ಈ ಪುಟವನ್ನು ಪರಿಶೀಲಿಸಲಾಗಿದೆ

ಮಾನವನು ದಾನವನಾದಾಗ

೨೩೫


ಪ್ರಶ್ನೋತ್ತರಗಳನ್ನು ಕೇಳಿ ಮಂಚಣ ರುದ್ರಭಟ್ಟರು ಅಚ್ಚರಿಗೊಂಡರು. “ಈಗ ನಮ್ಮ ಮುಂದಿರುವ ವರ್ಣಸಂಕರದ ವ್ಯವಹಾರಕ್ಕೂ ಈ ಘಟನೆಗಳಿಗೂ ಇರುವ ಸಂಬಂಧವೇನು ?” ಎಂದು ಮಂಚಣನು ಪ್ರಶ್ನಿಸಿದನು.

“ನಾನು ವಿಚಾರಣೆ ನಡೆಸುತ್ತಿರುವ ವರ್ಣಸಂಕರದ ವ್ಯಾಪ್ತಿ ತೀವ್ರತೆಗಳನ್ನು ತಿಳಿದುಕೊಳ್ಳಲು ಈ ಘಟನೆಗಳು ಸಹಾಯಕವಾಗುವುವು.”

-ಎಂದು ಹೇಳಿ ಕಮಿತನು ಪಾರ್ಶ್ವದ ಪೀಠದ ಮೇಲೆ ದಾಖಲೆಗಳ ನಡುವೆ ಇಟ್ಟಿದ್ದ ಚಿತ್ರವೊಂದನ್ನು ತೆಗೆದು ಶೀಲವಂತನಿಗೆ ಕೊಟ್ಟು, “ಇದು ನೀವು ಬರೆದ ಚಿತ್ರವೆ?” ಎಂದು ಕೇಳಿದನು.

ಶೀಲವಂತ ಚಿತ್ರವನ್ನು ನೋಡಿ ಸ್ತಂಭಿತನಾದನು. ಏಳು ವರ್ಷಗಳ ಹಿಂದೆ ತಾನು ಚಾಲುಕ್ಯ ಅರಮನೆಯಲ್ಲಿದ್ದಾಗ ಬರೆದ ಈ ಚಿತ್ರ ಕ್ರಮಿತನ ಕೈಗೆ ಬಂದದ್ದು ಹೇಗೆ ? ಎಂದು ಅವನು ಯೋಚಿಸುತ್ತಿದ್ದಂತೆ ಕ್ರಮಿತನು ಮುಂದುವರಿದು,

“ಇದರಲ್ಲಿ ನೀವು ನಗ್ನೆಯಾದ ಹೆಣ್ಣೊಬ್ಬಳ ಬೆನ್ನ ಕಡೆಯ ನಿಲುವನ್ನು ಚಿತ್ರಿಸಿರುವಿರಲ್ಲವೆ ? ಈ ಹೆಣ್ಣು ಯಾರು ? ಯಾವ ಸಂದರ್ಭದಲ್ಲಿ ನೀವು ಇದನ್ನು ಬರೆದಿರಿ?”

-ಎಂದು ಪ್ರಶ್ನಿಸಿದನು.

“ನಿಮ್ಮ ಮುಂದಿರುವ ವ್ಯವಹಾರಕ್ಕೂ ಈ ಚಿತ್ರಕ್ಕೂ ಯಾವ ಸಂಬಂಧವೂ ಇಲ್ಲ. ನಿಮ್ಮ ಪ್ರಶ್ನೆಗಳೀಗೆ ಉತ್ತರ ಕೊಡಲು ನಾನು ನಿರಾಕರಿಸುತ್ತೇನೆ.”

-ಚಿತ್ರದ ಬಗೆಗೆ ತನ್ನ ನಿಲುವೇನೆಂಬುದನ್ನು ನಿರ್ಧರಿಸಿಕೊಂಡು ಶೀಲವಂತ ದಿಟ್ಟತನದಿಂದ ಉತ್ತರ ಕೊಟ್ಟನು.

“ಚಿತ್ರಕ್ಕೂ ಈಗ ನಮ್ಮ ಮುಂದಿರುವ ವರ್ಣಸಂಕರ ವ್ಯವಹಾರಕ್ಕೂ ಇರುವ ಸಂಬಂಧ ಮುಂದೆ ನಿಮಗೆ ತಿಳಿಯುವುದು. ಈಗ ನನ್ನ ಪ್ರಶ್ನೆಗಳಿಗೆ ನೀವು ಉತ್ತರ ಕೊಡಲೇಬೇಕು. ಇಲ್ಲವೆ ಚಿತ್ರಹಿಂಸೆಯಿಂದ ಉತ್ತರ ಪಡೆಯುವ ಅಧಿಕಾರ ನ್ಯಾಯ ಪೀಠಕ್ಕಿರುತ್ತದೆ. ಅಧಿಕಾರವಾಣಿಯಿಂದ ಕ್ರಮಿತನು ಹೇಳಿದನು.

ಆಗಿನ ನ್ಯಾಯಾಲಯಗಳಲ್ಲಿ ಚಿತ್ರಹಿಂಸೆ ವಿಚಾರಣೆಯ ಅಂಗವಾಗಿತ್ತು. ಅದಕ್ಕೆ ಬೇಕಾದ ವಿಚಿತ್ರ ಉಪಕರಣಗಳೂ ಅವುಗಳ ಪ್ರಯೋಗದಲ್ಲಿ ಚತುರರಾದ ಕರ್ಮಚಾರಿ ಭಟರೂ ಯಾವಾಗಲೂ ಸಿದ್ದರಾಗಿರುತ್ತಿದ್ದರು.

ಶೀಲವಂತ ಬೆದರಿದನು. ಕೆಲವು ಕಣಗಳು ಯೋಚಿಸಿ, “ನಿಮ್ಮ ಪ್ರಶ್ನೆ ಸಮರ್ಪಕವಾಗಿ ಕಂಡರೆ ಉತ್ತರ ಹೇಳುತ್ತೇನೆ,” ಎಂದನು.

“ಆಗಬಹುದು. ಈ ಚಿತ್ರದ ಕೆಳಗಿನ ಮೂಲೆಯಲ್ಲಿ 'ಶೀಲ' ಎಂದು