ಈ ಪುಟವನ್ನು ಪರಿಶೀಲಿಸಲಾಗಿದೆ

೨೨೪

ಕ್ರಾಂತಿ ಕಲ್ಯಾಣ

ಸಂಕೋಚದಿಂದ, "ಉತ್ತರವೇನೂ ಇಲ್ಲ," ಎಂದನು.

"ಹಾಗಾದರೆ ಅಪರಾಧ ಒಪ್ಪಿಕೊಳ್ಳುವೆಯ?"

"ಯಾವ ಅಪರಾಧವನ್ನು?" "ಮಧುವರಸರ ಮಗಳೊಡನೆ ನಿನ್ನ ಮಗನ ಮದುವೆ ನಡೆದುದನ್ನು."

"ಮಧುವರಸರ ಇಚ್ಛೆಯಂತೆ ಮದುವೆ ನಡೆಯಿತು. ಅಪರಾಧವಾಗಿದ್ದರೆ ಶರಣರು ಅದಕ್ಕೆ ಒಪ್ಪಿಗೆ ಕೊಡುತ್ತಿದ್ದರೆ?"

"ನಾನು ನಿನ್ನ ಉತ್ತರ ಕೇಳಬೇಕಾಗಿದೆ. ಪ್ರಶ್ನೆ ಬೇಕಾಗಿಲ್ಲ." –ಕ್ರಮಿತನು ಕೋಪದಿಂದ ಹೇಳಿದನು.

ಆಗ ಮಂಚಣನು ಮಧ್ಯೆ ಬಂದು, "ನೀವು ಆಪಾದಿತನನ್ನು ಬೆದರಿಸುತ್ತಿದ್ದೀರಿ, ನಾರಣಕ್ರಮಿತರೆ. ಈ ವಿಧಾನದಿಂದ ನಾವು ಏನನ್ನೂ ತಿಳಿಯಲಾಗುವುದಿಲ್ಲ," ಎಂದನು.

"ನನ್ನ ಪ್ರಶ್ನೆಗಳು ಸ್ಪಷ್ಟವಾಗಿವೆ. ಅದಕ್ಕೆ ನೇರವಾದ ಉತ್ತರ ಕೊಡದೆ ಆಪಾದಿತನು ಏನೇನೋ ಒದರುತ್ತಿದ್ದಾನೆ," ಎಂದು ಕ್ರಮಿತನು ಪುನಃ ಆಕ್ಷೇಪಿಸಿದನು.

"ಹರಳಯ್ಯ ನಿಮ್ಮಂತೆ ಪ್ರಬುದ್ಧರಲ್ಲ, ಹಳೆಯ ಕಾಲದವರು. ನಾನು ಅವರನ್ನು ಪ್ರಶ್ನಿಸುತ್ತೇನೆ. ಆಗ ಸರಿಯಾದ ಉತ್ತರ ಬರುವುದೇನೋ ನೋಡೋಣ."

-ಎಂದು ಮಂಚಣ ಸಲಹೆ ಮಾಡಿದನು. ಕ್ರಮಿತನು ಒಪ್ಪಿದ ಮೇಲೆ ಮಂಚಣ ಹರಳಯ್ಯಗಳ ನಡುವೆ ಪ್ರಶ್ನೋತ್ತರಗಳು ನಡೆದವು.

ಮಂಚಣ- "ಮಧುವರಸರ ಮಗಳೊಡನೆ ನಿಮ್ಮ ಮಗನ ವಿವಾಹ ನಡೆಯಿತೆಂಬುದನ್ನು ನೀವು ಒಪ್ಪುತ್ತೀರಾ?"

"ಆ ಮದುವೆಯಿಂದ ನೀವು ವರ್ಣಸಂಕರ ಮಾಡಿರುವಿರೆಂದು ನ್ಯಾಯಪೀಠದ ಆಪಾದನೆ? ಅದಕ್ಕೆ ನಿಮ್ಮ ಉತ್ತರವೇನು?"

"ನನ್ನಿಂದ ಯಾವ ಅಪರಾಧವೂ ನಡೆದಿಲ್ಲ."

"ಕೀಳು ಜಾತಿಯ ವರನು ಉತ್ತಮ ವರ್ಣದ ಹೆಣ್ಣನ್ನು ಮದುವೆಯಾಗುವುದು ವರ್ಣಸಂಕರವೆಂದು ಧರ್ಮಶಾಸ್ತ್ರಗಳು ಹೇಳುತ್ತವೆ. ಅದರಂತೆ ನೀವು ಅಪರಾಧ ಮಾಡಿರುವಿರೆಂದು ನ್ಯಾಯಪೀಠದ ಆಪಾದನೆ."

"ಶರಣಧರ್ಮದಲ್ಲಿ ಮೇಲು ಕೀಳು ಭಾವನೆಯಿಲ್ಲವೆಂದು ಬಸವಣ್ಣನವರು ಹೇಳುತ್ತಾರೆ. ನಾನದನ್ನು ನಂಬಿದ್ದೇನೆ. ಶರಣರ ಅನುಮತಿ ಪಡೆದು ಶರಣಧರ್ಮಾನುಸಾರ ನನ್ನ ಮಗನ ಮದುವೆ ನಡೆಯಿತು. ಅದು ವರ್ಣಸಂಕರವಲ್ಲ. ನನ್ನಿಂದ ಅಂತಹ ಅಪರಾಧ ನಡೆದಿಲ್ಲ."