ಈ ಪುಟವನ್ನು ಪರಿಶೀಲಿಸಲಾಗಿದೆ

೨೭೪

ಕ್ರಾಂತಿ ಕಲ್ಯಾಣ

ಪುನಃ ಪಡೆಯಲು ಪ್ರಯತ್ನಿಸಿದಾಗ ಮೇಲಿನ ಎರಡು ಸಂಸ್ಥೆಗಳು ಅವನಿಗೆ ಎಲ್ಲ ವಿಧದಲ್ಲಿಯೂ ಸಹಾಯ ಮಾಡಿದವು.”

ಸನ್ಯಾಸಿಯ ನುಡಿಗಳನ್ನು ಕುತೂಹಲದಿಂದ ಕೇಳುತ್ತಿದ್ದ ಬಿಜ್ಜಳನು ಮಧ್ಯೆಬಂದು, “ಈ ಐತಿಹಾಸಿಕ ಘಟನೆಗಳಿಗೂ ನಿಮ್ಮ ಪರಿಚಯಕ್ಕೂ ಇರುವ ಸಂಬಂಧವೇನು?” ಎಂದು ಕೇಳಿದನು.

“ನಾನು ಆ ವಿಚಾರಕ್ಕೆ ಬರುತ್ತಿದ್ದೇನೆ, ಸರ್ವಾಧಿಕಾರಿಗಳೆ,” ಸನ್ಯಾಸಿ ಉತ್ತರಕೊಟ್ಟನು. "ಚಾಲುಕ್ಯ ರಾಜ್ಯದ ಆರ್ಥಿಕ ಭದ್ರತೆ ಈಗ ವೀರಬಣಂಜು ಸಂಘದ ಕಾರ್ಯಚಟುವಟಿಕೆಗಳನ್ನು ಅವಲಂಬಿಸಿದೆ. ಸಾಮಂತ ಅಧಿಕಾರಿಗಳಂತೆ ಸಾಮಾನ್ಯ ಜನರೂ ಇದನ್ನು ತಿಳಿದಿದ್ದಾರೆ. ಆದರೆ ವೀರಬಣಂಜು ಸಂಘದ ಮಾತೃಸಂಸ್ಥೆಯಾದ ಐಯಾವಳೆಯ ಐನೂರ್ವರು ಸ್ವಾಮಿಗಳ ಮಹಾಸಂಘದ ವಿಚಾರ ಯಾರಿಗೂ ತಿಳಿಯದು. ಈ ವಿಚಿತ್ರ ಪರಿಸ್ಥಿತಿಯ ಕಾರಣವೇನು ಎಂಬುದನ್ನು ನೀವು ಯಾವಾಗಲಾದರೂ ಯೋಚಿಸಿದ್ದೀರಾ ?”

“ಈ ಸಂದೇಹ ಪರಿಹಾರಕ್ಕಾಗಿ ಚಿದ್ಘನ ಶಿವಾಚಾರ್ಯರು ನಿಮ್ಮನ್ನು ನನ್ನ ಬಳಿಗೆ ಕಳುಹಿಸಿದರೆ?” ಬಿಜ್ಜಳನು ನಸುನಕ್ಕು ನುಡಿದನು. “ರಾಷ್ಟ್ರಕೂಟದ ಕನ್ನರದೇವನು ಐನೂರ್ವರು ಸ್ವಾಮಿಗಳ ಮಹಾಸಂಘವನ್ನು ಶಾಸನಬಾಹಿರವೆಂದು ಘೋಷಿಸಿದನು. ಅನಂತರ ಕೆಲವು ವರ್ಷಗಳು ಅದು ರಹಸ್ಯವಾಗಿ ಕಾರ್ಯಾಚರಣೆ ನಡೆಸುತ್ತಿದ್ದು ಅನಂತರ ನಾಮಾವಶೇಷವಾಯಿತು. ಈಗ ಅದು ಅಸ್ತಿತ್ವದಲ್ಲಿಲ್ಲ.”

ಇದುವರೆಗೆ ಸರಳತೆಯ ಮೃದುಕಂಠದಿಂದ ಮಾತಾಡುತ್ತಿದ್ದ ಸನ್ಯಾಸಿ ಹಠಾತ್ತನೆ ದನಿ ಹೆಚ್ಚಿಸಿ, “ಈ ನಿಮ್ಮ ತಪ್ಪು ತಿಳುವಳಿಕೆಯೇ ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ಅನರ್ಥ ಅತ್ಯಾಚಾರಗಳ ಕಾರಣ. ಐನೂರ್ವರ ಮಹಾಸಂಘ ಈಗಲೂ ಅಸ್ತಿತ್ವದಲ್ಲಿದೆ. ಪ್ರಚಾರ ಪ್ರಕಟನೆಗಳಿಲ್ಲದೆ ರಹಸ್ಯವಾಗಿ ಕಾರ್ಯ ನಡೆಸುತ್ತಿರುವುದರಿಂದ ಅದರ ವಿಚಾರ ಯಾರಿಗೂ ತಿಳಿಯದು. ಇಂಗಿತ ಮಾತ್ರದಿಂದ ರಾಜ್ಯಾದ್ಯಂತ ಅಶಾಂತಿ ಅಂತಃಕಲಹಗಳನ್ನು ಪ್ರಾರಂಭಿಸಿ ನಿಮ್ಮ ರಾಜ್ಯಾಪಹಾರಕ ಸರ್ವಾಧಿಕಾರಿ ಆಡಳಿತವನ್ನು ಕ್ಷಣಾರ್ಧದಲ್ಲಿ ಧ್ವಂಸ ಮಾಡುವ ಶಕ್ತಿ ಆ ಮಹಾಸಂಸ್ಥೆಗಿರುತ್ತದೆ. ನಿಮಗೆ ಸಕಾಲದಲ್ಲಿ ಎಚ್ಚರಿಕೆ ಕೊಡುವ ಪರಮೋದ್ದೇಶದಿಂದ ನಾನಿಲ್ಲಿಗೆ ಬಂದಿದ್ದೇನೆ.” ಎಂದು ಗಂಭೀರವಾಗಿ ನುಡಿದನು.

ಬಿಜ್ಜಳನು ಚಡಪಡಿಸಿ ಭದ್ರಾಸನದಿಂದದ್ದನು. ಕಣ್ಣಗಳು ಕೆಂಪೇರಿ ಕಿಡಿಯುಗುಳಿದವು. ಕರ್ಕಶಕಂಠದಿಂದ ಅವನು, “ವೇಷಧಾರಿ ಕ್ರಾಂತಿಕಾರನು ನೀನು ! ನನ್ನ ಶತೃಗಳು ಯಾವುದೋ ದುರುದ್ದೇಶದಿಂದ ನಿನ್ನಲ್ಲಿಗೆ ಕಳುಹಿಸಿರಬೇಕು.