ಈ ಪುಟವನ್ನು ಪ್ರಕಟಿಸಲಾಗಿದೆ

ಮಂಗಳವೇಡೆಯ ಅಗ್ನಿದಾಹ

೧೯೧

ಎಂದು ಕೇಳಿದಳು.

"ಸೊನ್ನಲಾಪುರದಿಂದ ಕಲ್ಯಾಣಕ್ಕೆ ಹೋಗುತ್ತಿರುವ ಶರಣರ ಯಾತ್ರಾದಳವೊಂದು ಅಲ್ಲಿ ಬಿಡಾರ ಮಾಡಿದೆ. ನಾನು ಕಳುಹಿಸಿದುದಾಗಿ ಹೇಳಿದರೆ, ದಳದ ಸಂಗಡ ಪ್ರಯಾಣ ಮಾಡಲು ದಳದ ನಾಯಕ ಅನುಕೂಲ ಮಾಡಿಕೊಡುತ್ತಾನೆ."

"ನಾಯಕನು ನನ್ನ ಮಾತು ನಂಬದೆ ಹೋದರೆ?"

"ನಂಬದಿರಲು ಕಾರಣವಿಲ್ಲ. ನಿನ್ನೆ ಅವನು ನನ್ನನ್ನು ನೋಡಲು ಬಂದಿದ್ದ, ಆದರೂ ಈ ಉಂಗುರ ಹತ್ತಿರಿದ್ದರೆ ಒಳ್ಳೆಯದು," ಎಂದು ಕಾಮೇಶ್ವರಿ ಬೆರಳಲ್ಲಿದ್ದ ಮುದ್ರೆಯುಂಗುರವನ್ನು ತೆಗೆದು ಉಷಾವತಿಗೆ ಕೊಟ್ಟಳು.

"ಶರಣರ ಯಾತ್ರಾದಳ ಮಂಗಳವೇಡೆಯಿಂದ ಯಾವಾಗ ಹೊರಡುತ್ತದೆ?" -ತುಸು ಹೊತ್ತಿನ ಮೇಲೆ ಉಷಾವತಿ ಕೇಳಿದಳು.

"ನೀನು ಹೋಗುವಷ್ಟರಲ್ಲಿ ಅವರು ಪಯಣಕ್ಕೆ ಸಿದ್ಧರಾಗುತ್ತಾರೆ. ನಿನ್ನ ಮತ್ತು ಪ್ರೇಮಾರ್ಣವನ ಪರಿಚಯ ಯಾತ್ರಾದಳದಲ್ಲಿ ಯಾರಿಗೂ ತಿಳಿಯದಂತೆ ನೀನು ಎಚ್ಚರವಾಗಿರಬೇಕು."

"ಕಲ್ಯಾಣದಲ್ಲಿ ನಾನು ಜಗದೇಕಮಲ್ಲರಸರನ್ನು ನೋಡುವುದು ಹೇಗೆ?"

"ನೀನು ಕಲ್ಯಾಣಕ್ಕೆ ಹೋಗುತ್ತಲೆ ಪ್ರೇಮಾರ್ಣವನನ್ನು ಮಹಮನೆಗೆ ಕರೆದುಕೊಂಡು ಹೋಗಿ ಚೆನ್ನಬಸವಣ್ಣನವರ ಕಾಲುಗಳ ಮೇಲೆ ಹಾಕಿ, ಈ ಅನಾಥ ಬಾಲಕನನ್ನು ಶರಣರ ರಕ್ಷಣೆಯಲ್ಲಿ ಕರ್ಹಾಡಕ್ಕೆ, ಅವರ ಮಾವನ ಮನೆಗೆ ಕಳುಹಿಸಬೇಕಾಗಿ ನಾನು ಬೇಡಿದನೆಂದು ಹೇಳು. ಅವರು ನಿನಗೆ ಮಹಮನೆಯ ಅತಿಥಿ ಶಾಲೆಯಲ್ಲಿರಲು ಅನುಕೂಲ ಮಾಡಿಕೊಡುವರು. ಜಗದೇಕಮಲ್ಲರಸರನ್ನು ಬಂಧನದಲ್ಲಿಟ್ಟಿರುವ ರಾಜಗೃಹವೆಂಬ ಅರಮನೆಗೆ ಮಹಮನೆಯ ಜಂಗಮರು ಆಗಾಗ ಹೋಗಿ ಬರುವರೆಂದು ಕೇಳಿದ್ದೇನೆ. ಅವರ ಸಹಾಯದಿಂದ ನೀನು ಜಗದೇಕಮಲ್ಲರಸರನ್ನು ನೋಡಬಹುದು."

"ಹಾಗೆಯೇ ಮಾಡುತ್ತೇನೆ."

"ನೀನು ಜಗದೇಕಮಲ್ಲರಸರನ್ನು ಕಂಡು ನನ್ನ ಸಂದೇಶದ ನುಡಿಗಳನ್ನು ತಿಳಿಸುವವರೆಗೆ ಅದು ರಹಸ್ಯವಾಗಿರತಕ್ಕದ್ದು. ಚೆನ್ನಬಸವಣ್ಣನವರಿಗೆ ಇಲ್ಲಿ ನಡೆದುದನ್ನು ಸಂಕ್ಷೇಪವಾಗಿ ತಿಳಿಸಿ, ಶರಣರನ್ನು ನಿರ್ಮೂಲಗೊಳಿಸಲು ಬಿಜ್ಜಳನು ನಿರ್ಧರಿಸಿರುವನೆಂದು ಎಚ್ಚರಿಕೆ ಕೊಟ್ಟರೆ ಸಾಕು."

"ನೀವು ಹೇಳಿದಂತೆ ಮಾಡುತ್ತೇನೆ," ಎಂದು ಉಷಾವತಿ ಹೋಗುತ್ತಿದ್ದಂತೆ