗಳನ್ನು ಸಹಿಸುವ ಶಕ್ತಿ ಇದೆಯೇ ನಿನಗೆ?

“ನಿನ್ನ ಪತನದಿಂದ ಎಷ್ಟೊಂದು ಜನರು ವಿಪತ್ತಿನಲ್ಲಿ ಬೀಳುವರೆಂಬುದನ್ನು ಯೋಚಿಸಿದೆಯ? ಅಸೂಯೆಯಿಂದ ಕುರುಡನಾದ ಬಿಜ್ಜಳನು ಮದವೇರಿದ ಸಲಗದಂತೆ ರಾಜ್ಯವನ್ನೇ ನಾಶಮಾಡುವನು. ಜಗದೇಕಮಲ್ಲರಸರ ಮೇಲಿನ ಕಾವಲು ಹೆಚ್ಚುವುದು, ಕೊಲ್ಲಿಸುವುದೂ ಅಸಂಭವವಲ್ಲ. ಅಗ್ಗಳ ಶೀಲವಂತರೂ ವಿಪತ್ತಿನಲ್ಲಿ ಬೀಳುವರು. ಶರಣರ ವಿನಾಶಕ್ಕಾಗಿ ಬಿಜ್ಜಳನು ಪ್ರಾರಂಭಿಸುವ ವಿಧ್ವಂಸಕ ಕಾರ್ಯಾಚರಣೆಯಿಂದ ರಾಜ್ಯ ಅಲ್ಲೋಲ ಕಲ್ಲೋಲವಾಗುವುದು. ಕುಮಾರ ಸೋಮೇಶ್ವರನು ಶರಣರ ಪಕ್ಷಪಾತಿ. ಬಳ್ಳಿಗಾವೆಯಲ್ಲಿ ವಿದ್ಯಾರ್ಥಿಯಾಗಿದ್ದಾಗಲೆ ತಂದೆಯ ಅನುಮತಿ ಪಡೆದು ಶರಣಧರ್ಮದಲ್ಲಿ ದೀಕ್ಷಿತನಾದನೆಂದು ಕೇಳಿದ್ದೇನೆ. ಚಾಲುಕ್ಯರಾಜ್ಯದ ಅನೇಕ ಮಂದಿ ಸಾಮಂತರು, ಶ್ರೀಮಂತ ಬಣಜಿಗ ಕೃಷಿಕ ಕಾರ್ಮಿಕರು ಶರಣಧರ್ಮದ ಅನುಯಾಯಿಗಳು. ಕುಮಾರ ಸೋಮೇಶ್ವರನು ಶರಣರ ಪಕ್ಷ ವಹಿಸಿದರೆ ರಾಜ್ಯ ಇಬ್ಬಾಗವಾಗಿ ತಂದೆ ಮಕ್ಕಳ ನಡುವೆ ಅಂತಃಕಲಹ ಮೊದಲಾಗುತ್ತದೆ. ಯುದ್ದ ಸುಲಿಗೆಗಳಿಂದ ಚಾಲುಕ್ಯರಾಜ್ಯ ಹಾಳಾದ ಮೇಲೆ ಕುಮಾರ ಪ್ರೇಮಾರ್ಣವನ ಉತ್ತರಾಧಿಕಾರಕ್ಕೆ ರಾಜಿಕವಾಗಿ ಕುರುಡು ಕವಡೆಯ ಬೆಲೆಯೂ ಇರುವುದಿಲ್ಲ” ಎಂದು ನುಡಿಯಿತು ಅವಳ ವಿವೇಕ.

ಕಾಮೇಶ್ವರಿಯ ಅಂತರಂಗ ಈ ಎಚ್ಚರಿಕೆಯ ನುಡಿಗಳಿಂದ ಉದ್ರಿಕ್ತವಾಗಿ ಕುದಿಯಲು ಮೊದಲಾಯಿತು. ಕೊನೆಗವಳು, “ಈ ಎಲ್ಲ ಅಪವಾದ ಆತಂಕ ವಿಧ್ವಂಸಗಳಿಂದ ಉದ್ಧಾರವಾಗಲು ನನಗಿರುವುದು ಒಂದೇ ಮಾರ್ಗ. ಸ್ಥಿರಚಿತ್ತದಿಂದ