ಈ ಪುಟವನ್ನು ಪ್ರಕಟಿಸಲಾಗಿದೆ

ಮಾನವನು ದಾನವನಾದಾಗ

೨೬೭

ಮಂಚಣನಾಯಕನ ಅನಿರೀಕ್ಷಿತ ಮೃತ್ಯು, ಆಪಾದಿತ ಶರಣರ ಪರವಾಗಿ ಕಲ್ಯಾಣದ ನಾಗರಿಕರು ಒಪ್ಪಿಸಿದ ಕ್ಷಮಾಯಾಚನೆಯ ಮನವಿ ಪತ್ರ ಬಿಜ್ಜಳನ ಸೈನ್ಯದ ಮುಖ್ಯಭಾಗ ಮಂಗಳವೇಡೆಯಿಂದ ಕಲ್ಯಾಣಕ್ಕೆ ಹಿಂತಿರುಗಲು ತಡವಾದದ್ದು, ಈ ಕಾರಣಗಳಿಂದ ಮರಣದಂಡನೆಯ ಆಜ್ಞೆಯಥಾಕಾಲದಲ್ಲಿ ಪ್ರಕಟವಾಗಲಿಲ್ಲ.

ಮಂತ್ರಿಮಂಡಲದಲ್ಲಿ ಹಿರಿಯನೂ, ವಯೋವೃದ್ಧನೂ ಆಗಿದ್ದ ಮಂಚಣ ನಾಯಕನ ಒಪ್ಪಿಗೆ ಪಡೆಯುವುದರಿಂದ ನ್ಯಾಯಪೀಠದ ತೀರ್ಪು ಜನಪ್ರಿಯವಾಗುವುದೆಂದು ಬಿಜ್ಜಳನು ಭಾವಿಸಿದ್ದನು. ಒಪ್ಪಿಗೆ ಕೊಡುವ ಮುನ್ನ, ಸಂದೇಹಾಸ್ಪದವಾದ ರೀತಿಯಲ್ಲಿ ಮಂಚಣನು ಮೃತನಾದ ಸುದ್ದಿ ಕೇಳಿ ಬಿಜ್ಜಳನು ಚಡಪಡಿಸಿದನು. ಲಜ್ಜೆಯಿಂದ ತಲೆಬಾಗಿ ಪ್ರಭುವಿನ ಬಿರುನುಡಿಗಳನ್ನು ಕೇಳಬೇಕಾದ ಪರಿಸ್ಥಿತಿಯುಂಟಾಗಿ ಕ್ರಮಿತನು ಕೊರಗಬೇಕಾಯಿತು. ಮರುದಿನ ಚೆನ್ನಬಸವಣ್ಣನವರ ನೇತೃತ್ವದಲ್ಲಿ ಕಲ್ಯಾಣದ ಪ್ರಮುಖ ಶರಣರು, ನಾಗರಿಕರು ಆಪಾದಿತರ ಪರವಾಗಿ ಕ್ಷಮಾಯಾಚನೆಯ ಮನವಿಪತ್ರವನ್ನು ಸಲ್ಲಿಸಿದಾಗ ಕ್ರಮಿತನು ಪುನಃ ತಲೆಬಾಗಿದನು.

ನಿಯೋಗದ ಬಿನ್ನಪವನ್ನು ಕೇಳಿದ ಮೇಲೆ ಬಿಜ್ಜಳನು ರಾಜಕೀಯ ಚತುರತೆಯಿಂದ, "ನ್ಯಾಯಪೀಠದ ತೀರ್ಪು ನಮಗಿನ್ನೂ ತಲುಪಿರುವುದಿಲ್ಲ. ಬಂದಮೇಲೆ ನಿಮ್ಮ ಮನವಿಪತ್ರವನ್ನು ಪರಿಶೀಲಿಸಿ ಆಜ್ಞೆಮಾಡುತ್ತೇವೆ," ಎಂದು ಹೇಳಿ ಸಂದರ್ಶನ ಮುಗಿಸಿದನು. ನಿಯೋಗ ಸಭಾಗೃಹದಿಂದ ನಿರ್ಗಮಿಸಿದ ಮೇಲೆ ಕ್ರಮಿತನ ಕಡೆ ತಿರುಗಿ ಅವನು, "ಮುಗಿಯಿತೇ ನಿಮ್ಮ ವರ್ಣಸಂಕರದ ನಾಟಕ! ಈ ಹುಚ್ಚಾಟವನ್ನು ಪ್ರಾರಂಭಿಸಿದವರು ನೀವು. ಈಗ ಅದರ ಬಿಸಿ ನಮ್ಮನ್ನು ಸುಡುತ್ತಿದೆ." ಎಂದು ಕಟಕಿಯಾಡಿದನು.

ಕ್ರಮಿತನು ನಡುಗಿದನು. ವರ್ಣಸಂಕರದ ವ್ಯವಹಾರ ಅವನಿಗೆ ಜೀವನ ಮರಣಗಳ ಪ್ರಶ್ನೆಯಾಗಿತ್ತು. ರಾಜಪುರೋಹಿತನಿಗೆ ಸಹಜವಾದ ಉದ್ಧಟತನದಿಂದ ಅವನು, "ಚೆನ್ನಬಸವಣ್ಣನವರ ಕಾರ್ಯಚತುರತೆ ಪ್ರಭುಗಳನ್ನು ವಂಚಿಸಿದಂತಿದೆ. ಒಬ್ಬಿಬ್ಬರ ಹೊರತಾಗಿ ನಿಯೋಗದಲ್ಲಿದ್ದವರೆಲ್ಲ ಶರಣರೆಂಬುದನ್ನು ನೀವು ಗಮನಿಸಲಿಲ್ಲವೆ? ನಿಯೋಗದಲ್ಲಿದ್ದವರ ಪಟ್ಟಿ ನನ್ನಲ್ಲಿದೆ, ಅದು ಕಲ್ಯಾಣದ ನಾಗರಿಕರನ್ನು ಪ್ರತಿನಿಧಿಸುವುದಿಲ್ಲ," ಎಂದು ಹೇಳಿ ಪತ್ರವನ್ನು ಬಿಜ್ಜಳನ ಮುಂದಿಟ್ಟನು.

"ನಿಯೋಗವು ನಾಗರಿಕರನ್ನು ಪ್ರತಿನಿಧಿಸುವುದೇ ಇಲ್ಲವೇ ಎಂಬುದನ್ನು ನಾವು ಕೊನೆಗೆ ನಿರ್ಧರಿಸಬಹುದು. ಮನವಿ ಪತ್ರಕ್ಕೆ ನಮ್ಮ ಉತ್ತರವೇನು.?"

ಪಟ್ಟಿಯನ್ನು ನೋಡಿ ಬಿಜ್ಜಳನು ಪ್ರಶ್ನಿಸಿದನು.

"ಕ್ರಮಿತನು ಕುಹಕದ ನಗೆಬೀರಿ, "ಉತ್ತರವೇನೆಂಬುದನ್ನು ನೀವಾಗಲೇ