ಈ ಪುಟವನ್ನು ಪರಿಶೀಲಿಸಲಾಗಿದೆ

೨೩೦

ಕ್ರಾಂತಿ ಕಲ್ಯಾಣ


ತಿಳಿಸಿದಿರಿ, ಅಲ್ಲವೆ?” ಎಂದು ಕ್ರಮಿತನು ಪುನಃ ಪ್ರಶ್ನಿಸಿದನು.

ನ್ಯಾಯಪೀಠದ ಪ್ರಶ್ನೆಗಳಿಗೆ ತನ್ನ ಉತ್ತರ ಸರಿಯೆ ? ಎಂದು ಲಾವಣ್ಯವತಿಗೆ ಸಂದೇಹವಾಯಿತು. “ನಾನು ಚಿಕ್ಕಂದಿನಲ್ಲಿಯೇ ತಾಯಿಯನ್ನು ಕಳೆದುಕೊಂಡೆ. ತಂದೆ ನನ್ನನ್ನು ಸಾಕಿ ಸಲಹಿದರು. ನನ್ನ ಮನಸ್ಸನ್ನು ಅವರಿಗೆ ತಿಳಿಸದೆ ಮತ್ತಾರಿಗೆ ತಿಳಿಸಲಿ ?” ಎಂದು ಅವಳು ಮಾರುತ್ತರ ಕೊಟ್ಟಳು.

“ನಿಮ್ಮ ಮೆಚ್ಚಿಗೆ ತಿಳಿದ ಮೇಲೆ ನಿಮ್ಮ ತಂದೆ ಹರಳಯ್ಯನ ಹತ್ತಿರ ಮದುವೆಯ ಪ್ರಸ್ತಾಪ ಮಾಡಿದರಲ್ಲವೆ?”

“ನೀವು ಮತ್ತೆ ಮತ್ತೆ ಕೇಳಿದ್ದನ್ನೇ ಕೇಳುತ್ತಿದ್ದೀರಿ. ನಾನು ಮಧುವರಸರ ಮಗಳಲ್ಲದೆ ನಿಮ್ಮ ಮಗಳಾಗಿದ್ದರೆ ಏನು ಮಾಡುತ್ತಿದ್ದಿರಿ ?”

“ನಿನ್ನನ್ನು ಕತ್ತಲ ಕೋಣೆಯಲ್ಲಿ ಕೂಡಿ ಉಪವಾಸ ಹಾಕುತ್ತಿದ್ದೆ. ವರ್ಣ ಸಂಕರದ ಈ ಮದುವೆಗೆ ಒಪ್ಪುತ್ತಿರಲಿಲ್ಲ.” – ಕ್ರಮಿತನು ಕೋಪದಿಂದ ಸಿಡಿದೆದ್ದು ಹೇಳಿದನು.

“ಶರಣ ಧರ್ಮಕ್ಕೂ ವೈದಿಕ ಧರ್ಮಕ್ಕೂ ಇರುವ ಅಂತರವನ್ನು ನಿಮ್ಮ ಮಾತುಗಳು ಹೇಳುತ್ತಿವೆ. ಜಾತಿಪಂಥ ಮೇಲು ಕೀಳು ಭಾವನೆಗಳನ್ನು ಶರಣಧರ್ಮ ಒಪ್ಪುವುದಿಲ್ಲ. ಅವರ ದೃಷ್ಟಿಯಲ್ಲಿ ಶಿವನ ಭಕ್ತರೆಲ್ಲ ಸಮಾನರು. ಪುರುಷರಂತೆ ಸ್ತ್ರೀಯರಿಗೂ ಸಮಾನಾಧಿಕಾರವಿದೆ.” -ಲಾವಣ್ಯವತಿ ಅಷ್ಟೇ ಆವೇಶದಿಂದ ಹೇಳಿದಳು. ಅವಳ ಪ್ರಗಲ್ಭತೆ ಜಾಗ್ರತವಾಗಿತ್ತು.

ವಿಚಾರಣೆ ಪ್ರಕೋಪಕ್ಕೇರುವುದೆಂದು ಭಾವಿಸಿ ಮಂಚಣನು, "ಸಾಕಾದಷ್ಟು ಕಾಲ ಪ್ರಶೋತ್ತರಗಳೂ ನಡೆದಿವೆ. ಇನ್ನು ಮುಗಿಸಿದರೆ ಒಳ್ಳೆಯದಲ್ಲವೆ?” ಎಂದು ಸಲಹೆ ಮಾಡಿದನು.

ಕ್ರಮಿತನಿಗೂ ಅದು ಉಚಿತವಾಗಿ ಕಂಡಿತು. "ಕೊನೆಯದಾಗಿ ನನ್ನದೊಂದು ಪ್ರಶ್ನೆಯಿದೆ. ಅದನ್ನು ಬರೆದುಕೊಡುತ್ತೇನೆ. ಮಂಚಣನವರು ಓದಿಕೊಂಡು ಸಾಕ್ಷಿಗೆ ಕೊಡಬಹುದು. ಸಾಕ್ಷಿ ಇಚ್ಛೆಯಂತೆ ಪ್ರಕಟವಾಗಿಯೋ ಬರಹದಲ್ಲಿಯೋ ಅದಕ್ಕೆ ಉತ್ತರ ಕೊಡಲಿ,” ಎಂದನು.

ಮಂಚಣನ ಒಪ್ಪಿಗೆ ಪಡೆದು ಕ್ರಮಿತನು ಪ್ರಶ್ನೆಯನ್ನು ಹಲಿಗೆಯ ಮೇಲೆ ಬರೆದನು. ಓದಿ ಮಂಚಣನ ಹುಬ್ಬು ಕುಂಚಿತವಾದವು. “ಪ್ರಶ್ನೆ ಅಸಭ್ಯ ಅಶ್ಲೀಲವಷ್ಟೇ ಅಲ್ಲ, ನಮ್ಮ ಮುಂದಿರುವ ವ್ಯವಹಾರಕ್ಕೆ ಯಾವ ವಿಧದಲ್ಲಿಯೂ ಸಂಬಂಧಿಸುವುದಿಲ್ಲ. ಇದನ್ನು ಸಾಕ್ಷಿಗೆ ಕೊಡಲು ನಿರಾಕರಿಸುತ್ತೇನೆ,” ಎಂದು ಮಂಚಣ ಹಲಿಗೆಯನ್ನು ಕ್ರಮಿತನಿಗೆ ಹಿಂತಿರುಗಿ ಕೊಟ್ಟನು.