ಈ ಪುಟವನ್ನು ಪ್ರಕಟಿಸಲಾಗಿದೆ

೨೦೮

ಕ್ರಾಂತಿ ಕಲ್ಯಾಣ

ಕೊಡದೆ ದೇಶದಲ್ಲಿ ಲೂಟಿ ದರೋಡೆ ನಡೆಸಲು ಮೊದಲುಮಾಡಿದ. ಸರ್ವಾಧಿಕಾರಿಗಳು ಅವನ ಬಂಧನಕ್ಕೆ ಆಜ್ಞೆ ಮಾಡಿದರು. ಒಂದು ಸಾರಿ ಬಸವ ದಂಡನಾಯಕರು ಬನವಸೆಗೆ ಯಾತ್ರೆ ಹೋಗಿದ್ದಾಗ ಸಿಂಗಿರಾಜ ತಾನಾಗಿ ರಾಜಭಟನಿಗೆ ವಶನಾದ. ಧರ್ಮಾಧಿಕರಣದ ಅಧಿಕಾರಿಗಳು ಅವನನ್ನು ವಿಚಾರಣೆಗಾಗಿ ಕಲ್ಯಾಣಕ್ಕೆ ಕಳುಹಿಸಿದರು."

"ಅವನ ವಿಚಾರಣೆ ಮುಗಿಯಲು ಆರು ವರ್ಷಗಳು ಹಿಡಿಯಿತೆ?"—ಮಧುವರಸನು ಅಚ್ಚರಿಯಿಂದ ಪ್ರಶ್ನಿಸಿದನು. ಧರ್ಮಾಧಿಕರಣದ ಆಲಸ್ಯ ನೀತಿಯ ಬಗೆಗೆ ನಾಗರಿಕರ ಆಕ್ಷೇಪ ಈಗ ಅವನಿಗೆ ಅರ್ಥವಾಯಿತು.

"ಆರು ವರ್ಷಗಳು ಕಳೆದರೂ ಅವನ ವಿಚಾರಣೆ ನಡೆಯಲಿಲ್ಲ, ಒಡೆಯರೆ. ಕೊನೆಗೆ ಸರ್ವಾಧಿಕಾರಿಗಳು ಅವನೊಬ್ಬ ನಿರುಪದ್ರವಿ ಕವಿಯೆಂದೂ, ಮನೆ ಮಠಗಳನ್ನು ಬಿಟ್ಟು ಸನ್ಯಾಸಿಯಾಗುವುದು ಅವನ ಉದ್ದೇಶವೆಂದೂ ತಿಳಿದು ಬಿಡುಗಡೆಗೆ ಆಜ್ಞೆ ಮಾಡಿದರು. ಆಗಲೂ ಅವನ ಕಾವ್ಯ ಮುಗಿದಿರಲಿಲ್ಲ." -ಎಂದು ಜವರಾಯ ಉತ್ತರಿಸಿದನು.

"ಕಾರಾಗೃಹದಲ್ಲಿದ್ದಷ್ಟು ದಿನವೂ ಅವನು ಕಾವ್ಯರಚನೆಯಲ್ಲಿ ತೊಡಗಿದ್ದನೆ?"

"ಹೌದು, ಒಡೆಯರೆ. ಮೇಲಿನ ಅಪ್ಪಣೆ ಪಡೆದು ನಾನು ಅವನಿಗೆ ಬೇಕಾದ ತಾಡಪತ್ರ ಓಲೆ ಕಂಠಗಳನ್ನು ತಂದುಕೊಟ್ಟೆ. ಅವನೇನು ಹೇಳುತ್ತಿದ್ದ ಗೊತ್ತೆ?"

"ಏನು ಹೇಳುತ್ತಿದ್ದ?"

"ನಾನು ಪಂಡಿತನಲ್ಲ, ಛಂದಸ್ಸು ಭಾಷೆಗಳು ತಿಳಿಯದು. ಆದರೂ ಕಾವ್ಯ ಬರೆಯಲು ತೊಡಗಿದ್ದೇನೆ. ಆ ಕಾಶೀ ವಿಶ್ವೇಶ್ವರನೆ ಅದನ್ನು ಮುಗಿಸಿಕೊಡಬೇಕು ಎಂದು."

ತುಸು ಹೊತ್ತು ಯೋಚಿಸಿ ಮಧುವರಸನು, "ಸಿಂಗಿರಾಜನು ಬರೆಯುತ್ತಿದ್ದ ಕಾವ್ಯದ ಹೆಸರೇನು? ಅದರ ಪತ್ರಗಳು ನಿನ್ನಲ್ಲಿ ಉಳಿದಿವೆಯೆ? ಎಂದು ಪ್ರಶ್ನಿಸಿದನು.

"ಕಾವ್ಯದ ಹೆಸರು ನನಗೆ ತಿಳಿಯದು, ಒಡೆಯರೆ. ಬಸವಣ್ಣನವರ ಅರವತ್ತ ನಾಲ್ಕು ಪವಾಡಗಳನ್ನು ವರ್ಣಿಸುತ್ತೇನೆ ಎಂದು ಸಿಂಗಿರಾಜ ಹೇಳುತ್ತಿದ್ದ. ಇಲ್ಲಿಂದ ಹೋದಾಗ ಅವನ ತಾಳೆಯೋಲೆಯ ಕಟ್ಟು ಸ್ವಲ್ಪ ದೊಡ್ಡದಾಗಿಯೇ ಇತ್ತು. ಅದರ ಎರಡು ಪತ್ರಗಳು ಮಾತ್ರ ನನ್ನಲ್ಲಿ ಉಳಿದಿವೆ," -ಎಂದು ಜವರಾಯ ನೀಳವಾಗಿ ಕತ್ತರಿಸಿ ನಡುವೆ ರಂಧ್ರ ಮಾಡಿದ ಎರಡು ಓಲೆಗರಿಗಳನ್ನು ಮಧುವರಸನಿಗೆ ಕೊಟ್ಟನು.

ಅರ್ಧ ಬರೆದು ಹಾಗೆಯೇ ಬಿಟ್ಟಿದ್ದ ಆ ಪತ್ರಗಳಲ್ಲಿನ ಒಂದು ಪದ್ಯ