ಈ ಪುಟವನ್ನು ಪ್ರಕಟಿಸಲಾಗಿದೆ

೨೬೪

ಕ್ರಾಂತಿ ಕಲ್ಯಾಣ

ವರ್ಷಗಳಿಂದ ಬಸವಣ್ಣನವರು ಶರಣಧರ್ಮಕ್ಕೆ ಆಧಾರವಾದ ಅನೇಕ ಗ್ರಂಥಗಳನ್ನು ಪ್ರಯಾಸದಿಂದ ಸಂಗ್ರಹಿಸಿದ್ದಾರೆ. ಅದಕ್ಕಾಗಿ ಅವರೊಂದು ಸಾರಿ ಗುಪ್ತ ವೇಷದಿಂದ ಕಾಶ್ಮೀರಕ್ಕೆ ಹೋಗಬೇಕಾಯಿತು. ಶೈವಾಗಮಗಳು, ಪುರಾತನ ವಚನಗಳು ಅನುಭವಮಂಟಪದಲ್ಲಿ ಅಂದಂದಿಗೆ ನಡೆದ ಅನುಭಾವ ಗೋಷ್ಠಿಯ ವರದಿಗಳು, ಧರ್ಮ ಸಾಹಿತ್ಯಗಳ ಬಗೆಗೆ ಶರಣರಿಂದ ರಚಿತವಾದ ಪ್ರಬಂಧಗಳು, ಈ ಸಂಗ್ರಹದಲ್ಲಿ ಸೇರಿರುತ್ತವೆ. ಮಹಮನೆಯ ಸರಸ್ವತೀ ಭಂಡಾರದಲ್ಲಿರುವ ಈ ಸಾಹಿತ್ಯ ಸಂಗ್ರಹವೇ ಶರಣಧರ್ಮದ ಜೀವಾಳ, ಅಸ್ತಿತ್ವದ ಅಡಿಗಲ್ಲು. ಕಲ್ಯಾಣ ಕ್ರಾಂತಿಯ ದಳ್ಳುರಿಯಲ್ಲಿ ಈ ಗ್ರಂಥ ಭಂಡಾರ ನಾಶವಾಗದಂತೆ ನೋಡಿಕೊಳ್ಳುವುದು ಈಗ ನಮ್ಮ ಮುಖ್ಯ ಹೊಣೆ. ಜನಸ್ಥಾನದಿಂದ ದೂರವಾದ ಯಾವುದಾದರೊಂದು ದುರ್ಗಮ ಸ್ಥಳದಲ್ಲಿ ಈ ಗ್ರಂಥ ಭಂಡಾರವನ್ನು ಜೋಪಾನಗೊಳಿಸುವುದು ಮೊದಲಿಂದ ಬಸವಣ್ಣನವರ ಉದ್ದೇಶವಾಗಿತ್ತು. ಅದಕ್ಕಾಗಿ ಅವರು ಬನವಾಸಿ ನಾಡಿನಲ್ಲಿ, ಸಹ್ಯಾದ್ರಿಶೃಂಗಗಳ ನಡುವೆ, ಒಂದು ಸ್ಥಾನದಲ್ಲಿ ಆಶ್ರಮ ಮಹಮನೆಗಳನ್ನು ರಚಿಸಿದರು. ಗ್ರಂಥ ಭಂಡಾರವನ್ನು ಆ ಸ್ಥಳಕ್ಕೆ ಸಾಗಿಸಿ ಪ್ರಕೃತಿರಮ್ಯವಾದ ನಿರ್ಜನಾರಣ್ಯದಲ್ಲಿ, ಮಾನವನ ಆಸೆ ಆಕಾಂಕ್ಷೆ, ಸ್ಪರ್ಧೆ ಹೋರಾಟ, ಕ್ರೌರ್ಯ ಹಿಂಸೆಗಳಿಂದ ದೂರವಾಗಿ ಆಶ್ರಮವಾಸದಲ್ಲಿ ತಮ್ಮ ಕೊನೆಯ ದಿನಗಳನ್ನು ಕಳೆಯಲು ಬಸವಣ್ಣನವರು ಯೋಚಿಸಿದ್ದರು. ಅವರ ಆ ಉದ್ದೇಶವನ್ನು ಕಾರ್ಯಗತವಾಗಿ ಮಾಡಲು ನಾನು ನಿರ್ಧರಿಸಿದ್ದೇನೆ. ನನ್ನ ಜೀವಿತ ಕಾಲವೆಲ್ಲವನ್ನೂ ಅನುಭಾವಿ ಶರಣರ ಸಹವಾಸದಲ್ಲಿ ಆಶ್ರಮವಾಸಿಯಾಗಿ ಕಳೆಯುವುದು ನನ್ನ ಪರಮೋದ್ದೇಶ. ಚಾಲುಕ್ಯ ರಾಜ್ಯದಲ್ಲಿ ಬಸವಣ್ಣನವರು ಹಚ್ಚಿದ ಧಾರ್ಮಿಕ ಪುನರುಜ್ಜೀವನದ ನಂದಾದೀಪ, ಬಸವಣ್ಣನವರು ಹರಿಯಿಸಿದ ನವಜಾಗ್ರತಿಯ ಮಹಾಪೂರ, ರಾಜ್ಯಕ್ರಾಂತಿಯ ಪಳಯದಲ್ಲಿ ಕೊಚ್ಚಿಹೋಗದಿರಬೇಕಾದರೆ ನಮಗಿರುವ ಉಳಿವೆಯ ಮಾರ್ಗ ಇದೊಂದೇ ಎಂದು ನಾನು ದೃಢವಾಗಿ ನಂಬಿದ್ದೇನೆ. ಕಲ್ಯಾಣದಲ್ಲಿ ಶರಣರ ಮಣಿಹ ಮುಗಿಯಿತು. ಕ್ರಾಂತಿಯ ಕಿಚ್ಚು ಹರಡುವ ಮುನ್ನ ನಾವು ಕಲ್ಯಾಣವನ್ನು ಬಿಡಬೇಕೆಂದು ಶರಣರಲ್ಲಿ ನನ್ನ ಬಿನ್ನಹ."

ಭಾವಾವೇಶದಿಂದ ಚೆನ್ನಬಸವಣ್ಣನವರು ತಮ್ಮನ್ನು ತಾವೇ ಮರೆತರು. ಕಂಠ ಗದ್ಗದಿತವಾಯಿತು. ದೂರದ ಯಾವುದೋ ಅಜ್ಞಾತ ಅಪರಿಚಿತ ಅಗೋಚರ ಬಯಲೊಂದು ಕಣ್ಣೆದುರಿಗೆ ನಿಂತಂತೆ ದೃಷ್ಟಿ ಸ್ಥಿರವಾಯಿತು. ಭಾವಪಾರವಶ್ಯದ ಈ ಅಪೂರ್ವ ದರ್ಶನವನ್ನು ಕಂಡು ಸಕಲೇಶ ಮಾದರಸರು, ಮಾಚಿದೇವರು ವಿಚಲಿತರಾಗಿ ಚೆನ್ನಬಸವಣ್ಣನವರ ಮುಖವನ್ನು ನೋಡುತ್ತಾ ಸುಮ್ಮನೆ ಕುಳಿತರು.