ಈ ಪುಟವನ್ನು ಪರಿಶೀಲಿಸಲಾಗಿದೆ

ಮಾನವನು ದಾನವನಾದಾಗ

೨೪೭


ಬಿಜ್ಜಳನಿಗೆ ಮಂಗಳವೇಡೆಯಲ್ಲೇ ತಲಪಿತ್ತು. ಸಿಂಧನಾಡಿನ ರಾಚಮಲ್ಲನೊಡನೆ ಪ್ರತಾಪರುದ್ರನು ಸೇರಿದರೆ ದಕ್ಷಿಣದಲ್ಲಿ ದೊಡ್ಡ ಸೈನ್ಯವನ್ನೇ ಎದುರಿಸಬೇಕಾಗುವುದು. ಹಿಂದಿನಿಂದ ಕಲಚೂರ್ಯರ ಮೇಲೆ ಹಗೆ ಸಾಧಿಸುತ್ತಿರುವ ದೋರಸಮುದ್ರದ ಹೊಯ್ಸಳರು, ಗೋವೆಯ ಕದಂಬರು ಶತೃಗಳ ಕಡೆ ಸೇರುವರು. ಅಗ್ನಿ ಅಪಘಾತದಲ್ಲಿ ತನ್ನ ಸಹೋದರಿ ಕಾಮೇಶ್ವರಿ ಮಡಿದ ಸುದ್ದಿ ಕೇಳಿದಾಗ ಕರ್ಹಾಡದ ವಿಜಯಾರ್ಕನೂ ವಿರೋಧಿಯಾಗಬಹುದು. ಪಶ್ಚಿಮದಲ್ಲಿ ದೇವಗಿರಿಯ ಯಾದವರು ಆಗಲೇ ಪ್ರತಿಕಕ್ಷಿಗಳಾಗಿದ್ದಾರೆ. ದಕ್ಷಿಣ ಪೂರ್ವ ಪಶ್ಚಿಮ, ಈ ಮೂರು ದಿಕ್ಕುಗಳಿಂದ ಒಂದೇ ಕಾಲದಲ್ಲಿ ಆಕ್ರಮಣ ನಡೆದರೆ ಚಾಲುಕ್ಯ ರಾಜ್ಯದ ಅಸ್ತಿತ್ವವೇ ಸಂದೇಹಗ್ರಸ್ತವಾಗುವುದು. ಚಾಲುಕ್ಯರಾಜ್ಯವನ್ನು ಕಬಳಿಸಿ, ಕಲಚೂರ್ಯ ಪಭುತ್ವವನ್ನು ಸ್ಥಾಪಿಸಲು ತಾನು ಮಾಡಿದ ಶ್ರಮವೆಲ್ಲ, ಸೂರನ ಬೆಳಕಿನೆದುರು ಮುಂಜಾವಿನ ಮಂಜಿನಂತೆ ಒಂದೇ ಗಳಿಗೆಯಲ್ಲಿ ಕರಗಿ ಹೋಗುವುದು ಅಸಂಭವವಲ್ಲವೆಂದು ಬಿಜ್ಜಳನು ತಿಳಿದಿದ್ದನು.

ಈ ವಿಪತ್ಕಾರೀ ಆತಂಕವನ್ನು ಎದುರಿಸುವುದು ಹೇಗೆ ಎಂದು ಯೋಚಿಸುತ್ತ ಅವನು, ಕಲ್ಯಾಣಕ್ಕೆ ಹಿಂದಿರುಗಿದ ಆ ರಾತ್ರಿ, ಕಲಚೂರ್ಯ ಅರಮನೆಯ ವಿಶ್ರಾಂತಿ ಗೃಹದಲ್ಲಿ ಕುಳಿತಿದ್ದಾಗ ನಾರಣಕ್ರಮಿತನು ಅಲ್ಲಿಗೆ ಬಂದನು. ಬೀಸಣಿಗೆ ಪಾನಪಾತ್ರೆಗಳನ್ನು ಹಿಡಿದು ಸೇವೆಗಾಗಿ ನಿಂತಿದ್ದ ಪಡಿಯರತಿಯರು ರಾಜಪುರೋಹಿತನನ್ನು ಕಂಡು ಹಿಂದಕ್ಕೆ ಸರಿದರು.

“ನಮ್ಮ ಮಂತ್ರಾಲೋಚನೆ ಮುಗಿಯುವವರೆಗೆ ಯಾರನ್ನೂ ಒಳಗೆ ಬಿಡಲಾಗದು,” -ಎಂದು ದೂರದಲ್ಲಿ ಕೈಕಟ್ಟಿ ನಿಂತಿದ್ದ ಹೆಗ್ಗಡೆಗೆ ಆಜ್ಞೆ ಮಾಡಿ ಬಿಜ್ಜಳನು ಕ್ರಮಿತನಿಗೆ ಕುಳಿತುಕೊಳ್ಳುವಂತೆ ಹೇಳಿದನು.

ಬಿಜ್ಜಳನು ನಗರಕ್ಕೆ ಬಂದಾಗಿನಿಂದ ಸಮೀಪದಲ್ಲಿಯೇ ಇದ್ದರೂ ಒಡೆಯರನ್ನು ಏಕಾಂತದಲ್ಲಿ ನೋಡುವ ಅವಕಾಶ ಇದುವರೆಗೆ ರಾಜಪುರೋಹಿತನಿಗೂ ದೊರಕಿರಲಿಲ್ಲ. 'ಕಾಮೇಶ್ವರಿಯ ಮರಣದಿಂದ ಪ್ರಭುಗಳ ಮೇಲಾದ ಪರಿಣಾಮವೇನು? ಇನ್ನೂ ಅವರು ಉದ್ವಿಗ್ನರಾಗಿರುವರೆ?' ಎಂದು ಯೋಚಿಸುತ್ತ ಕ್ರಮಿತನು ಮೌನವಾಗಿ ಕುಳಿತಿದ್ದಂತೆ ಬಿಜ್ಜಳನು,

“ನ್ಯಾಯಪೀಠದ ವಿಚಾರಣೆ ಯಾವ ಘಟ್ಟದಲ್ಲಿದೆ? ನಾನು ಹೇಳಿದಂತೆ ಕಾರ್ಯ ನಡೆಸಿದಿರಾ ?” ಎಂದು ತಾನೇ ಪ್ರಶ್ನಿಸಿದನು.

ನ್ಯಾಯಪೀಠದ ಕಾರ್ಯಕಲಾಪಗಳನ್ನು ಕ್ರಮಿತನು ವಿವರಿಸುತ್ತಿದ್ದಂತೆ ಬಿಜ್ಜಳನ ಮುಖ ಗಂಭೀರವಾಯಿತು. ಹುಬ್ಬುಗಳು ಕುಂಚಿತವಾದವು. ಅಸಹನೆಯಿಂದ ಅವನು,