ಈ ಪುಟವನ್ನು ಪರಿಶೀಲಿಸಲಾಗಿದೆ

೨೬೦

ಕ್ರಾಂತಿ ಕಲ್ಯಾಣ


“ಬಿಜ್ಜಳರಾಯರ ಮಂತ್ರಿಗೆ ಮತಾಂತರದ ಸ್ವಾತಂತ್ರ್ಯವೂ ಇಲ್ಲವೆ?” ಎಂದು ನಿರಾಶೆಯಿಂದ ನುಡಿದನು.

“ಇದು ಕೇವಲ ಮತಾಂತರದ ವಿಚಾರವಲ್ಲ, ಮಂಚಣನವರೆ,” ಕ್ರಮಿತನು ಹೇಳಿದನು. “ಹರಳಯ್ಯ ಮಧುವರಸರಂತೆ ನೀವು ಪ್ರಕಟವಾಗಿ ಶರಣಧರ್ಮವನ್ನು ಸ್ವೀಕರಿಸಿದ್ದರೆ ಮುದಿತನದ ಅವಿವೇಕವೆಂದು ಪ್ರಭುಗಳು ಸುಮ್ಮನಿರುತ್ತಿದ್ದರು. ನೀವು ಅನುಸರಿಸಿದ ರಹಸ್ಯವಿಧಾನ ಸಂದೇಹಕ್ಕೆಡೆಕೊಟ್ಟಿದೆ. ಶರಣರು ಪ್ರಾರಂಭಿಸಿರುವ ಧರ್ಮವಿಧ್ವಂಸಕ ಆಂದೋಳನಕ್ಕೆ ನೀವೂ ಕಾರಣರೆಂದು ಪ್ರಭುಗಳು ತಿಳಿದಿದ್ದಾರೆ”.

ಕ್ರಮಿತನೊಡನೆ ವಾದ ಹೂಡುವುದರಿಂದ ಯಾವ ಪ್ರಯೋಜನವೂ ಇಲ್ಲವೆಂದು ಆಗ ಮಂಚಣನಿಗೆ ಅರಿವಾಯಿತು. “ನಾಳೆ ನಾನು ಪ್ರಭುಗಳನ್ನು ನೋಡಿ ಎಲ್ಲವನ್ನೂ ಅರಿಕೆ ಮಾಡಿಕೊಳ್ಳುತ್ತೇನೆ. ನನ್ನಿಂದ ಅಪರಾಧವಾಗಿದ್ದರೆ ಅವರು ಶಿಕ್ಷೆ ವಿಧಿಸಲಿ. ಈಗ ಈ ವಾದ ಮುಗಿಸಿದರೆ ಒಳ್ಳೆಯದು.” ಎಂದು ಅವನು ನಯವಾಗಿ ಹೇಳಿದನು.

ತೀರ್ಪನ್ನು ನಾನು ನಾಳೆಯೇ ಪ್ರಭುಗಳಿಗೆ ಕಳುಹಿಸುತ್ತೇನೆ. ಅವರ ಸಮ್ಮುಖದಲ್ಲಿಯೇ ನೀವು ಒಪ್ಪಿಗೆ ಕೊಡಬಹುದು,” -ಎಂದು ಹೇಳಿ ಕ್ರಮಿತನು ಬೀಳ್ಕೊಂಡನು.

ಆಮೇಲೆ ಮಂಚಣನು ಗರಬಡಿದವನಂತೆ ಬಹಳ ಹೊತ್ತು ನಿಶ್ಚಲವಾಗಿ ಕುಳಿತಿದ್ದನು. ಹಠಾತ್ತನೆ ತನ್ನ ಮೇಲೆ ಎರಗಿ ಬಂದಿದ್ದ ವಿಪತ್ತನ್ನು ಮರೆತು, ಬಾಳಿನ ಎಲ್ಲ ಪರಿಶ್ರಮ, ಎಲ್ಲ ಸಿದ್ಧಿಸಾಧನೆಗಳ ಪರಮಾರ್ಥ ವಿಫಲತೆಯ ಕಡೆಗೆ ಹರಿದಿತ್ತು ಅವನ ಚಿಂತೆ. ಅನುಭವಮಂಟಪದ ಶರಣರ ಮೈತ್ರಿಯಿಂದ ಅವನಲ್ಲಿ ಮೂಡಿದ್ದ ಶಾಂತಿಯೆದುರು, ವಿಪತ್ತಿನ ಭೀತಿ ತನ್ನ ತೀವ್ರತೆಯನ್ನು ಕಳೆದುಕೊಂಡಿತ್ತು.

ದೀಪಗಳಿಗೆ ಎಣ್ಣೆ ಹಾಕಿ ಸರಿಪಡಿಸಲು ಊಳಗಿತ್ತಿ ಒಳಗೆ ಬಂದಾಗ ಮಂಚಣನ ಚಿಂತೆ ಸರಿಯಿತು. ಕಾರ್ಯಕರ್ತನನ್ನು ಕರೆಯುವಂತೆ ಹೇಳಿ ಬರೆಯಲು ಕುಳಿತನು.

ಕಾರ್ಯಕರ್ತನು ಬರುವಷ್ಟರಲ್ಲಿ ಪತ್ರ ಮುಗಿದು ದಾರ ಸುತ್ತಿ ಸಿದ್ಧವಾಗಿತ್ತು. ಅದನ್ನು ಕಾರ್ಯಕರ್ತನಿಗೆ ಕೊಟ್ಟು ಮಂಚಣ, “ನಾಳಿನ ಮುಂಜಾವಿಗೆ ಈ ಪತ್ರವನ್ನು ಅನುಭವಮಂಟಪದ ಅತಿಥಿಶಾಲೆಯಲ್ಲಿರುವ ವೃದ್ಧ ಜಂಗಮ ಮಾಚಿದೇವರಿಗೆ ಕೊಡತಕ್ಕದ್ದು,” ಎಂದು ಹೇಳಿದನು.

“ಮಾಚಿದೇವ ಎಂದರೆ ಮಡಿವಾಳ ಮಾಚಯ್ಯನವರೇ ಅಲ್ಲವೇ?”
-ಕಾರ್ಯಕರ್ತನು ಸಂದೇಹದಿಂದ ಪ್ರಶ್ನಿಸಿದನು.